
ಕಿರು ಹಣಕಾಸು ಸಂಸ್ಥೆಗಳು ಆರ್ಬಿಐನ ಕಾನೂನುಗಳನ್ನು ಪಾಲನೆ ಮಾಡುತ್ತಿಲ್ಲ. ಸಂಸ್ಥೆಗಳು ಕಾನೂನು ಪ್ರಕಾರ ಸಾಲ ನೀಡುವಿಕೆ ಮತ್ತು ವಸೂಲಾತಿ ನಡೆಯುತ್ತಿದ್ದರೆ ನೀವು ಋಣಮುಕ್ತರಾಗುವುದಿಲ್ಲ. ಬದಲಾಗಿ ಕೇಂದ್ರ ಸರಕಾರ ಮತ್ತು ನಬಾರ್ಡ್ಗಳಿಂದ ಕಡಿಮೆ ಬಡ್ಡಿಯಲ್ಲಿ ಸಾಲ ಪಡೆಯುವ ದೇಶದ ಕಾನೂನು ಚೌಕಟ್ಟುಗಳನ್ನು ಮೀರಿ ಕಿರು ಹಣಕಾಸು ಸಂಸ್ಥೆಗಳು ಕಾನೂನುಗಳನ್ನು ಗಾಳಿಗೆ ತೂರಿ ಸಾಲಗಾರರಿಗೆ ಕಿರುಕುಳಗಳನ್ನು ನೀಡಿ ದೇಶಕ್ಕೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದೆ ಎಂದು ಸಿಐಟಿಯು ಜಿಲ್ಲಾ ಮುಖಂಡ ಬಿ.ಎಂ.ಭಟ್ ಹೇಳಿದರು. ಅವರು ಸುಳ್ಯದ ಯುವಜನ ಸಂಯುಕ್ತ ಮಂಡಳಿಯಲ್ಲಿ ಋಣಮುಕ್ತ ಹೋರಾಟ ಸಮಿತಿಯ ಆಶ್ರಯದಲ್ಲಿ ನಡೆದ ಕಿರು ಹಣಕಾಸು ಸಂಸ್ಥೆಗಳ ಸಾಲಗಾರ ಸದಸ್ಯರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಸಮಾವೇಶದ ಅಧ್ಯಕ್ಷತೆ ವಹಿಸಿದ ಋಣಮುಕ್ತ ಹೋರಾಟ ಸಮಿತಿಯ ಮುಖಂಡ ಎಂ.ಬಿ.ಸದಾಶಿವ ಮಾತನಾಡಿ ಕಿರು ಸಂಸ್ಥೆಗಳಿಂದ ಸಾಲ ಪಡೆದ ಹಲವು ಕುಟುಂಬಗಳ ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ. ಸಾಲ ನೀಡುವ ಮೂಲಕ ಅಭಿವೃದ್ದಿ ಆಗಬೇಕು. ಆದರೆ ಕಿರು ಹಣಕಾಸು ಸಂಸ್ಥೆಗಳು ಕಿರಾತಕರಾಗಿ ವರ್ತನೆ ಮಾಡಿ ಮನೆಗಳಿಗೆ ಬಂದು ಮಾನಸಿಕ ಕಿರುಕುಳ, ಹಿಂಸೆ ನೀಡುವ ಹೀನ ಮಟ್ಟಕ್ಕೆ ಇಳಿದು ಶೋಷಣೆ ಮಾಡುತ್ತಿದ್ದಾರೆ ಎಂದು ಆಗ್ರಹಿಸಿದರು.
ಸಮಾವೇಶದಲ್ಲಿ ಕಿರು ಹಣಕಾಸು ಸಂಸ್ಥೆಗಳ ಸಾಲಮನ್ನಾ ಕುರಿತು ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಮಾವೇಶದಲ್ಲಿ ಹಲವು ಸಾಲಗಾರ ಮಹಿಳೆಯರು ಕಿರು ಹಣಕಾಸು ಸಂಸ್ಥೆಗಳು ಮನೆಗೆ ಬಂದು ನೀಡುತ್ತಿರುವ ಕಿರುಕುಳಗಳ ಬಗ್ಗೆ ವೇದಿಕೆಯಲ್ಲಿ ಅಳಲು ತೋಡಿಕೊಂಡರು. ಸಮಾವೇಶದಲ್ಲಿ ಎ.ಎ.ಪಿಯ ಅಶೋಕ್ ಎಡಮಲೆ, ದಲಿತ ಸಂಘರ್ಷ ಸಮಿತಿಯ ಆನಂದ ಬೆಳ್ಳಾರೆ, ರೈತ ಸಂಘದ ಸಚಿನ್ರಾಜ್ ಶೆಟ್ಟಿ ಪೆರುವಾಜೆ, ಸಾಮಾಜಿಕ ಕಾರ್ಯಕರ್ತ ಶಾರೀಕ್ ಡಿ.ಎಂ, ಮಹಾಬಲ ರೈ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.