Header Ads
Header Ads
Breaking News

ಸುಳ್ಯದಲ್ಲಿ ತಾಲೂಕು ಮಟ್ಟದ ಜನಸಂಪರ್ಕ ಸಭೆ

ಸರಕಾರದ ವಿವಿಧ ಸವಲತ್ತುಗಳಿಗೆ ಯಾರು ಕೂಡ ವಂಚಿತರಾಗಬಾರದು ಎನ್ನುವ ದೃಷ್ಟಿಯಿಂದ ಸಂಧ್ಯಾ ಸುರಕ್ಷ, ಅಂಗವಿಕಲರು, ವೃದ್ದರುಗಳ ಗುರುತಿಸಲು ಅಂಗನವಾಡಿ ಕೇಂದ್ರಗಳ ಮಟ್ಟದಲ್ಲಿ ಸರ್ವೇಯನ್ನು ನಡೆಸಲಾಗುವುದು. ಸರಕಾರದ ಪ್ರತಿಯೊಂದು ಸವಲತ್ತುಗಳು ಹಳ್ಳಿಯ ಪ್ರತಿಯೊಬ್ಬ ಫಲಾನುಭವಿಗಳಿಗೆ ಸಿಗಬೇಕು ಎನ್ನುವ ದೃಷ್ಟಿಯಿಂದ ಸರ್ವೇ ನಡೆಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸೂಚಿಸಿದರು.ಸುಳ್ಯದ ಕೆ.ವಿ.ಜಿ. ಪುರಭವನದಲ್ಲಿ ನಡೆದ ತಾಲೂಕು ಮಟ್ಟದ ಜನ ಸಂಪರ್ಕ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. ಆಧಾರ್ ಕೇಂದ್ರಗಳಲ್ಲಿ ಜನ ದಟ್ಟನೆಯಿಂದ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಮಟ್ಟದ ಕೇಂದ್ರಗಳಲ್ಲಿ ಕಂಪ್ಯೂಟರ್ ಹೆಚ್ಚಿಸಲು ಮತ್ತು ಹೋಬಳಿ ಮತ್ತು ಗ್ರಾಮೀಣ ಮಟ್ಟದಲ್ಲೂ ಆಧಾರ್ ಕೇಂದ್ರಗಳನ್ನು ತೆರೆಯಲು ಅಧಿಕಾರಿಗಳಿಗೆ ಸೂಚಿಸಿದ ಅವರು ಆಧಾರ್ ಕೇಂದ್ರಗಳಲ್ಲಿ ಈಗ ದಿನಕ್ಕೆ20 ಮಂದಿಗೆ ಮಾತ್ರ ಅವಕಾಶವಿದೆ. ಈ ನಿಟ್ಟಿನಲ್ಲಿ ಇಲ್ಲಿ ಕಂಪ್ಯೂಟರ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಜತೆಗೆ ಎಲ್ಲ ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲೂ ಆಧಾರ್ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಹೇಳಿದ ಅವರು, “ಬಯೋ ಮೆಟ್ರಿಕ್ ವ್ಯವಸ್ಥೆ ಸರಿ ಇಲ್ಲದಿದ್ದರೆ ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಹೇಳಿದರು.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಸ್.ಅಂಗಾರ, “ಸರಕಾರದ ಯೋಜನೆಯನ್ನು ಜಾರಿಗೆ ತರುವಾಗ ಅಧಿಕಾರಿ ಮಟ್ಟದಲ್ಲಿ ನಿಧಾನಗತಿ ಮತ್ತು ತಾರತಮ್ಯ ಧೋರಣೆಯಿಂದ ಸಮಸ್ಯೆಯಾಗುತ್ತದೆ ಎಂದು ಹೇಳಿದರಲ್ಲದೆ, ಸುಳ್ಯ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಪರಿಹಾರವಾಗಿ ವೆಂಟೆಡ್ ಡ್ಯಾಮ್ ತೆರೆಯುವಂತೆ ಹಾಗೂ 110 ಕೆ.ವಿ. ಸಬ್ ಸ್ಟೇಶನ್ ಅನುಷ್ಠಾನಕ್ಕೆ ಅಡ್ಡಿಯಾಗಿರುವ ಅರಣ್ಯ ಇಲಾಖೆ ಅನುಮತಿಯನ್ನು ತಕ್ಷಣ ದೊರಕಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತಲ್ಲದೆ, ಜನರಿಂದ ಸಚಿವರು ಅಹವಾಲುಗಳನ್ನು ಸ್ವೀಕರಿಸಿದರು.
ಪುತ್ತೂರು ಸಹಾಯಕ ಕಮಿಷನರ್ ಕೃಷ್ಣಮೂರ್ತಿ, ಸುಳ್ಯ ತಹಶೀಲ್ದಾರ್ ಕುಂಞಿ ಅಹಮ್ಮದ್, ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ, ಉಪಾಧ್ಯಕ್ಷೆ ಹರಿಣಾಕ್ಷಿ ನಾರಾಯಣ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ, ಎ.ಪಿ.ಎಂ.ಸಿ. ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ವಕ್ಫ್ ಕೌನ್ಸಿಲ್ ನಿರ್ದೇಶಕ ಎಸ್.ಸಂಶುದ್ದೀನ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *