Header Ads
Breaking News

ಸುಳ್ಯದಲ್ಲಿ ಮಳೆಕೊಯ್ಲು ಮಾಹಿತಿ ಕಾರ್ಯಕ್ರಮ

ಅತಿ ಹೆಚ್ಚು ಮಳೆ ಬೀಳುವ ಸುಳ್ಯ, ಪುತ್ತೂರಿನಂತಹ ಪ್ರದೇಶದಲ್ಲೇ ಕೆರೆ, ಹಳ್ಳಗಳು ಜೂನ್ ತಿಂಗಳು ಕಳೆದರೂ ಬರಿದಾಗಿದೆ. ಇದು ನಮಗೆ ಆತಂಕ ತರುವ ಸಂಗತಿ. ಮಳೆ ನೀರಿನ ರಕ್ಷಣೆಯೇ ಇದಕ್ಕೆ ಪರಿಹಾರ. ಈ ನಿಟ್ಟಿನಲ್ಲಿ ಮಳೆ ಕೊಯ್ಲು ಜಾಗೃತಿ ಕಾರ್ಯಕ್ರಮ ಆಗಲೇ ಬೇಕು ಎಂದು ಪುತ್ತೂರು ಸಹಾಯಕ ಕಮಿಷನರ್ ಕೃಷ್ಣಮೂರ್ತಿ ಹೇಳಿದರು.

ಅವರು ಸುಳ್ಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ಸುಳ್ಯ ಮತ್ತು ತಾಲೂಕು ಆಡಳಿತ ಹಾಗೂ ಸುದ್ದಿ ಮಾಹಿತಿ ಟ್ರಸ್ಟ್ ಸಹಯೋಗದೊಂದಿಗೆ ನಡೆದ ಮಳೆಕೊಯ್ಲು ಮಾಹಿತಿ ಕಾರ್ಯಗಾರ ಮತ್ತು ಮಳೆಕೊಯ್ಲು ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ಅತೀ ಹೆಚ್ಚು ಮಳೆ ಬೀಳುವ ಈ ಪ್ರದೇಶದಲ್ಲಿ ಇದೇ ಸ್ಥಿತಿ ಮುಂದುವರಿದರೆ ಮುಂದೆ ಏನಾಗಬಹುದು ಎಂದು ನಾವು ಇಂದೇ ಯೋಚಿಸಬೇಕಾಗಿದೆ. ನಮ್ಮ ಮಕ್ಕಳು, ಜನರು, ಉತ್ತಮ ಪರಿಸರ, ಸಸ್ಯ ಸಂಕುಲಗಳು ಚೆನ್ನಾಗಿ ಇರಬೇಕಾಗಿದೆ. ಹಾಗೆ ಇರಬೇಕಾದರೆ ನಾವು ಈಗಲೇ ಜಾಗೃತರಾಗಿ ನೀರನ್ನು ಉಳಿಸುವ ಕೆಲಸ ಮಾಡಬೇಕು. ನಾವು ಜಾಗೃತರಾಗದೇ ಸುಮ್ಮನೆ ಕುಳಿತರೆ ನಮ್ಮವರೇ ಮುಂದೆ ತೊಂದರೆ ಅನುಭವಿಸಬೇಕಾದೀತು. ನಾವು ಮಳೆ ನೀರು ಉಳಿಸೋದಿಲ್ಲ ಅಂತ ಸುಮ್ಮನೆ ಕುಳಿತರೆ ನಮ್ಮ ಕರ್ತವ್ಯ ನಾವು ಮರೆತಂತಾಗುತ್ತದೆ ಎಂದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ ಮಾತನಾಡಿ, ಮಳೆ ಕೊಯ್ಲು ಕಾರ್ಯಕ್ರಮ ಇಂದಿನ ಅನಿವಾರ್ಯವಾಗಿದೆ. ಪ್ರತಿ ವರ್ಷ ಈ ಸಮಯಕ್ಕೆ ಶೇ.60 ಮಳೆಯಾಗುತ್ತಿತ್ತು. ಆದರೆ ಈ ಬಾರಿ ಅಷ್ಟು ಮಳೆಯಾಗದೆ ಅಭಾವ ಎದುರಾಗಿದೆ. ಈ ಭಾಗದಲ್ಲಿ ಮಳೆ ಕಡಿಮೆ ಸುರಿಯುತ್ತಿರುವುದನ್ನು ನೋಡಿದಾಗ ನಾವು ಕರಾವಳಿಯಲ್ಲಿzವೆಯೋ ಎನ್ನುವ ಅನುಮಾನ ಮೂಡುತ್ತಿದೆ. ನಮ್ಮ ಸುತ್ತಮುತ್ತಲ ತೋಡುಗಳು ಬತ್ತಿಹೋಗಿವೆ. ಮಳೆ ಒಮ್ಮೆ ಸುರಿದರೆ ಆ ನೀರು ಕ್ಷಣ ಮಾತ್ರದಲ್ಲಿ ಆರಿ ಹೋಗುತ್ತಿದೆ. ಆದ್ದರಿಂದ ಮಳೆ ನೀರನ್ನು ಹಿಡಿದಿಡುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.
ಸುಳ್ಯ ತಾಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಾಹಣಾಧಿಕಾರಿ ಭವಾನಿಶಂಕರ್, ಸುಳ್ಯ ತಹಶೀಲ್ದಾರ್ ಕುಂಞಿ ಅಹಮ್ಮದ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಶುಭದಾ ರೈ
ಸುದ್ದಿ ಮಾಹಿತಿ ಟ್ರಸ್ಟ್‌ನ ಅಧ್ಯಕ್ಷ ಡಾ. ಯು.ಪಿ.ಶಿವಾನಂದ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *