Header Ads
Header Ads
Breaking News

ಸುಳ್ಯದ ಕೊಡಿಯಾಲಬೈಲಿನಲ್ಲಿ ರುದ್ರಭೂಮಿಗೆ ವಿಮುಕ್ತಿ ಉಬರಡ್ಕ ಗ್ರಾ.ಪಂ ಹಾಗೂ ಪ್ರಾಂತೀಯ ಲಯನ್ಸ್‌ನಿಂದ ನಿರ್ಮಾಣ ಸ್ಮಶನಾಧಿಪತಿ ಶಿವ, ಸತ್ಯಹರಿಶ್ಚಂದ್ರನ ಮೂರ್ತಿಗಳ ಆಕರ್ಷಣೆ ಉದ್ಘಾಟನೆಗೆ ಸಿದ್ಧಗೊಂಡ ರುದ್ರಭೂಮಿ

ರುದ್ರಭೂಮಿ ಅಂದಾಕ್ಷಣ ಕಣ್ಣಿಗೆ ಕಾಣುವ ಚಿತ್ರಣ ಭಯ ಮಿಶ್ರಿತ ಪರಿಸರ. ಮನುಷ್ಯ ಜೀವಂತವಿರುವಾಗಲೇ ಎಲ್ಲ. ಸತ್ತ ಮೇಲೆ ಏನಿಲ್ಲ’ ಇದು ಗಾದೆ ಮಾತು. ಸತ್ತ ಮೇಲೆ ಶವ ಸುಡುವ ಸ್ಮಶಾನದ ಕಲ್ಪನೆ ಹಿಂದೆ ಒಂದು ರೀತಿ ಇದ್ದರೆ ಇಂದು ಬೇರೆ ರೀತಿ. ಸ್ಮಶಾನವೂ ಸಕಲ ಸೌಕರ್ಯ ಹೊಂದಿರುವ ಉದ್ಯಾನವನವಾಗಿದ್ದರೆ ದುಖಃತಪ್ತ ಮನಸ್ಸಿಗೆ ಸಾಂತ್ವನ ಹೇಳುವಂತಹ ವಾತಾವರಣ. ಇಂತಹ ವಿಶಿಷ್ಠ ರೀತಿಯ ರಮನೀಯ ರುದ್ರಭೂಮಿ ಉದ್ಘಾಟನೆಗೆ ಸಜ್ಜುಗೊಂಡಿದೆ.ಕೊಡಿಯಾಲಬೈಲು ಸುಳ್ಯ ಮತ್ತು ಉಬರಡ್ಕ ಗ್ರಾಮಗಳ ಗಡಿಯಲ್ಲಿರುವ ಉಬರಡ್ಕ ಗ್ರಾಮಕ್ಕೆ ಸೇರಿದ ಪ್ರದೇಶ. ಸುಳ್ಯ ನಗರದಿಂದ ಎರಡು ಕಿ.ಮೀ ದೂರದಲ್ಲಿ 50 ಸೆಂಟ್ಸ್ ಜಾಗದಲ್ಲಿ ಸುಮಾರು 50ಲಕ್ಷ ವೆಚ್ಚದಲ್ಲಿ ವಿಮುಕ್ತಿ ಎಂಬ ಹೆಸರಿನಲ್ಲಿ ಹಲವು ವೈವಿಧ್ಯತೆಗಳಿಂದ ಕೂಡಿದ ಮುಕ್ತಿಧಾಮ ತಲೆಎತ್ತಿ ನಿಂತಿದೆ.
ಸಶ್ಮಾನ ಎಂದರೆ ಭಯದ ಮತ್ತು ದುಖಃದ ನೆರಳಿನ ಪ್ರದೇಶ. ಆದರೆ ಇಲ್ಲಿ ನಿರ್ಮಾಣ ಆಗಿರುವ ಸ್ಮಶಾನ ಪ್ರಕೃತಿಯ ಹಸಿರ ತೊಟ್ಟಿಲಿನ ನಡುವೆ ಎತ್ತರದ ಗುಡ್ಡದಲ್ಲಿ ಸುಂದರವಾಗಿ ರೂಪುಗೊಂಡಿದೆ. ಇಲ್ಲಿಗೆ ಆಗಮಿಸುವವರನ್ನು ಎದುರುಗೊಳ್ಳುವುದು ಕೃತಕ ಕಲ್ಲಿನ ಗುಡ್ಡದ ಮೇಲೆ ಸ್ಮಶಾನ ಕಾಯುವ ತಪೋ ಭಂಗಿಯಲ್ಲಿ ಕುಳಿತ ಲಯಕರ್ತನಾದ ಶಿವನ ಆರು ಅಡಿ ಎತ್ತರದ ಆಕರ್ಷಕ ವಿಗ್ರಹ. ವಿಗ್ರಹದ ಕೆಳಗೆ ಚಿಕ್ಕದಾದ ಕೃತಕ ಕೊಳ ಸೃಷ್ಟಿ ಮಾಡಲಾಗಿದೆ. ಅದರಲ್ಲಿ ತಾವರೆ, ಮೀನುಗಳು ಮತ್ತಿತ್ತರ ಜಲಚರಗಳು ನಲಿದಾಡುತ್ತಿದೆ. ಅಲ್ಲೇ ಸಮೀಪದಲ್ಲಿ ಪುರಾಣಗಳಲ್ಲಿ ಕಂಡುಬರುವ ಸ್ಮಶಾನ ಕೆಲಸಗಾರನ ದ್ಯೋತಕವಾದ ಸತ್ಯ ಹರಿಶ್ಚಂದ್ರನ ಆರು ಅಡಿ ಎತ್ತರದ ವಿಗ್ರಹ. ಸುತ್ತಲೂ ಹಸಿರು ಹುಲ್ಲು ಹಾಸು, ಸುಮಾರು ನಾಲ್ಕು ಸಾವಿರ ಚದರ ಅಡಿಯಷ್ಟು ಇಂಟರ್‌ಲಾಕ್ ಅಳವಡಿಸಿ ಸ್ಮಶಾನದ ಒಳಾಂಗಣ ಸುಂದರಗೊಳಿಸಲಾಗುತ್ತಿದೆ.

ಶವ ಸುಡಲು ಎರಡು ಸಿಲಿಕಾನ್ ಛೇಂಬರ್‌ಗಳು, ಬಂದವರಿಗೆ ಕರ್ಮ ನಿರ್ವಹಿಸಲು ಸ್ಥಳಾವಕಾಶ, ಕಟ್ಟಡ, ಕಚೇರಿ ಕಟ್ಟಡ, ಸಮುದಾಯ ಶೌಚಾಲಯ, ಸ್ನಾನಗೃಹ, ಸುತ್ತಲೂ ಆವರಣ ಗೋಡೆ, ಅದರೊಳಗಡೆ 14 ಅಡಿ ಅಗಲದ ಇಂಟರ್‌ಲಾಕ್ ಅಳವಡಿಸಿದ ರಸ್ತೆಗಳು, ಕೊಡಿಯಾಲಬೈಲು ವಿಷ್ಣುಮೂರ್ತಿ ದೈವಸ್ಥಾನದ ಬಳಿಯಿಂದ ಸ್ಮಶಾನದವರೆಗೆ 136 ಅಡಿ ಉದ್ದದ ಕಾಂಕ್ರೀಟ್ ರಸ್ತೆ, ಸ್ಮಶಾನದೊಳಗೆ ನೀರಿನ ವ್ಯವಸ್ಥೆಗಾಗಿ ಬೋರ್‌ವೆಲ್ ಮತ್ತು ನೀರಿನ ಶೇಖರಣೆಗೆ ಟ್ಯಾಂಕರ್ – ಹೀಗೇ ಎಲ್ಲಾ ವ್ಯವಸ್ಥೆಗಳಿರುವ ಸ್ಮಶಾನ ಈಗ ಪೂರ್ಣಗೊಳ್ಳುತ್ತಿದೆ
. ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ಈ ಎಲ್ಲಾ ಕಾಮಗಾರಿಗಳು ನಡೆಯುತ್ತಿದ್ದು, ಆವರಣ ಗೋಡೆ ಆಗಿದೆ. ಪ್ರವೇಶದ್ವಾರ ಆಗಿದೆ. 4ಬಗೆಯ ಕಟ್ಟಡಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ಈಶ್ವರ ಮತ್ತು ಹರಿಶ್ಚಂದ್ರರ ವಿಗ್ರಹ ಬಂದು ಅಳವಡಿಸಿ ಆಗಿದೆ. ಬೋರ್‌ವೆಲ್ ಕೊರೆದಾಗಿದೆ. ಸಾಕಷ್ಟು ನೀರೂ ದೊರೆತಿದೆ. ಕಾಂಕ್ರಿಟ್ ರಸ್ತೆಯ ಕಾಮಗಾರಿಯೂ ಪೂರ್ಣಗೊಂಡಿದೆ. ಉದ್ಯಾನವನದ ನಿರ್ಮಾಣ ಮತ್ತು ಒಳಗಡೆ ಇಂಟರ್‌ಲಾಕ್ ರಸ್ತೆ ನಿರ್ಮಾಣ ಆಗಬೇಕಾಗಿದೆ. ಲಯನ್ಸ್ ಜಿಲ್ಲೆ 317 ಡಿ ಪ್ರಾಂತ-4ರ ವತಿಯಿಂದ ರೀಜನಲ್ ಚೇರ್‌ಮೆನ್ ಲ.ಜಯರಾಮ ದೇರಪ್ಪಜ್ಜನಮನೆಯವರ ನೇತೃತ್ವದಲ್ಲಿ 5 ಲಕ್ಷ ರೂ. ಇದಕ್ಕಾಗಿ ವಿನಿಯೋಗಿಸುತ್ತಿದ್ದಾರಾದರೆ, ಉಬರಡ್ಕ ಗ್ರಾಮ ಪಂಚಾಯತ್ ವತಿಯಿಂದ ಅಧ್ಯಕ್ಷ ಹರೀಶ್ ಉಬರಡ್ಕರವರು ಉದ್ಯೋಗ ಖಾತರಿ ಯೋಜನೆ, ಶಾಸಕರ ನಿಧಿ, ಸರಕಾರದ ಇತರ ನಿಧಿಗಳನ್ನು ಒಟ್ಟು ಸೇರಿಸಿ 30 ಲಕ್ಷದಷ್ಟು ಅನುದಾನ ಒಟ್ಟುಗೂಡಿಸಲು ಶ್ರಮ ಪಡುತ್ತಿದ್ದಾರೆ. ಅಲ್ಲದೆ ಅನುದಾನ ತರಿಸಿಕೊಳ್ಳುವ ಆತ್ಮವಿಶ್ವಾಸದಲ್ಲಿ ತಾನೇ ಮುಂದೆ ನಿಂತು ಕೆಲಸ ಮಾಡಿಸುತ್ತಿದ್ದಾರೆ. ಈ ಸ್ಮಶಾನ ಪೂರ್ಣಗೊಂಡು ಕಾರ್ಯಾರಂಭಿಸಿದ ಮೇಲೆ ಸುಳ್ಯ ಗ್ರಾಮದವರು ಮತ್ತು ಉಬರಡ್ಕ ಗ್ರಾಮದವರು ಇಲ್ಲಿಗೇ ಬಂದು ಅಂತ್ಯ ಸಂಸ್ಕಾರ ನೆರವೇರಿಸಿಕೊಳ್ಳುವ ಚಿಂತನೆ ನಡೆಸುವುದು ಖಂಡಿತ. ಅಷ್ಟು ಸುಂದರವಾಗಿ ಈ ರುದ್ರಭೂಮಿ ಕಂಗೊಳಿಸಲಿದೆ.

ವರದಿ: ಪದ್ಮನಾಭ ಸುಳ್ಯ

Related posts

Leave a Reply