Header Ads
Header Ads
Breaking News

ಸುಳ್ಯದ ನಿಧಾನ ಕಲಿಯುವ ಮಕ್ಕಳ ಶಾಲೆ, ಎಂ. ಬಿ. ಪೌಂಡೇಶನ್ನಿನ ಸಾಂದೀಪ ನೆಲೆ


ಪ್ರಪಂಚದಲ್ಲಿ ಹುಟ್ಟು ಆಕಸ್ಮಿಕ ಸಾವು ಅನಿವಾರ್‍ಯ. ಹುಟ್ಟಿನಿಂದ ಸಾವಿನ ತನಕ ಕೆಲವರು ಕಷ್ಟದಲ್ಲಿಯೇ ಜೀವನ ಕಳೆದರೆ ಇನ್ನೂ ಕೆಲವರು ಕಷ್ಟಸುಖ ಎರಡನ್ನು ಅನುಭವಿಸುತ್ತಾರೆ. ಕಷ್ಟ ಸುಖ ಎರಡನ್ನು ಅನುಭವಿಸಿದರೆ ಮಾತ್ರ ಅದು ಜೀವನ ಎಂದು ಬಲ್ಲವರು ಹೇಳುತ್ತಾರೆ. ಪ್ರತಿಯೊಬ್ಬನ ಬಾಳಿನಲ್ಲಿ ಕಷ್ಟವೇ ಜೀವನ ಆಗಬಾರದು ಸುಖವೇ ಜೀವನ ಆಗಬಾರದು. ಅಲ್ಲಿ ಕಷ್ಟ ಸುಖದ ಸಮ್ಮಿಲನ ಆಗಬೇಕೆಂದು ಹಿರಿಯರು ಹೇಳುತ್ತಾರೆ. ಹೆಣ್ಣೋಬ್ಬಳು ಮದುವೆಯಾಗಿ ಮಗುವಿಗೆ ಜನ್ಮ ನೀಡಿದ ಕೂಡಲೇ ನನ್ನ ಜೀವನ ಸಾರ್ಥಕವಾಯಿತು ಎಂದು ನೋವಿನಲ್ಲೂ ಸಂತೋಷ ಪಡುತ್ತಾಳೆ. ಹೆತ್ತ ತಾಯಿಗೆ ಅದು ಎಂತಹ ಮಗುವಾದರೂ ಅದು ಮುದ್ದಾಗಿ ಕಾಣಿಸುತ್ತದೆ.
ಬದುಕು ತುಂಬಾ ವಿಸ್ಮಯವಾದುದು. ಅಲ್ಲಿ ಅನೇಕ ಘಟನೆಗಳು ವಿಚಿತ್ರವಾದ ಸನ್ನಿವೇಶಗಳು ಘಟಿಸಿ ಹೋಗುತ್ತವೆ. ಆಧುನಿಕ ಕಾಲದಲ್ಲಿ ನಾವು ವಿಜ್ಞಾನದಲ್ಲಿ ಎಷ್ಟು ಮುಂದುವರಿದರೂ ಇಂದು ಕೆಲವೆಡೆ ಬುದ್ದಿಮಾಂದ್ಯ, ವಿಕಲಚೇತನ, ವಿಚಿತ್ರ ಮಕ್ಕಳ ಜನನ ಆಗುತ್ತಲೇ ಇದೆ. ಇಂತಹ ಮಕ್ಕಳ ಬಗ್ಗೆ ಹೆತ್ತವರು ಸಾಕಾಷ್ಟು ಮುತುವರ್ಜಿ ವಹಿಸಬೇಕಾಗುತ್ತದೆ. ಆಧುನಿಕ ಕಾಲದಲ್ಲಿ ಶೈಕ್ಷಣಿಕ ಕ್ಷೇತ್ರವನ್ನು ಪ್ಯಾಪಾರೀಕರಣಗೊಳಿಸಲು ಅಲ್ಲಲ್ಲಿ ನಾಯಿಕೊಡೆಗಳಂತೆ ಅನೇಕ ವಿದ್ಯಾಸಂಸ್ಥೆಗಳು ಹುಟ್ಟಿಕೊಳ್ಳುತ್ತಿವೆ. ಅವರಿಗೆ ನೊಂದವರ ಬಾಳಿಗೆ ಬೆಳಕಾಗುವ ಸಮಾಜ ಸೇವೆ ಮಾಡುವ ಯಾವುದೇ ಚಿಂತನೆ ಇಲ್ಲ. ಶೈಕ್ಷಣಿಕ ಕ್ಷೇತ್ರವನ್ನು ವ್ಯಾಪಾರೀಕರಣಗೊಳಿಸುವ ಈಗಿನ ಕಾಲಘಟ್ಟದಲ್ಲಿ ಸುಳ್ಯದಲ್ಲೊಂದು ವಿಶಿಷ್ಠವಾದ ಅಂತ:ಕರಣ ಮಿಡಿಯುವ ಶಾಲೆಯೊಂದಿದೆ. ಅದುವೇ ಸುಳ್ಯದ ಎಂಬಿ ಪೌಂಢೇಶನ್ ವತಿಯಿಂದ ನಡೆಯುತ್ತಿರುವ ಸಾಂದೀಪ ನಿಧಾನ ಕಲಿಯುವ ಬುದ್ದಿ ಮಾಂದ್ಯ ಮಕ್ಕಳ ಶಾಲೆ. ಈ ಶಾಲೆಯ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇಲ್ಲ. ಇಲ್ಲಿಯ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಿಗೆ ಹೋಲಿಸಿ ತದ್ವಿರುದ್ದವಾಗಿ ಮಾನಸಿಕ ಹಾಗೂ ದೈಹಿಕ ವಿಕಲತೆಯಿಂದ ಬಳಲುವರಾಗಿದ್ದಾರೆ. ಇಲ್ಲಿ ನೊಂದ ಮಕ್ಕಳ ಭವಿಷ್ಯವನ್ನು ರೂಪಿಸಿ ಅವರಲ್ಲಿ ಆಶಾಕಿರಣ ಮೂಡಿಸಲಾಗುತ್ತಿದೆ. ಇದರ ರೂವಾರಿಗಳು ಸುಳ್ಯದ ಉದ್ಯಮಿ ಎಂಬಿ ಸದಾಶಿವ ಹಾಗೂ ಅವರ ಪತ್ನಿ ಹರಿಣಿ ಸದಾಶಿವರು.
ಈ ಶಾಲೆಯನ್ನು ಬುದ್ದಿ ಮಾಂದ್ಯ ಮಕ್ಕಳ ಶಾಲೆ ಎಂದು ಕರೆಯಲಾಗದೆ ನಿಧಾನ ಕಲಿಯುವ ಮಕ್ಕಳ ಶಾಲೆ ಎಂದು ಕರೆಯಲಾಗುತ್ತಿದೆ. ಎಂವಿ ಸದಾಶಿವರು ಆಲೋಚಿಸಿ ಹೆತ್ತವರ ಭಾವನೆಗೆ ನೋವಾಗದಂತೆ ಸಮಾಜದ ದೃಷ್ಠಿಯಲ್ಲಿ ಕೀಳರಿಮೆ ಮೂಡದಂತೆ ಈ ಶಾಲೆಗೆ ನಿಧಾನ ಕಲಿಕೆಯ ಮಕ್ಕಳ ಶಾಲೆ ಎಂದು ಹೆಸರಿಟ್ಟಿದ್ದಾರೆ. ಶಾಲೆಯಲ್ಲಿ ಯಾವುದೇ ಜಾತಿ ಧರ್ಮ ಬೇಧ ಕಾಣುವುದಿಲ್ಲ. ಹಿಂದು, ಕ್ರೈಸ್ತ, ಮುಸ್ಲಿಂ ಮಕ್ಕಳಿದ್ದು ಒಬ್ಬೊಬ್ಬರು ಒಂದೊಂದು ಸಮಸ್ಯೆಯಿಂದ ಬಳಲುತ್ತಿರುವುದನ್ನು ನೋಡಿದರೆ ಎಂತಹ ಕಲ್ಲು ಹೃದಯವು ಕರಗುವುದು. ಇಲ್ಲಿಯ ಶಿಕ್ಷಕಿಯರು ಮಕ್ಕಳಿಗೆ ವಿದ್ಯೆ ಕಲಿಸುತ್ತಾ ಅವರ ಬಾಯಿಗೆ ತುತ್ತು ಅನ್ನ ನೀಡಿ ಅವರನ್ನು ಪೋಷಿಸಿತ್ತಿರುವುದು ನೋಡಿದರೆ ಸಂಸ್ಥೆಗೆ ಹಾಗೂ ಶಿಕ್ಷಕಿಯರಿಗೆ ಇರುವ ಕಾಳಜಿಯನ್ನು ಎತ್ತಿತೋರಿಸುತ್ತದೆ.
ಮಕ್ಕಳ ಬುದ್ದಿಮತ್ತೆಗೆ ಸರಿಯಾಗಿ ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸಿ ಶಿಕ್ಷಣ ನೀಡಲಾಗುತ್ತದೆ. ಮಕ್ಕಳಿಗೆ ಸಾಮಾನ್ಯ ಶಾಲೆಯಂತೆ ಪಠ್ಯ ಪುಸ್ತಕ ಇರುವುದಿಲ್ಲ. ವಿಶೇಷ ತರಬೇತಿ ಪಡೆದ ಶಿಕ್ಷಕಿಯರು ಪ್ರತಿ ಮಗುವಿನ ಮಾನಸಿಕ ಹಾಗೂ ದೈಹಿಕ ಶಕ್ತಿ ಗಮನಿಸಿ ಬರೆಯುವ ಮತ್ತು ಓದುವ ಕೆಲಸ ಕೊಡುತ್ತಾರೆ. ಮೊದ ಮೊದಲು ಶಾಲೆಗೆ ಬಂದು ಮಲಗಿಕೊಂಡು ಇದ್ದ ವಿದ್ಯಾರ್ಥಿಗಳು ಈಗ ಊಟ ತಿಂಡಿ ಮಾಡಿಕೊಂಡು ಇತರರೊಂದಿಗೆ ಆಡವಾಡುತ್ತಾರೆ. ಶಾಲೆಯಲ್ಲಿ ಸುಷ್ಮಾ ಚುರುಕಿನ ವಿದ್ಯಾರ್ಥಿಯಾಗಿದ್ದು ಸಾಮಾನ್ಯ ಮಕ್ಕಳಂತೆ ಕಾಣುತ್ತಾಳೆ. ಈಕೆ ಮಾಮೂಲಿ ಶಾಲೆಗೆ ಹೋದಾಗ ಬೌದ್ದಿಕ ಬೆಳವಣಿಗೆಯಲ್ಲಿ ಹಿಂದೆ ಬಿದ್ದಿರುವುದು ತಿಳಿದಿದ್ದು ಈಗ ಚೆನ್ನಾಗಿ ಹಾಡುತ್ತಾಳೆ ಬರೆಯಲು ಕಲಿತ್ತಿದ್ದಾಳೆ. ವಾಕ್ ಶ್ರವಣ ಸಂಸ್ಥೆಗಳ ವೈದ್ಯರಿಂದ ತಪಾಸಣೆ ನಡೆಸಲಾಗುತ್ತದೆ. ಮಾನಿಸಿಕ ಚಿಕಿತ್ಸೆ ವಿಭಾಗದ ಜಾಬ್‌ಥೆರಾಪಿಸ್ಟ್ ಹಾಗೂ ಮನಶಾಸ್ತ್ರಜ್ಞರು ಬೇಟಿ ನೀಡಿ ಬುದ್ದಿಮತ್ತೆ ಪರೀಕ್ಷೆ ನಡೆಸುತ್ತಿದ್ದಾರೆ. ಪ್ರತೀದಿನ ವ್ಯಾಯಾಮ, ಫಿಸಿಯೋಥೆರಫಿ, ಯೋಗ ಹೇಳಿ ಕೊಡಲಾಗುತ್ತದೆ. ಮಕ್ಕಳು ವಿಕಲಚೇತನರ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದಾರೆ. ಕೆಲವೆಡೆ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಜಿಲ್ಲಾ ಮಟ್ಟದ ನೇಚರ್ ಕ್ಯಾಂಪ್ ನಡೆದ್ದಾಗ ಇಬ್ಬರು ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದರು. ಮೂರರಿಂದ ಹದಿನೆಂಟರ ವಯೋಮಾನದ ಯಾವುದೇ ರೀತಿಯ ವಿಕಲತೆ ಹೊಂದಿರುವ ಮಕ್ಕಳಿಗೆ ಇಲ್ಲಿ ಪ್ರವೇಶಾವಕಾಶವಿದೆ. ಕಳೆದ ೧೯ ವರ್ಷಗಳಿಂದ ಸರಕಾರದ ಅನುದಾನದ ನಿರೀಕ್ಷೆ ಇಟ್ಟುಕೊಂಡೆ ಶಾಲೆಯನ್ನು ನಡೆಸಲಾಗುತ್ತಿದೆ. ಆದರೆ ಈ ತನಕ ಸರಕಾರದ ಅನುದಾನವಾಗಲಿ ನೆರವಾಗಲಿ ದೊರೆತಿಲ್ಲ. ಕೆಲವು ಸೀಮಿತ ಸಂಘ ಸಂಸ್ಥೆಗಳನ್ನು ಬಟ್ಟರೆ ಶಾಲೆ ನಡೆಸಲು ಯಾರು ಸಹಕಾರ ಮಾಡುತ್ತಿಲ್ಲ. ಇದೀಗ ಸದಾಶಿವ ಮತ್ತು ಅವರ ಪತ್ನಿ ಹರಿಣಿಯವರೇ ಶ್ರದ್ದೆಯಿಂದ ಸಂಸ್ಥೆಯನ್ನು ಉಚಿತವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಈ ಮುಗ್ದ ಮಕ್ಕಳೊಂದಿಗೆ ಆಟವಾಡುತ್ತ ಕಾಲ ಕಳೆಯುತ್ತಿದ್ದಾರೆ. ನಗರದ ಸನಿಹದಿಂದ ಬರುವವರಿಗೆ ಉಚಿತ ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

Related posts

Leave a Reply