Header Ads
Breaking News

ಸುಳ್ಯದ ಪೆರಾಜೆಯಲ್ಲಿ ಶಾಸ್ತಾವು ದೇವಸ್ಥಾನದಲ್ಲಿ ಭಗವತಿ ದೊಡ್ಡಮುಡಿ

ಸುಳ್ಯ ಮತ್ತು ಮಡಿಕೇರಿ ಗಡಿಭಾಗದ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ನಡೆಯುವ ವಿಶಿಷ್ಠ ಶ್ರೀ ಭಗವತಿ ದೊಡ್ಡ ಮುಡಿ. ಮುಗಿಲೆತ್ತರದ ಈ ಮುಡಿಗೆ ವಿಶೇಷ ಆಕರ್ಷಣೆ ಇದೆ. ತುಳುನಾಡಿನ ಭೂತಾರಾಧನೆ ಮತ್ತು ಕೇರಳದ ತೆಯ್ಯಂನ ಮಿಳಿತದೊಂದಿಗೆ ನಡೆಯುವ ಪೆರಾಜೆ ದೊಡ್ಡಮುಡಿ ಪ್ರತಿ ವರ್ಷದಂತೆ ಪೆರಾಜೆ ಗ್ರಾಮದ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ನಡೆಯಿತು.

ಪೆರಾಜೆಯಲ್ಲಿ ಭಗವತಿ ಆರಾಧನೆ ಹಿನ್ನಲೆ:ಪೆರಾಜೆಯಲ್ಲಿ ಮೂಲ ದೇವರಾಗಿ ಧರ್ಮ ಶಾಸ್ತಾರನ ಆರಾಧನೆ ಮಾಡಲಾಗುತ್ತದೆ. ಧರ್ಮ ಶಾಸ್ತಾರ ಎಂದರೆ ಈಶ್ವರ ಮತ್ತು ಪಾರ್ವತಿಯ ಪುತ್ರ. ಪುತ್ರನ ರಕ್ಷಣೆಗಾಗಿ ಬಂದಿರುವುದು ಪಾರ್ವತಿಯ ರೂಪದ ಭಗವತಿ ದೇವಿ ಎಂದು ಹೇಳಲಾಗುತ್ತಿದ್ದು, ಆ ಮೂಲಕ ಭಗವತಿ ದೇವಿಯನ್ನು ಆರಾಧನೆ ಮಾಡಲಾಗುತ್ತಿದೆ.

ಧರ್ಮ ಶಾಸ್ತಾರ ಭೂತಗಳ ಅಧಿಪತಿ, ಭೂತ ಗಣನಾಯಕ ಎನ್ನಲಾಗುತ್ತಿದ್ದು, ಸಮುದ್ರ ಮಥನ ಸಂದರ್ಭದಲ್ಲಿ ಭೂತ ಗಣಗಳ ನಿಗ್ರ ಮತ್ತು ವಿಷ ಜಂತುಗಳ ನಿರ್ಣಾಮಮಾಡಿದವನೇ ಭೂತನಾಥನಾದ ಧರ್ಮ ಶಾಸ್ತಾರ ಎಂದು ಹೇಳಲಾಗುತ್ತಿದೆ. ಆದ ಕಾರಣದಿಂದ ನೂರೊಂದು ದೈವಗಳ ನೆಲೆಬೀಡು ಪೆರಾಜೆ ಶಾಸ್ತಾವು ದೇವರ ಸನ್ನಿಧಿ ಎಂದು ಕರೆಯಲಾಗುತ್ತಿದೆ.ಮತ್ತೊಂದು ಕಡೆಯಿಂದ ಕರಿಭೂತ ಕೋಮಾಳಿ ದೈವದ ನಡಾವಳಿ ನಡೆಯುತ್ತಿದ್ದು, ಇದು ಸಹ ಭಗವತಿ ದೈವಕ್ಕೆ ಸಂಬಂಧ ಪಟ್ಟಂತೆ ಈಶ್ವರ,ಪಾರ್ವತಿ ಇಬ್ಬರೂ ಬೇಟೆಯ ರೂಪದಲ್ಲಿದ್ದು, ಅವರು ದೈವರೂಪತಾಳಿ ಕರಿಭೂತ ಕೋಮಾಳಿಯಾದರು. ಇದು ಸಹ ಶಾಸ್ತಾರ ಮತ್ತೊಂದು ಕಡೆಯಿಂದ ರಕ್ಷಣೆಗೆ ಬಂದಿರುವುದು ಎಂದು ಕೇಳಿಬರುತ್ತಿದೆ.

ಎತ್ತರದ ವೈವಿಧ್ಯಮಯ ಅಲಂಕಾರಗಳಿಂದ ಕೂಡಿದ್ದು ತೆಳ್ಳಗೆ ಸಿಗಿದ ಬಿದಿರಿನ ಸಲಾಕೆಗಳಿಂದ ಗೋಪುರಾಕಾರ ನಿರ್ಮಿಸಿ, ಅದಕ್ಕೆ ಬಣ್ಣ ಬಣ್ಣದ ಸೀರೆಗಳಿಂದ ಸುತ್ತಿ ಹಾಗೂ ಹೂಗಳಿಂದ ಸಿಂಗರಿಸಿ, ಮುಡಿಯನ್ನು ದೇವಿಯ ರೌದ್ರವತಾರದ ರೂಪದಲ್ಲಿ ಭೂತದಪಾತ್ರಿಯ ಬೆನ್ನಿಗೆ ಬಿಗಿದು ತಲೆಮೇಲೆ ಹೊತ್ತುಕೊಂಡು ಆವೇಶದೊಂದಿಗೆ ಮುಡಿಯನ್ನು ತಲೆಮೇಲೆ ಇರಿಸಿ ಹುಲಿಚಾವಡಿಯ ಸುತ್ತುಬರುವುದು. ಜತೆಗೆ ಪೆರಾಜೆ ಗ್ರಾಮದ ಆರು ಗ್ರಾಮಗಳಿಂದ ತೀಯಾ ಸಮಾಜದ ಮುಖಂಡರು ಸಂಗ್ರಹಮಾಡಿದ ಹಿಂಗಾರದಿಂದ ಸಿಂಗರಿಸಿದ ಕಲಶವನ್ನು ತೀಯಾಸಮಾಜ ಮುಖಂಡರೊಬ್ಬರು ಹೊತ್ತಕೊಂಡು ಮುಡಿಯನ್ನು ಹೊತ್ತ ದೈವವನ್ನು ಹುರಿದುಂಬಿಸುತ್ತಾ ಮುಡಿಯೊಂದಿಗೆ ಸುತ್ತುಬರುವುದು ದೊಡ್ಡಮುಡಿಯ ವೈಶಿಷ್ಟ್ಯವಾಗಿದೆ. ದೊಡ್ಡಮುಡಿಯಲ್ಲಿ ತೀಯಾಸಮಾಜ ಇಲ್ಲದೆ ದೈವದ ಯಾವುದೇ ಕೆಲಸಕಾರ್ಯಗಳು ನಡೆಯುವಂತಿಲ್ಲ. ಮತ್ತು ಗ್ರಾಮದಲ್ಲಿಯೂ ಪೆರಾಜೆ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಆರು ಗ್ರಾಮಗಳಿದ್ದು, ಅಲ್ಲಿನ ೨೮ಮನೆಗಳಿಂದ ೨೮ಹಿಂಗಾರವನ್ನು ಸಂಗ್ರಹಿಸಲಾಗುತ್ತದೆ. ಈ ರೀತಿಯ ಧಾರ್ಮಿಕ ನಂಬಿಕೆಯೊಂದಿಗೆ ಭಗವತಿ ದೊಡ್ಡಮುಡಿ ನಡೆಯುತ್ತದೆ. ಭಗವತಿ ದೇವಿಗೆ ಕಂಕಣ ಭಾಗ್ಯ, ಸಂತಾನ ಭಾಗ್ಯ ಹಾಗೂ ಇತರ ಕಾರ್ಯಗಳಿಗೆ ಹರಿಕೆ ಹೊತ್ತ ಭಕ್ತರು ತಮ್ಮ ಹರಕೆಯ ರೂಪದಲ್ಲಿ ಸೀರೆ, ಚಿನ್ನ, ಬೆಳ್ಳಿಗಳನ್ನು ಅರ್ಪಿಸಲಾಗುತ್ತಿದೆ. ಭಗವತಿ ದೈವದ ಮುಡಿಯನ್ನು ಬಣ್ಣರ ಜಾತಿಯವರು ಕಟ್ಟುತ್ತಿದ್ದಾರೆ. ಅಡೂರು ಬೆಡಿ, ತೊಡಿಕಾನ ಕೊಡಿ, ಪೆರಾಜೆ ಮುಡಿ ಎನ್ನುವ ನಾಣ್ನುಡಿಯಂತೆ ಎ.೧ರಂದು ಪೆರಾಜೆ ಭಗವತಿಮುಡಿ ಪ್ರತಿವರ್ಷದಂತೆ, ಈ ವರ್ಷವೂ ಅದೇ ರೀತಿ ನಡೆಯಿತು.
ರಾಜ್ಯದಲ್ಲೇ ಅಪರೂಪದ ದೇವಿಯ ಆರಾಧನೆಯ ಮೂಲಕ ಪೂಜಿಸುವ ಪೆರಾಜೆ ಭಗವತಿ ದೊಡ್ಡಮುಡಿಯಲ್ಲಿ ಕೇರಳ ಮತ್ತು ಕರ್ನಾಟಕದ ನಾನಾ ಭಾಗಗಳಿಂದ ಬಂದ ಸಾವಿರಾರು ಭಕ್ತರು ನೋಡಿ ಭಕ್ತಿಯಿಂದ ಭಾವಪರಾವಶರಾದರು.

Related posts

Leave a Reply

Your email address will not be published. Required fields are marked *