Header Ads
Header Ads
Breaking News

ಸುಳ್ಯ ಅಜ್ಜಾವರದ ತಾಯಿ ಮಗನ ಬಡತನದ ನೋವಿಗೆ ಅನಾರೋಗ್ಯದ ಬರೆ,  ಪ್ಲಾಸ್ಟಿಕ್ ಹೊದಿಕೆಯ ಮನೆ, ಹೊಸ ಮನೆಗೆ ನೂರೆಂಟು ವಿಘ್ನ


ಪ್ಲಾಸ್ಟಿಕ್ ಹೊದಿಕೆಯ ಚಾವಣಿ, ಹಕ್ಕಿ ಗೂಡಿನಂತ ಮುರುಕುಲು ಮನೆ, ಅದರ ಒಳಗೆ ವಯಸ್ಸಾದ ತಾಯಿ ಮಗನ ವಾಸ. ಇಳಿವಯಸ್ಸಿನ ತಾಯಿಗೆ ಕಾಡುವ ವಯೋಸಹಜ ಕಾಯಿಲೆ. ಅಪಘಾತಕ್ಕೆ ಸಿಲುಕಿ ಕಾಲಿನ ಬಲ ಕಳೆದುಕೊಂಡ ಮಗ. ಈ ತಾಯಿ ಮಗನದು ನಿತ್ಯವೂ ನೋವಿನ ಕಥೆ.
ಅಜ್ಜಾವರ ಗ್ರಾಮದಲ್ಲಿ ವಾಸವಿರುವ ಚಿನ್ನಮ್ಮ ಅವರ ಕುಟುಂಬದ ದುರಂತ ಕತೆಯಿದು. ಅಜ್ಜಾವರ, ಮಂಡೆಕೋಲಿಗೆ ತೆರಳುವ ರಸ್ತೆ ಬದಿಯಲ್ಲೆ ಇವರ ಮನೆ ಇದೆ. ಧರೆಗುರುಳಲು ಸಿದ್ಧವಾದ ಸೋರುವ ಸೂರಲ್ಲಿ ಅನಾಥ ಸ್ಥಿತಿಯಲ್ಲಿ ಜೀವನ ನಡೆಸುತ್ತಿರುವವರು ಇಲ್ಲಿಯ ನಿವಾಸಿ ೯೦ರ ಇಳಿ ವಯಸ್ಸಿನ ಚಿನ್ನಮ್ಮ ಹಾಗೂ ಅವರ ಪುತ್ರ ಧನಂಜಯ. ಮನೆಯ ಸೂರು ಧರೆಗುರುಳಲು ಸಿದ್ಧವಾಗಿದೆ. ಹಾಸಿದ ಹೆಂಚು ತುಂಡುಗಳು ನೇತಾಡಿಕೊಂಡು ಒಂದೊಂದೆ ನೆಲಕ್ಕೆ ಉರುಳುತ್ತಿವೆ. ಮಣ್ಣಿನ ಗೋಡೆಗಳು ಈಗಲೋ ಮತ್ತೆಯೋ ಎಂಬಂತೆ ಕುಸಿಯಲು ಸಿದ್ಧವಾಗಿದೆ. ಮನೆ ಒಳಗೆ ಪ್ರವೇಶಿಸಿ ಮೇಲಕ್ಕೆ ಕಣ್ಣು ಹಾಯಿಸಿದರೆ ಆಕಾಶದ ನಕ್ಷತ್ರಗಳನ್ನು ಎಣಿಸುವಂತೆ ಗೋಚರಿಸುವ ದೊಡ್ಡ ದೊಡ್ಡ ರಂಧ್ರಗಳಿವೆ. ಇಂತಹ ಪಾಳುಬಿದ್ದ ಗುಡಿಸಲಿನಲ್ಲಿ ಅಶಕ್ತ ಇವರಿಬ್ಬರು ವಾಸ್ತವ್ಯ ಹೂಡಿದ್ದಾರೆ.
ಈ ಬಡ ಕುಟುಂಬಕ್ಕೆ ಆಸ್ತಿ ಏನೂ ಇಲ್ಲ. ಅಲ್ಪ ಸೆಂಟ್ಸ್ ಜಾಗದಲ್ಲಿ ಸಣ್ಣ ಗುಡಿಸಲು ಕಟ್ಟಿ ಜೀವನ ನಡೆಸುತ್ತಿದ್ದಾರೆ. ಕುಟುಂಬದ ಆಧಾರಸ್ತಂಭ ಮಗ ಧನಂಜಯ. ಇವರು ಈ ಹಿಂದೆ ಮಂಗಳೂರಿನಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಕೆಲಸ ಮಾಡಿದ ಬಳಿಕ ಊರಿಗೆ ಹಿಂತುರುಗಿ ಜೀವನಕ್ಕಾಗಿ ಸ್ಥಳಿಯವಾಗಿ ಅಟೋ ಓಡಿಸುತ್ತಿದ್ದರು. ದುರಾದೃಷ್ಟ ಎಂದರೆ ವರ್ಷದ ಹಿಂದೆ ಅವರು ಚಲಾಯಿಸುತ್ತಿದ್ದ ರಿಕ್ಷಾ ಅಪಘಾತಕ್ಕೆ ಒಳಗಾಗಿದೆ. ಈ ಅವಘಡದಲ್ಲಿ ಧನಂಜಯರು ಕಾಲಿನ ಸ್ವಾಧಿನ ಕಳೆದುಕೊಂಡಿದ್ದಾರೆ. ಅಲ್ಲಿಂದ ದುಡಿಯಲು ಸಾಧ್ಯವಾಗುತ್ತಿಲ್ಲ. ಅಲ್ಲಿ ತನಕ ಎಲ್ಲವೂ ಸರಿ ಇತ್ತು ಆ ಬಳಿಕ ಕುಟುಂಬ ಹೀನಾಯ ಸ್ಥಿತಿಗೆ ಒಳಗಾಗಿದೆ.
ಧನಂಜಯರಿಗೆ ವಿವಾಹವಾಗಿ ಮಕ್ಕಳಿದ್ದಾರೆ. ಮಡದಿ, ಮಕ್ಕಳು ಮನೆಯಲ್ಲಿಲ್ಲ. ಕಾರಣ ಅವರ ಸಂಸಾರ ನೌಕೆ ಉತ್ತರಧ್ರುವ ದಕ್ಷಿಣ ಧ್ರ್ರುವ ಎಂಬಂತಿದೆ. ಕಾರಣ ಗಂಡ ಹೆಂಡತಿ ನಡುವಿನ ಕೌಟುಂಬಿಕ ಕಲಹದಿಂದ ಪತ್ನಿ ಗಂಡನ ಜೊತೆ ಮುನಿಸಿಕೊಂಡು ತವರು ಮನೆ ಸೇರಿಕೊಂಡಿದ್ದಾರೆ. ಗಂಡ ಹೆಂಡತಿ ನಡುವಿನ ಭಿನ್ನಾಭಿಪ್ರಾಯ ಜನತಾ ನ್ಯಾಯಲಯ ತನಕ ತಲುಪಿದೆ ಆದರೂ ಇತ್ಯರ್ಥವಾಗಿಲ್ಲ. ಅಕೆಯನ್ನು ಮನೆಗೆ ಕರೆತರುವ ಪ್ರಯತ್ನ ನಡೆಸಿದೆ ಅದು ಕೈಗೂಡದ ಹಿನ್ನಲೆಯಲ್ಲಿ ಪ್ರಯತ್ನ ಕೈ ಬಿಟ್ಟಿದ್ದಾಗಿ ಅನಾರೋಗ್ಯ ಪೀಡಿತ ಧನಂಜಯರು ನೊಂದು ನುಡಿಯುತ್ತಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಚಿನ್ನಮ್ಮ. ಅವರಿಗೆ ಕಣ್ಣು ಮಂದವಾಗಿದೆ. ನಿಂತರೆ ಕೂರಲಾಗದ, ಮಲಗಿದರೆ ಏಳಲಾಗದ, ಎದ್ದರೂ ನಡೆಯಲಾಗದ ಸ್ಥಿತಿಯಲ್ಲಿದೆ ಅವರ ಜೀವನ. ಮಗನ ಅನಾರೋಗ್ಯ ಜೊತೆಗೆ ಇವರು ಅನುಭವಿಸುತ್ತಿರುವ ಈ ಯಾತನೆ ತಾಯಿ ಮಗನ ಸ್ಥೈರ್ಯವನ್ನು ಕುಗ್ಗಿಸಿದೆ.
ತೀರಾ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ಸ್ಥಳಿಯಾಡಳಿತ ಯೋಜನೆಯೊಂದರ ಮೂಲಕ ಆಶ್ರಯ ಮನೆ ನೀಡಲು ಮುಂದಾಗಿದೆ. ಈಗಿನ ಗುಡಿಸಲಿನ ಪಕ್ಕದಲ್ಲೆ ಮನೆ ನಿರ್ಮಾಣ ಕಾರ್ಯಕ್ಕೆ ಸ್ಥಳ ಗುರುತಿಸಿ ಅಡಿಪಾಯ ಹಾಕಲಾಗಿದೆ. ಮನೆ ನಿರ್ಮಾಣಕ್ಕೆ ಬೇಕಿರುವ ಕೂಲಿಗಾರರ, ಸಲಕರಣೆಗಳ ಜೋಡಣೆಗೆ ಬೇಕಾದ ವ್ಯವಸ್ಥೆಗಳ ಕೊರತೆ ಇದೆ. ನಿವಾಸ ಹೊಂದಲು ಬೇಕಿರುವ ಸಾಮಾಗ್ರಿ ಹೊಂದಿಸಲು ಇವರ ಕೈಯಲ್ಲಿ ಆಗುತ್ತಿಲ್ಲ. ಇದರಿಂದ ಮನೆ ನಿರ್ಮಾಣ ಕುಂಟುತ್ತ ಸಾಗಿ ಅದು ನನೆಗುದಿಗೆ ಬಿದ್ದಿದೆ. ನಿವಾಸಕ್ಕೆಂದು ತೆಗೆದ ಮಣ್ಣು ಗುಡಿಸಲಿನ ಪಕ್ಕದಲ್ಲೆ ಶೇಖರಿಸಿಡಲಾಗಿದೆ. ಅದರ ತೆರವು ಕೂಡ ಸಾಧ್ಯವಾಗಿಲ್ಲ. ಬಯಲು ಶೌಚಾಲಯ ಇವರ ಬಳಸುತ್ತಿದ್ದು ಇಬ್ಬರಿಗೂ ಎದ್ದು ಓಡಾಡುವಷ್ಟು ಶಕ್ತಿ ಇಲ್ಲದಿರುವುದೆ ಅತಿ ದೊಡ್ಡ ಸಮಸ್ಯೆಯಾಗಿದೆ.
ಮಳೆಗಾಲ ಆರಂಭದ ಹಂತದಲ್ಲಿದೆ. ಇನ್ನೇನು ಮುಂದಿನ ಕೆಲವೇ ದಿನಗಳಲ್ಲಿ ದಿಢೀರ್ ಮಳೆ ಸುರಿಯಲಾರಂಬಿಸಿದರೆ ಇವರ ಜೀವನ ಕಷ್ಟ. ಈ ಮಳೆಗಾಲ ಇದೇ ಜೋಪಡಿಯಲ್ಲೆ ಜೀವನ ಕಳೆಯುವುದು ಅನಿವಾರ್‍ಯ ಇವರಿಗೆ. ಮುಂದಿನ ನಾಲ್ಕೈದು ತಿಳಗಳು ಸಿಡಿಲು, ಮಿಂಚು, ಗಾಳಿ ಮಳೆಗೆ ಈ ಜೋಪಡಿಯಲ್ಲೆ ಜೀವನ ಸಾಗಿಸುವುದು ಹೇಗೆ ಎಂಬ ಅವರಿಬ್ಬರುನ್ನು ಚಿಂತೆಗೀಡು ಮಾಡಿದೆ. ಈ ಪುಟ್ಟ ಗುಡಿಸಲಿನ ಒಳಗೆ ಮಳೆಗಾಲದಲ್ಲಿ ಮುರುಟಿ ಹೋಗುವ ಈ ಅಶಕ್ತ ಕುಟುಂಬದ ತಾಯಿ ಮಗನಿಗೆ ತಾತ್ಕಾಲಿಕ ಆಸರೆಯ ಅಗತ್ಯತೆಯಿದೆ. ವ್ಯವಸ್ಥೆ ಕಲ್ಪಿಸಿದಲ್ಲಿ ಉತ್ತಮ ಇಲ್ಲವಾದಲ್ಲಿ ಪ್ರಾಣ ಭೀತಿಯಿಂದಲೆ ಈ ಮಳೆಗಾಲ ಈ ಕುಟುಂಬ ಕಳೆಯಬೇಕಿದೆ. ಸಹೃದಯರು ಕೂಡ ನೆರವಿನ ಹಸ್ತ ಚಾಚಲು ಅವಕಾಶವಿದೆ.
ಹತಾಶೆಯಲ್ಲಿರುವ ೯೦ರ ವಯಸ್ಸಿನ ಚಿನ್ನಮ್ಮ ಪ್ರತಿಕ್ರೀಯೆ ನೀಡಿ “ಮೂರು ಮಕ್ಕಳ ಪೈಕಿ ಇಬ್ಬರನ್ನು ಕಳೆದುಕೊಂಡಿದ್ದೇನೆ. ಬಂದವರಲ್ಲಿ ನಮ್ಮವರೆ ಆದ ಸಮಾಜ ಸೇವಕ ಮಾಜಿ ಜಿಪಂ ಸದಸ್ಯ ಧನಂಜಯ ಅಡ್ಪಂಗಾಯರು ಮೊದಲಿಗರು. ಅವರು ನಮಗೆ ದೇವರಿದ್ದಂತೆ. ಅವರ ನೆರವು ಇಲ್ಲವಾಗಿದ್ದರೆ ನಾವಿಂದು ಜೀವಂತ ಇರುವುದಕ್ಕೆ ಸಾಧ್ಯವಿರಲಿಲ್ಲ. ಕಷ್ಟದ ಸಮಯದಲ್ಲಿ ಸ್ಪಂದಿಸಿ ಬೇಕಾದ ಆಹಾರ ಸಾಮಾಗ್ರಿ ಒದಗಿಸಿ ಸಹಕರಿಸುತ್ತಿದ್ದಾರೆ. ಕಷ್ಟ ಹೇಳಿಕೊಂಡಾಗ ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತಾ ಬಂದಿದ್ದಾರೆ. ಇನ್ನೂ ಹಲವು ಮಂದಿ ನಮಗೆ ಸಹಕಾರ ನೀಡಿದ್ದಾರೆ. ಬಿಸಿಲು ಗಾಳಿ ಮಳೆಗೆ ಬೆಚ್ಚಗೆ ಇರಲು ಮನೆಯ ಕನಸು ಈಡೇರಿಸದರೆ ಸಾಕು ಅಂತ ಹೇಳಿದರು.

Related posts

Leave a Reply