Header Ads
Header Ads
Breaking News

ಸುಳ್ಯ ತಾಲೂಕಿನ ಕಲ್ಮಕಾರು ಶೇಟ್ಟಿಕಜೆ ಸೇತುವೆ, ಬಿದಿರಿನ ಸೇತುವೆಯಲ್ಲಿ ಸಾರ್ವಜನಿಕರ ನಿತ್ಯ ಸರ್ಕಸ್


ಮುಂಗಾರು ಆರಂಭವಾಯಿತು ಎಂದರೆ ಇಲ್ಲಿಯವರಿಗೆ ಸಂಕಷ್ಟದ ಸರಮಾಲೆಗಳ ಅವಧಿ. ಮಕ್ಕಳಿಗೆ ಹೊಳೆ ದಾಟುವ ಚಿಂತೆ. ಪೋಷಕರಿಗೆ ಮಕ್ಕಳ ಪ್ರಾಣದ ಭೀತಿ. ಘಡಘಡ ಅಲುಗುತ್ತಿರುವ ಬಿದಿರಿನ ತೂಗು ಸೇತುವೆ ಮೇಲೆ ಪ್ರಾಣ ಪಣಕ್ಕೆ ಇಟ್ಟು ಸಾಗುವ ಆತಂಕ ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದ ಶೆಟ್ಟಿಕಜೆ ಎಂಬಲ್ಲಿ ನಮಗೆ ಸಿಗುತ್ತದೆ.
ಕಲ್ಮಕಾರು ಗ್ರಾಮದಿಂದ ಅಂಜನಕಜೆ ಕೊಪ್ಪಡ್ಕ ಗುಳಿಕಾನ ಗುಡ್ಡೆಕಾನ ಪೆರ್ಮುಕಜೆ ಭಾಗಗಳನ್ನು ತಲುಪಲು ಶೆಟ್ಟಿಕಜೆ ಎಂಬ ಸ್ಥಳದಲ್ಲಿ ಹರಿಯುವ ಕಲ್ಮಕಾರು ಹೊಳೆ ದಾಟಿ ತೆರಳಬೇಕು. ಮಳೆಗಾಲದಲ್ಲಿ ಈ ಹೊಳೆ ನೆರೆಯಿಂದ ತುಂಬಿ ಹರಿಯುತ್ತಿದೆ. ಇದರಿಂದ ಈ ಭಾಗದವರಿಗೆ ಸಮಸ್ಯೆ ಆಗುತ್ತದೆ. ಈ ಪ್ರದೇಶದಿಂದ ಕಲ್ಮಕಾರು ಅಂಗನವಾಡಿ ಪ್ರಾಥಮಿಕ ಶಾಲೆ, ಹಾಗೂ ಇತರೆಡೆಯ ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳಿದ್ದಾರೆ. ಅವರಿಗೆ ಮಳೆಗಾದಲ್ಲಿ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಮಳೆಗಾಲದಲ್ಲಿ ಹೊಳೆ ದಾಟುವುದಕ್ಕೆ ಸಾಧ್ಯವಿಲ್ಲ ಎಂದು ಸ್ಥಳಿಯರು ತಾತ್ಕಾಲಿಕ ಬಿದಿರಿನೆ ತೂಗು ಸೇತುವೆ ನಿರ್ಮಿಸಿಕೊಂಡಿದ್ದಾರೆ. ಅದು ಅಪಾಯದ ಸ್ಥಿತಿಯಲ್ಲಿದೆ.
ಇಲ್ಲಿ ನಿವಾಸಿಗಳು ಜೀವ ಕೈಯಲ್ಲಿ ಇಟ್ಟಕೊಂಡು ಸೇತುವೆ ದಾಟುವ ಸಾಹಸ ಮಾಡುತ್ತಿದ್ದಾರೆ. ಇಲ್ಲಿಗೆ ಶಾಶ್ವತವಾಗಿ ಸೇತುವೆಯೊಂದನ್ನು ನಿರ್ಮಿಸಿಕೊಡಿ ಎಂದು ನಲವತ್ತು ವರ್ಷಗಳಿಂದ ಬೇಡಿಕೆ ಇಟ್ಟಿದ್ದಾರೆ ಇಲ್ಲಿಯ ನಾಗರಿಕರು. ಇವರ ಬೇಡಿಕೆಗೆ ಜನಪ್ರತಿನಿಧಿಗಳ ಮನ ಕರಗಲಿಲ್ಲ. ವರ್ಷಂಪ್ರತಿ ನೀಡುವ ಭರವಸೆ ಮಾತ್ರ ಬಂಡೆ ಕಲ್ಲಿನ ಮೇಲೆ ನೀರು ಸುರಿದಂತೆ ಆಗಿದೆ. ಇದುವರೆಗೆ ಪ್ರಯೋಜನಕ್ಕೆ ಬಂದಿಲ್ದ. ಪ್ರತಿದಿನ ಮಕ್ಕಳ ಪೋಷಕರು ಬೆಳಗ್ಗೆ ಸಂಜೆ ಈ ಎರಡು ಅವಧಿ ಅರ್ಧ ದಾರಿ ತನಕ ಸೇತುವೆ ಇರುವ ಸ್ಥಳದ ತನಕ ಮಕ್ಕಳನ್ನು ಕರೆತಂದು ಸೇತುವೆ ದಾಟಿಸಿ ಶಾಲೆಗೆ ಕಳುಹಿಸಿ ಬಳಿಕ ಮನೆ ಸೇರುತ್ತಾರೆ. ಸಂಜೆ ಮತ್ತೆ ಸೇತುವೆಯ ದಡದ ಬದಿ ಕಾದು ಕುಳಿತು ಶಾಲೆ ಬಿಟ್ಟಾಗ ಮನೆಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಾರೆ. ಈ ರಸ್ತೆ ಬಿಟ್ಟರೆ ಸುತ್ತು ಬಳಸುವ ರಸ್ತೆಯಲ್ಲಿ ಕೂಡ ಹೊಳೆ ಸಿಗುತ್ತದೆ ಇದು ಕೂಡ ಮಳೆಗಾಲ ನೆರೆಗೆ ತುಂಬಿ ಹರಿಯುವುದರಿಂದ ಆ ರಸ್ತೆಯೂ ಪ್ರಯೋಜನಕ್ಕೆ ಬರುತಿಲ್ಲ. ಕುಟುಂಬಗಳು ವಾಸವಿರುವ ಈ ಪ್ರದೇಶದ ಸುತ್ತ ಹೊಳೆ ಹರಿಯುತ್ತಿರುವದರಿಂದ ಈ ಊರು ದ್ವೀಪದಂತಿದೆ.
ಕಳೆದ ವರ್ಷ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭ ಚಿಲ್ತಡ್ಕ ಇಲ್ಲಿಗೆ ಭೇಟಿ ನೀಡಿದ್ದರು. ಬಳಿಕ ಅವರು ಸೇರಿ ಸ್ಥಳಿಯರ ನಿಯೋಗವೊಂದು ಅಲ್ಪದರಲ್ಲೆ ರಾಜ್ಯ ಲೊಕೋಪಯೋಗಿ ಸಚಿವರನ್ನು ಭೇಟಿ ಮಾಡಿತ್ತು. ಈ ವೇಳೆ ಶೆಟ್ಟಿಕಜೆ ಸೇತುವೆಗೆ ೫೫ ಲಕ್ಷ ಸೇರಿ ಇಲ್ಲಿಯ ಕೈಪಡ್ಕ, ದಬ್ಬಡ್ಕ ಎಂಬ ಮೂರು ಸ್ಥಳಗಳಲ್ಲಿ ಕಿರು ಸೇತುವೆ ನಿರ್ಮಾಣಕ್ಕೆ ಒಟ್ಟ ೧.೨೦ ಕೋಟಿ ಅನುದಾನ ಬಿಡುಗಡೆಯ ಭರವಸೆ ಪಡೆದು ಬಂದಿದ್ದರು. ಅನಂತರದಲ್ಲಿ ಊರಿನಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಂಡಿದೆ ಕಾಮಗಾರಿ ಆರಂಭವಾಗುತ್ತದೆ ಎಂಬ ವ್ಯಾಪಕ ಪ್ರಚಾರ ಆಯಿತು. ಆದರೆ ಸ್ಥಳಿಯರ ನಿರೀಕ್ಷೆ ಸುಳ್ಳಾಯಿತು.

Related posts

Leave a Reply