Header Ads
Header Ads
Breaking News

ಸುಳ್ಯ ತಾಲೂಕು ಪಂಚಾಯತ್ ಸಾಮಾನ್ಯ ಸಭೆ

ಸುಳ್ಯ: ತಾಲೂಕಿನಲ್ಲಿ ಬಡ ಜನರ ಕಷ್ಟಕ್ಕೆ ನೆರವಾಗುತ್ತಿದ್ದ 108 ಅಂಬ್ಯುಲೆನ್ಸ್ ಸೇವೆಯ ಸಮಸ್ಯೆ ವ್ಯಾಪಕವಾಗಿದೆ. ಸುಬ್ರಹ್ಮಣ್ಯದಲ್ಲಿದ್ದ ೧೦೮ ವಾಹನವನ್ನು ಬೆಳ್ಳಾರೆಗೆ ವರ್ಗಾವಣೆ ಮಾಡಲಾಗಿದೆ. ಪ್ರಸಿದ್ದ ಯಾತ್ರಾ ಕ್ಷೇತ್ರದಲ್ಲಿ ಯಾವುದೇ ಅಂಬ್ಯುಲೆನ್ಸ್ ಸೇವೆಗಳು ಇಲ್ಲದೇ ಜನರು ಪರದಾಡುತ್ತಿದ್ದಾರೆ. ಆರೋಗ್ಯ ಇಲಾಖೆ ಸಂಪೂರ್ಣ ನಿಷ್ಕ್ರೀಯವಾಗಿದೆ. ೧ ವಾರದ ಒಳಗೆ ಸಮಸ್ಯೆಗೆ ಸ್ಪಂದನೆ ನೀಡದಿದ್ದರೆ  ಧರಣಿ ಸತ್ಯಾಗ್ರಹ ನಡೆಸುತ್ತೇನೆ ಎಂದು ತಾಲೂಕು ಪಂಚಾಯತ್ ವಿಪಕ್ಷ ನಾಯಕ ಆಶೋಕ್ ನೆಕ್ರಾಜೆ ಎಚ್ಚರಿಸಿದ್ದಾರೆ.

ಅವರು ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಅವರ ಅಧಕ್ಷತೆಯಲ್ಲಿ ನಡೆದ ತಾ.ಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿ ತಾಲೂಕಿನಲ್ಲಿರುವ ೧೦೮ ಅಂಬ್ಯುಲೆನ್ಸ್‌ಗಳ ಸ್ಥಿತಿ ಚಿಂತಾಜನಕವಾಗಿದೆ. ಸುಬ್ರಹ್ಮಣ್ಯದಲ್ಲಿದ್ದ ವಾಹನವನ್ನು ಬೆಳ್ಳಾರೆಗೆ ವರ್ಗಾವಣೆ ಮಾಡಲಾಗಿದೆ. ಈಗ ಬೆಳ್ಳಾರೆಯಲ್ಲಿಯೂ ಈ ವ್ಯವಸ್ಥೆ ಇಲ್ಲ. ಈ ಬಗ್ಗೆ ಸೂಕ್ತ ಕ್ರಮವನ್ನು ಆರೋಗ್ಯ ಇಲಾಖೆ ಕೈಗೊಳ್ಳಬೇಕು. ಇಲ್ಲದಿದ್ದರೆ ಅಂಬ್ಯುಲೆನ್ಸ್ ಸೇವೆಗಾಗಿ ಧರಣಿ ನಡೆಸುತ್ತೇನೆ ಎಂದು ಎಚ್ಚರಿಸಿದರು. ಇದಕ್ಕೆ ಧ್ವನಿಗೂಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಧರಣಿ ನಡೆಸುವುದಾದರೆ ನಮ್ಮ ಬೆಂಬಲ ಕೂಡ ಇದೆ ಎಂದರು.

ಜಿಲ್ಲಾ ಆಸ್ಪತ್ರೆ ಮಂಗಳೂರಿನ ವೆನ್‌ಲಾಕ್‌ನಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ದಾಖಲಾದ ರೋಗಿಗಳನ್ನು ಖಾಸಾಗಿ ಆಸ್ಪತ್ರೆಗಳಿಗೆ ಕಳುಹಿಸುತ್ತಿದ್ದಾರೆ. ಸರಕಾರದ ಆರೋಗ್ಯ ಕಾರ್ಡ್, ಆಯುಷ್ಮಾನ್ ಯೋಜನೆಗಳು ಬಡವರಿಗೆ ಸಿಗುತ್ತಿಲ್ಲ ಎಂದು ಸದಸ್ಯರಾದ ಆಶೋಕ್ ನೆಕ್ರಾಜೆ ಮತ್ತು ಅಬ್ದುಲ್ ಗಫೂರು ಹೇಳಿದರು. ಜಿಲ್ಲಾ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಮಸ್ಯೆ ಇದೆ. ಕೊಡಗು ಮತ್ತು ಹಾಸನ ಜಿಲ್ಲೆಗಳಿಂದ ಹೆಚ್ಚಿನ ಜನರು ಚಿಕಿತ್ಸೆ ನಮ್ಮ ಜಿಲ್ಲೆಗೆ ಬರುವುದರಿಂದ ಸಮಸ್ಯೆ ಉದ್ಭವವಾಗಿದೆ ಎಂದು ಜಿ.ಪಂ ಸದಸ್ಯ ಹರೀಶ್ ಕಂಜಿಪಿಲಿ ಹೇಳಿದರು.

ತಾಲೂಕು ಕಚೇರಿಯಲ್ಲಿ ಯಾವುದೇ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ದೊಡ್ಡ ಮಟ್ಟದ ಅಧಿಕಾರಿಗಳು ಸೂಕ್ತವಾಗಿ ಸ್ಪಂದನೆ ನೀಡಿದರೂ ಕಚೇರಿಯಲ್ಲಿರುವ ಸಹಾಯಕರು ಮತ್ತು ಕೇಸ್ ವರ್ಕರ್‌ಗಳು ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಗನ್ ಲೈಸನ್ಸ್‌ಗಳನ್ನು ನೀಡದೆ ಸತಾಯಿಸುತ್ತಿದ್ದಾರೆ. ತಾಲೂಕು ಕಚೇರಿಯಲ್ಲಿರುವ ಕೇಸ್ ವರ್ಕರ್‌ಗಳನ್ನು ತಕ್ಷಣ ಕೆಲಸದಿಂದ ತೆಗೆದು ಹಾಕಬೇಕು ಇಲ್ಲದಿದ್ದರೆ ಬೇರೆಡೆಗೆ ವರ್ಗಾವಣೆ ಮಾಡಿಸಬೇಕು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಯವರಿಗೆ ಬರೆಯಬೇಕು ಎಂದು ಆಶೋಕ್ ನೆಕ್ರಾಜೆ ಹೇಳಿದರು.

ಸಾಮಾನ್ಯ ಸಭೆಯ ಪಾಲನಾ ವರದಿಯಲ್ಲಿ ಅಧಿಕಾರಿಗಳು ನೀಡಿದ ಉತ್ತರ ಸರಿಯಾಗಿಲ್ಲ. ಸದನಕ್ಕೆ ಸರಿಯಾದ ಉತ್ತರ ನೀಡಬೇಕು ಎಂದು ರಾಧಾಕೃಷ್ಣ ಬೊಳ್ಳೂರು ಹೇಳಿದರು.

ಸುಬ್ರಹ್ಮಣ್ಯದಲ್ಲಿರುವ ಲಾಡ್ಜ್‌ಗಳಲ್ಲಿ ಸ್ನಾನ ಗೃಹದ ನೀರನ್ನು ಸಾರ್ವಜನಿಕವಾಗಿ ಹೊರಗಡೆ ಬಿಟ್ಟು ಕೊಳಚೆ ನಿರ್ಮಾಣವಾಗುತ್ತಿದೆ. ಇದರಿಂದ ನಗರದ ಸೌಂದರ್ಯ ಸಂಪೂರ್ಣ ಕಣ್ಮರೆಯಾಗಿದೆ ಲಾಡ್ಜ್ ಮಾಲಕರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಶೋಕ್ ನೆಕ್ರಾಜೆ ಒತ್ತಾಯಿಸಿದರು.

ಶಿಕ್ಷಣ ಇಲಾಖೆಯಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಶಿಷ್ಟಾಚಾರವನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ ಎಂಬ ವಿಷಯದಲ್ಲಿ ಚರ್ಚೆ ನಡೆಯಿತು. ಸರಕಾರಿ ಶಾಲೆ, ಅನುದನಿತ ಶಾಲೆ ಮತ್ತು ಖಾಸಾಗಿ ಶಾಲೆಗಳು ಶಿಷ್ಟಾಚಾರಗಳನ್ನು ಪಾಲಿಸಬೇಕು. ಈ ಬಗ್ಗೆ ಈಗಾಗಲೇ ಸಭೆ ನಡೆಸಿ ಸೂಚಿಸಿದ್ದೇನೆ. ಸಭೆಗೆ ಬಾರದ ಶಾಲಾ ಮುಕ್ಯೋಪಾಧ್ಯಾಯರಿಗೆ ನೋಟಿಸ್ ನೀಡಿದ್ದೇನೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಭೆಗೆ ತಿಳಿಸಿದರು.

ತಾಲೂಕಿನಲ್ಲಿ ಹಲವು ಕಡೆಗಳಲ್ಲಿ ಮದ್ಯದಂಗಡಿಗಳನ್ನು ತೆರೆಯಲಾಗುತ್ತಿದೆ. ಅಲ್ಲದೇ ಅಕ್ರಮವಾಗಿ ಕಳಪೆ ಗುಣಪಟ್ಟದ ಮದ್ಯ ಪೂರೈಕೆ ಆಗುತ್ತಿದೆ. ಇದಕ್ಕೆ ಹಲವಾರು ಯುವ ಜನರು ಬಲಿಯಾಗುತ್ತಿದ್ದಾರೆ. ಪಂಬೆತ್ತಾಡಿ-ಐವತೊಕ್ಲು ಭಾಗಗಳಲ್ಲಿ ಸುಮಾರು ಜನ ಯುವಕರು ಮದ್ಯದ ಚಟಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಅಬಕಾರಿ ಸೂಕ್ತ ರೀತಿಯಲ್ಲಿ ಗಮನ ಹರಿಸಬೇಕು ಎಂದು ಸದಸ್ಯ ಅಬ್ದುಲ್ ಗಫೂರು ಹೇಳಿದರು.

ಸಭೆಯಲ್ಲಿ ತಾ.ಪಂ ಉಪಾಧ್ಯಕ್ಷೆ ಶುಭದಾ ಎಸ್. ರೈ, ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ತಾ.ಪಂ ಮುಖ್ಯ ಕಾರ್ಯನಿರ್ವಾಹಣಧಿಕಾರಿ ಮಧುಕುಮಾರ್, ಜಿ.ಪಂ ಸದಸ್ಯರು, ತಾ.ಪಂ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply