Header Ads
Header Ads
Breaking News

ಸುಳ್ಯ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ

ನಮ್ಮ ಮಕ್ಕಳನ್ನು ಮಾತೃ ಭಾಷಾ ಕಲಿಕೆಯಿಂದ ವಂಚಿತರನ್ನಾಗಿ ಮಾಡುವ ಮೂಲಕ ನಮ್ಮ ಮಕ್ಕಳಿಗೆ ದ್ರೋಹಮಾಡುತ್ತಿದ್ದೇವೆ. ಪ್ರಾಥಮಿಕ ಶಿಕ್ಷಣವಾದರೂ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು. ಮಕ್ಕಳ ಶೃಜನಾಶೀಲತೆಯ ದೃಷ್ಟಿಯಿಂದ ಮತ್ತು ಬೆಳವಣಿಗೆಗೆ ಮಾತೃಭಾಷಾ ಶಿಕ್ಷಣ ಇಂದಿನ ಸಮಾಜಕ್ಕೆ ಅಗತ್ಯ ಇದೆ ಎಂದು ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ| ರವಿಕಾಂತೇ ಗೌಡ ಹೇಳಿದರು.

ಅವರು ದ.ಕ.ಜಿಲ್ಲಾ ಸಾಹಿತ್ಯ ಪರಿಷತ್, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಶ್ರೀ ಮಲ್ಲಿಕಾರ್ಜುನ ದೇವಾಲಯ ತೊಡಿಕಾನ, 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟನಾ ಸಮಿತಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ತೊಡಿಕಾನದಲ್ಲಿ ನಡೆದ ಸುಳ್ಯ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿ ಮಾತನಾಡಿ ನಮ್ಮ ನಾಗರೀಕತೆಯನ್ನು ಅಳೆಯುವುದು ಕಲಾಸೃಷ್ಟಿ. ಸಾಹಿತ್ಯಕ್ಕೆ ಜೀವಪರವಾದ ಕ್ರಿಯೆ ಇರಬೇಕು. ಇಲ್ಲದಿದ್ದರೆ ಅದು ಜೀವಂತ ಉಳಿಯುವುದಿಲ್ಲ. ಸಾಹಿತ್ಯಗಳು ಓದುಗ ಮತ್ತು ಲೇಖಕನ ಮಧ್ಯೆ ಸಂವಾದ ಏರ್ಪಡಿಸುವ ಸಾಧನ ಆಗಬೇಕು. ಸಾಹಿತ್ಯ ಕೃತಿಗಳು ತಮ್ಮ ಜ್ಞಾನವನ್ನು ಬೆಳೆಸುವುದರೊಂದಿಗೆ ಥೈರ್ಯ ನೀಡುತ್ತದೆ. ಧಾರಣಾ ಶಕ್ತಿಗಾಗಿ ಸಾಹಿತ್ಯ ಸಾಧನ ಆಗಬೇಕು. ವಿಪರೀತ ಪ್ರಚಾರ ಭರಾಟೆಯಲ್ಲಿ ಮಾಧ್ಯಮ ಕ್ಷೇತ್ರವೂ ಇಂದು ತನ್ನ ಭಾಷಾ ಗುಣಮಟ್ಟವನ್ನು ಕಳೆದುಕೊಳ್ಳುತ್ತಿದೆ ಎಂದು ಡಾ| ರವಿಕಾಂತೇ ಗೌಡ ವಿಷಾದ ವ್ಯಕ್ತಪಡಿಸಿದರು.


ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸಾಧಕರನ್ನು ಸನ್ಮಾನಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷೆ ಶ್ರೀಮತಿ ಲಲಿತಾಜ ಮಲ್ಲಾರ ಸಮಾರೋಪದ ನುಡಿಗಳನ್ನಾಡಿದರು. ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವಾಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಗೌಡ ಸಮ್ಮೇಳನಾಧ್ಯಕ್ಷರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ತಾಲೂಕಿನ 10ಮಂದಿ ಸಾಧಕರಾದ ಸುಶೀಲಮ್ಮ ಮರುವಳ, ವಿಶ್ವನಾಥ ನಾಯರ್ ಎ.ಜಿ.ವೆಂಕಟ್ರಮಣ, ಎ.ಸಿ.ವಸಂತ, ಯು.ಡಿ.ಶೇಖರ, ಶಿವಾನಂದ ಕುಕ್ಕುಂಬಳ ಯು.ಬಿ.ಚಕ್ರಪಾಣಿ, ಎಂ.ಕೆ.ರಾಮಚಂದ್ರ, ಮಂಜುನಾಥ ಬಂಗ್ಲೆಗುಡ್ಡೆ, ಪಿ.ಜಯರಾಮ ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಸುಳ್ಯ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹರಪ್ರಸಾದ್, ಸಂಘಟನಾ ಸಮಿತಿ ಅಧ್ಯಕ್ಷ ದಿವಾಕರ ರೈ, ಕೋಶಾಧಿಕಾರಿ ದಯಾನಂದ ಆಳ್ವ, ಸುಳ್ಯ ತಾಲೂಕು ಸಾಹಿತ್ಯ ಪರಿಷತ್ ಕಾರ್ಯದರ್ಶಿ ಚಂದ್ರಶೇಖರ ಪೇರಾಲು, ಸಂಘಟನಾ ಸಮಿತಿ ಕೋಶಾಧಿಕಾರಿ ಆನಂದ ಕಲ್ಲಗದ್ದೆ, ತೊಡಿಕಾನದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲು ಮೂಲೆ, ತಾಲೂಕು ಪಂಚಾಯಿತಿ ಸದಸ್ಯೆ ಪುಷ್ಪಾಮೇದಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮ ಸಂಯೋಜನ ಸಂಚಾಲಕ ಕೆ.ಆರ್.ಗಂಗಾಧರ್ ಸನ್ಮಾನಿತರಿಗೆ ಅಭಿನಂದನಾ ನುಡಿಗಳನ್ನಾಡಿದರು. ಸೋಮಶೇಖರ ಕೊಯಿಂಗಾಜೆ ಸ್ವಾಗತಿಸಿ, ಸಂಘಟನಾ ಸಮಿತಿ ಪ್ರ.ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ ವಂದಿಸಿದರು. ಚಿದಾನಂದ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.

Related posts

Leave a Reply