Header Ads
Breaking News

ಸುಳ್ಯ ನಗರ ಪಂಚಾಯತ್ ಚುನಾವಣೆ: ನಗರದ 20ವಾರ್ಡ್‌ಗಳಲ್ಲಿ ಶಾಂತಿಯುತ ಮತದಾನ

ನಿನ್ನೆ ರಾಜ್ಯದಾದ್ಯಂತ ಪುರಸಭಾ ವ್ಯಾಪ್ತಿಯ ಚುನಾವಣೆ ನಡೆದಿದ್ದು, ಲೋಕಲ್ ಫೈಟ್ ಎಂದೇ ಬಿಂಬಿತವಾಗಿದ್ದ ಸುಳ್ಯ ನಗರ ಪಂಚಾಯತ್‍ನ 20 ವಾರ್ಡ್‍ಗಳಿಗೆ ನಡೆದ ಮತದಾನ ಶಾಂತಿಯುತವಾಗಿ ನಡೆಯಿತು. ಒಟ್ಟು 20 ವಾರ್ಡ್‍ಗಳಲ್ಲಿ ಶೇ. 75.68 ಮತಗಳು ಚಲಾವಣೆಯಾಗಿವೆ.

ಸುಳ್ಯ ನಗರ ಪಂಚಾಯತ್ 20ವಾರ್ಡ್‍ಗಳಿಗೆ ಮತದಾನ ನಡೆದಿದ್ದು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಮತ ಎಣಿಕೆ ಮೇ 31ಕ್ಕೆ ನಡೆಯಲಿದ್ದು ಅಂದು ಪಕ್ಷಗಳ ಮತ್ತು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಬೆಳಿಗ್ಗೆ 7ಗಂಟೆಯಿಂದ ಸಂಜೆ 5ರವರೆಗೂ ಮತದಾನ ಸಾಗಿತ್ತು. ಮದ್ಯಾಹ್ನದವರೆಗೆ ಬಿರುಸ್ಸಿನ ಮತದಾನ ನಡೆದಿದ್ದು, ಆ ಬಳಿಕ ಬಿರುಸ್ಸು ಕಡಿಮೆಯಾಗಿತ್ತು. ಪ್ರತೀ ಬೂತ್‍ಗಳಲ್ಲೂ ವಿಕಲಚೇತನ ಮತದಾರರಿಗೆ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ಎಲ್ಲಾ ಬೂತ್‍ಗಳಲ್ಲಿ ವ್ಹೀಲ್ ಚಯರ್‍ಗಳನ್ನು ಕಲ್ಪಿಸಲಾಗಿದ್ದು ಎಲ್ಲರೂ ಮತದಾನ ಮಾಡಲು ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು.

ಕ್ಷೇತ್ರವ್ಯಾಪ್ತಿಯ ಎಲ್ಲಾ ಬೂತ್‍ಗಳ ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ಕೇಂದ್ರವನ್ನು ಸುಳ್ಯದ ಎನ್ನೆಂಸಿನಲ್ಲಿ ಮಾಡಲಾಗಿತ್ತು. ಇಲ್ಲಿ ಚುನಾವಣಾ ಸಿಬ್ಬಂದಿಗೆ ಚುನಾವಣಾ ಕಾರ್ಯ ನಿರ್ವಹಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರತೀ ಬೂತ್‍ಗಳಿಗೆ ತೆರಳುವ ಸಿಬ್ಬಂದಿಗೆ ಇಲ್ಲಿ ಸೂಕ್ತ ಮಾಹಿತಿ ಹಾಗೂ ಇವಿಎಂಗಳನ್ನು ನೀಡಲಾಗಿತ್ತು.

ಮತದಾನ ಸಾಂಗವಾಗಿ ನಡೆಯಲು ಪ್ರತಿ ಬೂತ್‍ಗಳಿಗೆ ಮೂವರು ಭದ್ರತಾ ಸಿಬ್ಬಂಧಿಗಳೊಂದಿಗೆ ತಲಾ ಒಬ್ಬರು ಪಿಆರ್‍ಒ ಸಹಾಯಕ ಪಿಆರ್‍ಒ ಅಧಿಕಾರಿಗಳು, ಇಬ್ಬರು ಮತಗಟ್ಟೆ ಅಧಿಕಾರಿಗಳು ಅಲ್ಲದೇ ಒಬ್ಬರು ಡಿಗ್ರೂಪ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಕ್ಷೇತ್ರದಲ್ಲಿ ವಿಕಲಚೇತನ ಮತ್ತು ಹಿರಿಯ ನಾಗರೀಕರು ಸುಲಭವಾಗಿ ಮತದಾನ ಮಾಡಲು ಅನುಕೂಲವಾಗುವಂತೆ 20 ಮತಕೇಂದ್ರಗಳಿಗೆ ಒಂದೊಂದು ವೀಲ್ ಚೆಯರ್‍ಗಳನ್ನು ನೀಡಲಾಗಿತ್ತು. ಕಾಂಗ್ರೆಸ್ ಮತ್ತು ಬಿಜೆಪಿಯಿಂದ ತಲಾ 20 ಅಭ್ಯರ್ಥಿಗಳು, 10 ಜನ ಪಕ್ಷೇತರ ಅಭ್ಯರ್ಥಿಗಳು ಎಸ್.ಡಿಪಿಐ 2 ಮತ್ತು ಜೆಡಿಎಸ್‍ನ ಒಬ್ಬ ಅಭ್ಯರ್ಥಿಗಳು ಸೇರಿ ಒಟ್ಟು 53 ಮಂದಿ ಕಣದಲ್ಲಿದ್ದು. ಅಭ್ಯರ್ಥಿಗಳ ಭವಿಷ್ಯ ಮೇ. 31 ರಂದು ನಿರ್ಧಾರವಾಗಲಿದೆ. ಮತಯಂತ್ರಗಳನ್ನು ತಾಲೂಕು ಕಚೇರಿಯಲ್ಲಿ ಇಡಲಾಗಿದ್ದು ತಾಲೂಕು ಕಚೇರಿಯಲ್ಲೆ ಮತ ಎಣಿಕೆ ನಡೆಯಲಿದೆ.

ಚುನಾವಣೆಯ ಬಗ್ಗೆ ಶಾಸಕ ಎಸ್. ಅಂಗಾರ ಪ್ರತಿಕ್ರೀಯೆ ನೀಡಿ ಬೆಳಿಗ್ಗೆಯಿಂದ ನಗರ ವ್ಯಾಪ್ತಿಯ ಎಲ್ಲಾ ವಾರ್ಡ್‍ಗಳ ಬೂತ್ ಕೇಂದ್ರಗಳಿಗೆ ಬೇಟಿ ನೀಡಿದ್ದೇನೆ. ಹೆಚ್ಚಿನ ಎಲ್ಲಾ ಬೂತ್‍ಗಳಲ್ಲಿ ಬಿಜೆಪಿ ಪರವಾದ ವಾತಾವರಣ ಇದೆ. ನಗರದ 20 ವಾರ್ಡ್‍ಗಳಲ್ಲಿ ಕನಿಷ್ಠ 16 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಲಿದೆ. ದೇಶದಲ್ಲಿ ಆಗುವ ಬೆಳವಣಿಗೆಗಳು ಬಿಜೆಪಿಗೆ ಪೂರಕವಾಗಿದೆ ಎಂದು ಹೇಳಿದರು. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ ಪ್ರತಿಕ್ರಿಯೆ ನೀಡಿ ನಗರದ 20 ವಾರ್ಡ್‍ಗಳಲ್ಲಿ ಕೂಡ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಮನೆ ಮನೆ ಭೇಟಿ ಮಾಡಿ ಕೆಲಸ ಮಾಡಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡಿದ್ದಾರೆ. ಕಾಂಗ್ರೆಸ್ 12 ರಿಂದ 13 ವಾರ್ಡ್‍ಗಳಲ್ಲಿ ಜಯಗಳಿಸಿ ನಗರ ಪಂಚಾಯತ್‍ನಲ್ಲಿ ಆಡಳಿತ ಹಿಡಿಯುವಂತೆ ಎಲ್ಲಾ ಸಾದ್ಯತೆಗಳಿವೆ ಎಂದು ಹೇಳಿದರು.

Related posts

Leave a Reply

Your email address will not be published. Required fields are marked *