Header Ads
Header Ads
Breaking News

ಸುಳ್ಯ: ನ.ಪಂ ಪ್ರಗತಿ ಪರಿಶೀಲನಾ ಸಭೆ, ಜಾಗ ಖರೀದಿಸಲು ಸರಕಾರದಿಂದ ಆರ್ಥಿಕ ನೆರವು: ಸಚಿವ ಯು.ಟಿ ಖಾದರ್ ಹೇಳಿಕೆ.

ನಗರ ಪ್ರದೇಶದಲ್ಲಿ ವಸತಿ ನಿರ್ಮಾಣಕ್ಕೆ ಸರಕಾರಿ ಜಾಗದ ಕೊರತೆ ಇದ್ದಲ್ಲಿ ಖಾಸಾಗಿ ಜಾಗ ಖರೀದಿಸಲು ಸರಕಾರ ಆರ್ಥಿಕ ನೆರವು ನೀಡುತ್ತದೆ ಎಂದು ನಗರಾಭಿವೃದ್ದಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.
ಅವರು ಸುಳ್ಯ ನಗರ ಪಂಚಾಯತ್‌ನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ನಗರದಲ್ಲಿ 1000ಕ್ಕೂ ಮಿಕ್ಕಿ ಅರ್ಜಿದಾರರಿಗೆ ಮನೆ ನಿರ್ಮಾಣಕ್ಕೆ ಜಾಗದ ಕೊರತೆ ಇರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು ನ.ಪಂ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಿದರೆ ಹಣ ಬಿಡುಗಡೆ ಮಾಡಲಾಗುತ್ತದೆ ಎಂದರು.
ನ.ಪಂ ಸದಸ್ಯ ಉಮ್ಮರ್ ಮಾತನಾಡಿ ನಗರದ ಜಟ್ಟಿಪಳ್ಳ ಮೊದಲಾದ ಕಡೆ 25 ಎಕರೆಗಿಂತ ಅಧಿಕ ಸರಕಾರಿ ಜಾಗ ಇದೆ. ಈ ಬಗ್ಗೆ ದಖಲೆಗಳನ್ನು ನೀಡಿದ್ದೇನೆ. ಆದರು ಜಾಗ ಇಲ್ಲ ಎನ್ನುವುದು ಏಕೆ ಎಂದು ಪ್ರಶ್ನಿಸಿದರು. ಸದಸ್ಯ ರಮಾನಂದ ರೈ ಮಾತನಾಡಿ ಜಟ್ಟಿಪಳ್ಳದಲ್ಲಿರುವ ಸ್ಥಳದಲ್ಲಿ ಸುಮಾರು 60 ವರ್ಷಗಳಿಂದ ಹಲವು ಕುಟುಂಬಗಳು ವಾಸಿಸುತ್ತಿದ್ದಾರೆ. ಅವರು ಕೃಷಿ, ಮನೆ ಬಿಟ್ಟು ಹೋಗಲು ಸಾಧ್ಯವಿಲ್ಲ. ಸರಕಾರಿ ಜಾಗ ಎಂದು ಆ ಕುಟುಂಬಗಳಿಗೆ ಅನ್ಯಾಯ ಆಗಬಾರದು ಎಂದರು. ಇದಕ್ಕೆ ಉತ್ತರಿಸಿದ ಸಚಿವರು ಜಾಗ ಇದೆ ಎಂದು ಹೇಳಿದ ತಕ್ಷಣ ಅದನ್ನು ವಶ ಪಡಿಸಿಕೊಳ್ಳುವುದಿಲ್ಲ. ಜಿಲ್ಲಾಧಿಕಾರಿಗಳು ಬಂದು ಪರಿಶೀಲನೆ ನಡೆಸಿದ ಬಳಿಕ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಕಂದಾಯ ಇಲಾಖೆ ಪರಿಶಿಲನೆ ನಡೆಸಬೇಕು ಎಂದು ಸೂಚನೆ ನೀಡಿದರು.


ನ.ಪಂ ಸದಸ್ಯ ಕೆ.ಎಂ. ಮುಸ್ತಫ ಮಾತನಾಡಿ ಗ್ರಾಮಾಂತರ ಪ್ರದೇಶದಲ್ಲಿ 2013ರ ಮೊದಲು ಮನೆ ನಿರ್ಮಾಣ ಮಾಡಿದವರಿಗೆ 11 ಬಿ ಬದಲು 9/11 ವಿತರಣೆ ಮಾಡಬಹುದು ಎಂಬ ಆದೇಶ ಇದೆ. ಇಂತಹ ಪ್ರಕರಣಗಳಲ್ಲಿ ನಿಯಾಮವಳಿ ನಗರ ಪ್ರದೇಶಗಳಲ್ಲಿ ಸರಳಿಕರಣ ಆಗಿಲ್ಲ. ಹಾಗಾಗಿ ನಗರ ಯೋಜನೆ ಅನುಷ್ಠಾನಕ್ಕೆ ಬರುವ ಪೂರ್ವದಲ್ಲಿ ಮನೆ ನಿಮಾಇಸಿದವರಿಗೆ ಏಕ ವಿನ್ಯಾಸ ಅನುಮೋದನೆಯಿಂದ ವಿನಾಯಿತಿ ನೀಡಿ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು. ನ.ಪಂ ವ್ಯಾಪ್ತಿಯಲ್ಲಿನ ಒಳರಸ್ತೆಗಳು 9ಮೀ ಇರಬೇಕು ಎಂಬ ಬದಲು 6 ಅಡಿಗೆ ಕಡಿತವಾಗಬೇಕು. ನಗರ ಯೋಜನೆ ಅನುಷ್ಠಾನ ಬರುವ ಪೂರ್ವದಲ್ಲಿ ಮನೆ ನಿರ್ಮಿಸಿದವರಿಗೆ ಮಹಡಿ ನಿರ್ಮಿಸಲು ಸೂಡಾ ನಿಯಮ ಅಳವಡಿಸಬಾರದು ಎಂದು ಮುಸ್ತಾಫ ಹೇಳಿದರು.
ನಗರ ಪಂಚಾಯತ್‌ನಲ್ಲಿ 25ಲಕ್ಷ ರೂ ತೆರಿಗೆ ವಸೂಲಿ ಬಾಕಿ ಇರುವ ಬಗ್ಗೆ ಕೆರಳಿದ ಖಾದರ್ ತೆರಿಗೆ ಸಂಗ್ರಹಿಸದಿದ್ದರೆ ಅಭಿವೃದ್ದಿ ಹೇಗೆ ಸಾಧ್ಯ? ಬಡ ಜನರು ತೆರಿಗೆ ಕಟ್ಟದಿದ್ದರೆ ವಸೂಲಿ ಮಾಡುತ್ತಿರಿ. ಇಲ್ಲಿ ಬಾಕಿ ಇರುವುದು ಯಾರದು ಎಂದು ಪ್ರಶ್ನಿಸಿದ ಅವರು ತಕ್ಷಣ ವಸೂಲಿ ಮಾಡಿ ವರದಿ ನೀಡುವಂತೆ ಸೂಚಿಸಿದರು.
2.84 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಂಡಿರುವ ನಗರದ ಒಳಚರಂಡಿ ಯೋಜನೆಯಿಂದ ಯಾವುದೇ ಪ್ರಯೋಜನ ನಗರಕ್ಕೆ ಆಗಿಲ್ಲ ಎಂದು ನ.ಪಂ ಮಾಜಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಎಂಜಿನಿಯರ್ ತ್ಯಾಜ್ಯ ನೀರು, ಮಳೆ ನೀರು ಚರಂಡಿಯಲ್ಲಿ ಹರಿಯುತ್ತಿದೆ. ತ್ಯಾಜ್ಯ ಸಂಸ್ಕರಣ ಘಟಕ ನಿರುಪಯುಕ್ತವಾಗಿದೆ. ಸೂಕ್ತವಲ್ಲದ ಸ್ಥಳದಲ್ಲಿ ವೆಟ್‌ವೆಲ್ ನಿರ್ಮಿಸಿರುವುದು ಸಮಸ್ಯೆಗೆ ಕಾರಣ ಎಂದು ಇಂಜಿನಿಯರ್ ಸಚಿವರಿಗೆ ಮಾಹಿತಿ ನೀಡಿದರು.

ನಗರದಲ್ಲಿ 66.5ಕೋಟಿ ರೂ ಶಾಶ್ವತ ಕುಡಿಯುವ ನೀರುನ ಪ್ರಸ್ತಾವನೆ ಸಚಿವ ಸಂಪುಟದ ಮುಂದಿರುವ ಬಗ್ಗೆ ಮಾಹಿತಿ ಪಡೆದ ಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಕುರುಂಜಿ ವೃತ್ತ ರಸ್ತೆ ಅವ್ಯವಸ್ಥೆ, ಒಳಾಂಗಣ ಕ್ರೀಡಾಂಗಣ, ತ್ಯಾಜ್ಯ ವಿಲೇವಾರಿ ಸಮಸ್ಯೆ, ಮಿಲಿಟರಿ ಗ್ರೌಂಡ್‌ನಲ್ಲಿ ಮನೆ ನಿರ್ಮಿಸಿದವರಿಗೆ ಹಕ್ಕುಪತ್ರ ಸಿಗದ ಬಗ್ಗೆ, ತಾಲೂಕು ಕ್ರೀಡಾಂಗಣ ನೆನೆಗುದಿಗೆ ಬಿದ್ದ ಬಗ್ಗೆ, ಬೀದಿದೀಪ ಸಮಸ್ಯೆಗಳ ಬಗ್ಗೆ ಎಂ. ವೆಂಕಪ್ಪ ಗೌಡ, ಸಿದ್ದಿಕ್ ಕೊಕ್ಕೊ, ಎನ್.ಎ.ರಾಮಚಂದ್ರ, ಮುಸ್ತಾಫ ಅವರು ಸಚಿವರ ಗಮನಕ್ಕೆ ತಂದರು.

ಸಭೆಯಲ್ಲಿ ನ.ಪಂ ಅಧ್ಯಕ್ಷೆ ಶೀಲಾವತಿ ಮಾಧವ ಗೌಡ, ಉಪಾದ್ಯಕ್ಷೆ ಹರಿಣಾಕ್ಷಿ ನಾರಾಯಣ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕುರುಂಜಿ, ನ.ಪಂ ಸದಸ್ಯರು, ಮುಖ್ಯಾಧಿಕಾರಿ ಮತ್ತಡಿ ಉಪಸ್ಥಿತರಿದ್ದರು.

Related posts

Leave a Reply