Header Ads
Header Ads
Breaking News

ಸುಳ್ಯ :ಸರಕಾರಿ ಪ್ರೌಢಶಾಲೆಯಲ್ಲೊಂದು ಸಾಂಪ್ರದಾಯಿಕ ಚಿತ್ರ ಕಲೆ ವೈಭವ

ಮಧುವನಗಿತ್ತಿಯಂತೆ ಶೃಂಗಾರಗೊಂಡ ಸರಕಾರಿ ಪ್ರೌಢಶಾಲೆ. ಕಟ್ಟಡದ ಗೋಡೆಗಳಲ್ಲಿ ಸಾಂಪ್ರದಾಯಿಕ, ಜನಪದ ಸಂಸ್ಕೃತಿ, ಯಕ್ಷಗಾನ, ಭೂತರಾಧನೆ ಕಲೆಗಳ ಸೌಂದರ್ಯ. ಅಂಗಳದಲ್ಲಿ ಹಸಿರು ಹುಲ್ಲು ಹಾಸಿನ ಉದ್ಯಾನವನ, ಅದರೊಳಗೆ ಪ್ರಾಣಿ ಪಕ್ಷಿಗಳ ಕಲಾಕೃತಿಗಳು, ಸುತ್ತಲೂ ಆಕರ್ಷಕ ಗಿಡಗಳು ಈ ರೀತಿಯ ಕಲೆಗಳ ಅನಾವರಣ ಆಗುತ್ತಿರುವುದು ಅತ್ಯಪರೂಪ. ಮಕ್ಕಳ ಕಲಿಗೆಗೆ ಪೂರಕ ವಾತವರಣ ಕಲ್ಪಿಸುವುದರ ಜೊತೆಗೆ ಜನಾಕರ್ಷಣೆಯ ಕೇಂದ್ರವಾಗಿ ವಿಸ್ಮಯ ಲೋಕ ತೆರೆದಿಟ್ಟಿದೆ.

ಹೌದು ಇದೆಲ್ಲ ಕಂಡುಬರುತ್ತಿರುವುದು ಸುಳ್ಯ ತಾಲೂಕಿನ ಎಲಿಮಲೆಯ ಸರಕಾರಿ ಪ್ರೌಢಶಾಲೆಯಲ್ಲಿ. ದೇಶದ ಎಲ್ಲಾ ಪ್ರದೇಶಗಳ ಸಂಸ್ಕೃತಿಗಳನ್ನು ಬಿಂಬಿಸುವ ಕಲೆಗಳು ಚಿತ್ರಕಲಾ ಶಿಕ್ಷಕರ ಕೈಯಲ್ಲಿ ಅರಳಿ ಕಂಗೊಳಿಸುತ್ತಿದೆ. ಆಂದ್ರಪ್ರದೇಶದ ಕಲಾಂಕಾರಿ ಕಲೆ, ಕರ್ನಾಟಕದ ಯಕ್ಷಗಾನ, ಭೂತರಾಧನೆ, ಆಟಿಕೆಳಂಜ, ಸೂತ್ರದ ಬೊಂಬೆ ಆಟ, ಸ್ವಾಗತ ಕೋರುವ ದೀಪಲಕ್ಷ್ಮೀ, ವಿಶ್ವವಿಖ್ಯಾತ ಹಂಪಿಯ ಕಲ್ಲಿನ ರಥ, ಬೇಲೂರಿನ ಶಿಲಾಬಾಲಿಕೆಯ ಮದನಿಕ ವಿಗ್ರಹದ ಚಿತ್ರ, ಏಕಲವ್ಯನ ಶಬ್ದವೇದಿ ವಿದ್ಯೆ ಕಲಿಯುವ ಚಿತ್ರ, ಒರಿಸ್ಸಾ ಪುರಿ ಜಗನ್ನಾಥ ದೇವಲಯ, ಉತ್ತರ ಕರ್ನಾಟಕದ ಕೋಲಾಟ ಸೇರಿದಂತೆ ಪ್ರಸ್ತುತ ಸಮಾಜದ ಸ್ವಚ್ಚ ಭಾರತ್ ಬಗ್ಗೆ ಮಾಹಿತಿ ನೀಡುವ ಕಲೆಗಳ ಅನಾವರಣಗೊಂಡು ಕೈಬೀಸಿ ಕರೆಯುತ್ತಿದೆ. 

                                                                           

ಇದಕ್ಕೆಲ್ಲಾ ಕಾರಣ ಎಲಿಮಲೆಯ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಿಗಾಗಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಚಿತ್ರಕಲಾ ಶಿಬಿರ. ಸುಮಾರು 20 ರಿಂದ 25 ಮಂದಿ ಶಿಕ್ಷಕರು ಕಳೆದ 3 ದಿನಗಳಿಂದ ಗೋಡೆ ಮೇಲೆ ಕೈಚಳಕ ತೋರಿಸುತ್ತಿದ್ದಾರೆ. ಸುಣ್ಣ ಬಣ್ಣ ಬಳಿದ ಗೋಡೆಯಲ್ಲಿ ಇದೀಗ ಭಾರತೀಯ ಸಂಸ್ಕೃತಿ, ಜನಪದ ಜೀವನ ಶೈಲಿಯನ್ನು ಹೋಲುವ ಚಿತ್ರಕಲೆಗಳು ಆಕರ್ಷಿಸುತ್ತಿದೆ. ಅಳಿವಿನಂಚಿನಲ್ಲಿರುವ ನಮ್ಮ ಜನಪದ ಸಂಸ್ಕೃತಿಗಳನ್ನು ಚಿತ್ರಗಳಲ್ಲಿ ತೋರಿಸುವ ಮೂಲಕ ಮಕ್ಕಳಿಗೆ ಜಾಗೃತಿ ಮೂಡಿಸುವ ಕೆಲಸ ಆಗುತ್ತಿದೆ.
ಚಿತ್ರಕಲಾ ಶಿಬಿರವೂ ನಮ್ಮ ಸಂಸ್ಕೃತಿಯ ಸೊಬಗನ್ನು ತೆರೆದಿಡುವ ಮೂಲಕ ಕಲಾ ಆಸ್ವಾದಕರ ಮನಗೆದ್ದಿದೆ. ಅದರಲ್ಲಿ ಮುಖ್ಯವಾಗಿ ಆಂದ್ರಪ್ರದೇಶದ ಕಲಾಂಕಾರಿ ಚಿತ್ರಕಲೆ ಆಕರ್ಷಿಸುತ್ತಿದೆ. ಇದೊಂದು ನಶಿಸಿ ಹೋಗುತ್ತಿರುವ ಕಲೆ. ಈ ಚಿತ್ರ ಬಿಡಿಸಲು ಮಹಾರಾಷ್ಟ್ರದಲ್ಲಿ ಚಿತ್ರಕಲೆಯಲ್ಲಿ 4ನೇ ವರ್ಷದ ಡಿಪ್ಮೋಮ ಮಾಡುತ್ತಿರುವ ಸಚಿನ್ ಅವರು 5 ದಿನಗಳಲ್ಲಿ ಪೂರ್ತಿಗೊಳಿಸಿದ್ದಾರೆ ಎಂಬುಂದು ವಿಶೇಷ.

ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಚೆನ್ನಕೇಶವ ಮತ್ತು ಕಾರ್ಯದರ್ಶಿ ಮುರಳಿಧರ ಆಚಾರ್ಯ, ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ್ ಪೇರಾಲು ಅವರ ಮುಂದಾಳತ್ವದಲ್ಲಿ ಮತ್ತು ಜಿಲ್ಲೆಯ 20 ಚಿತ್ರಕಲಾ ಶಿಕ್ಷಕರೊಂದಿಗೆ ಶಾಲೆಯ ವಿದ್ಯಾರ್ಥಿಗಳು ಚಿತ್ರಕಲೆಯಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿ ದಾನಿಗಳಿಂದ ಗೋಡೆಯ ಮೇಲೆ ಒಂದೊಂದು ಚಿತ್ರಗಳು ಅರಳಿನಿಂತಿವೆ. ಒಂದೊಂದು ಚಿತ್ರಗಳಿಗೆ ಮೂರು ಸಾವಿರದಿಂದ 5 ಸಾವಿರ ರೂಗಳನ್ನು ನೀಡುವ ಮೂಲಕ ದಾನಿಗಳು ಕಲೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಬೆಲೆ ಬಾಳುವ ಬಣ್ಣಗಳ ಬಳಕೆಯ ಮೂಲಕ ಶಿಕ್ಷಕರು ಚಿತ್ರಗಳುನ್ನು ಬಿಡಿಸುತ್ತಿದ್ದಾರೆ. ಒಂದು ಕಡೆಯಲ್ಲಿ ಚಿತ್ರಕಲೆಯಿಂದ ಶಾಲೆ ಕಂಗೋಳಿಸುತ್ತಿದ್ದರೆ ಮತ್ತೊಂದು ಕಡೆಯಲ್ಲಿ ಶಾಲೆಯ ಎದುರು ಅತ್ಯಾಕರ್ಷಕ ಉದ್ಯಾನವನ ಶಾಲೆಯ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ. ಈ ಉದ್ಯಾನವನದಲ್ಲಿ ಸ್ವಾಗತಕೋರುವ ಜಿರಾಫೆ ಮತ್ತು ಆನೆಗಳ ಬಹುದೊಡ್ಡ ಕಲಾಕೃತಿಗಳು, ವಿವಿಧ ಪ್ರಾಣಿ, ಪಕ್ಷಿಗಳು, ವಿವಿಧ ಆಲಂಕಾರಿಕ ಗಿಡಗಳು ಶಾಲೆಯ ಸೌಂದರ್ಯ ಹಿಮ್ಮಡಿಗೊಳಿಸಿದೆ. ಹಸಿರು ಹುಲ್ಲು ಹಾಸಿ ಅಲ್ಲಲ್ಲಿ ಅಲಂಕಾರ ಗಿಡ ಹಾಗೂ ವಿವಿಧ ಬಗೆಯ ಹೂವಿನ ಗಿಡಗಳನ್ನು ನೆಡಲಾಗಿದೆ.

ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ್ ಪೇರಾಲು ಪ್ರತಿಕ್ರಿಯೆ ನೀಡಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ವತಿಯಿಂದ ನಡೆದ ಚಿತ್ರಕಲಾ ಶಿಬಿರದಲ್ಲಿ 3 ದಿನಗಳಲ್ಲಿ ಶಾಲೆಯಲ್ಲಿ ಪಾರಂಪರಿಕಮತ್ತು ಸಾಂಪ್ರದಾಯಿಕ ಚಿತ್ರಗಳನ್ನು ಶಿಕ್ಷಕರು ಬಿಡಿಸಿದ್ದಾರೆ. ಈ ಎಲ್ಲಾ ಚಿತ್ರಗಳಿಗೆ ಊರಿನ ಎಲ್ಲಾ ದಾನಿಗಳು, ಪೋಷಕರು ಸಹಕಾರ ನೀಡಿದ್ದಾರೆ. ಈ ಚಿತ್ರಕಲಾ ಶಿಬಿರದಿಂದ ವಿದ್ಯಾರ್ಥಿಗಳು ಬಹಲಷ್ಟು ವಿಷಯಗಳನ್ನು ಕಲಿತಿದ್ದಾರೆ. ಶಾಲೆಯ ವಾತವರಣವನ್ನು ಚಂದಗೊಳಿಸಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತವರಣ ನಿರ್ಮಿಸುವುದು ನಮ್ಮ ಉದ್ದೇಶ.

ಜಿಲ್ಲಾ ಚಿತ್ರಕಲಾ ಸಂಘದ ಕಾರ್ಯದರ್ಶಿ ಮುರಳಿಧರ ಆಚಾರ್ಯ ಮಾತನಾಡಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದಲ್ಲಿ 150 ಮಂದಿ ಶಿಕ್ಷಕರು ಇದ್ದಾರೆ. ಪ್ರತಿ ತಿಂಗಳ ಎರಡನೇ ಶನಿವಾರ ಚಿತ್ರಕಲಾ ಶಿಬಿರ ಹಮ್ಮಿಕೊಳ್ಳುತ್ತಿದ್ದೇವೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಪಠ್ಯದ ಜೊತೆಗೆ ವಿಲೀನ ಆಗುವಂತಹ ಚಿತ್ರಗಳಿಗೆ ಮಹತ್ವ ನೀಡಿದ್ದೇವೆ. ನಶಿಸಿ ಹೋಗುತ್ತಿರುವ ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿಕೊಂಡು ಬರಬೇಕು ಮತ್ತು ಮಕ್ಕಳಲ್ಲಿ ಜಾಗೃತಿ ಆಗಬೇಕು ಎನ್ನುವ ಉದ್ದೇಶದಿಂದ ಶಿಬಿರವನ್ನು ಮಾಡುತ್ತಿದ್ದೆವೆ.

ಚಿತ್ರಕಲಾ ಶಿಕ್ಷಕ ಮೋಹನ ಗೌಡ ಏನಾಜೆ ಮಾತನಾಡಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಕಲೆ ಬೇಕು ಎನ್ನುವ ಉದ್ದೇಶದಿಂದ ಆಂದ್ರ, ಗುಜರಾತಿ, ಒರಿಸ್ಸಾ ಶೈಲಿಯಲ್ಲದೇ ಕರ್ನಾಟಕದ ಬೇರೆ ಬೇರೆ ಪರಂಪರೆಯ ಯಕ್ಷಗಾನ, ಭೂತರಾಧನೆ, ಆಟಿಕೆಳಂಜ ಚಿತ್ರಗಳನ್ನು ಮಕ್ಕಳಿಗೆ ಹೆಚ್ಚು ಇಷ್ಟವಾಗುತ್ತಿದೆ.

ವಿದ್ಯಾರ್ಥಿನಿ ತುಶಿತಾ ಪ್ರತಿಕ್ರಿಯೆ ನೀಡಿ ಚಿತ್ರಕಲಾ ಶಿಬಿರದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಮಾಹಿತಿಗಳನ್ನು ನೀಡಿ ಕಲಿಸುತ್ತಿದ್ದಾರೆ. ವಿದ್ಯಾರ್ಥಿಗಳು ಕೂಡ ಅಷ್ಟೇ ಉತ್ಸಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಇದರಿಂದ ಪಠ್ಯದ ಜೊತೆಗೆ ಕಲಿಕೆಗೆ ಪೂರಕವಾದ ವಿಷಯಗಳು ಚಿತ್ರಗಳಿಂದ ಸಿಗುತ್ತಿದೆ ಎಂದು ಹೇಳಿದರು.

Related posts

Leave a Reply