

ಸುಳ್ಯ: ಮಂತ್ರಿಗಿರಿಗಾಗಿ ಯಾವತ್ತೂ ಲಾಬಿ ನಡೆಸದ ಸೋಲಿಲ್ಲದ ಸರದಾರ,ಸುಳ್ಯದ ಶಾಸಕ ಎಸ್. ಅಂಗಾರ ಅವರನ್ನು ಮಂತ್ರಿ ಸ್ಥಾನ ಕೊನೆಗೂ ಹರಸಿಕೊಂಡು ಬಂದಿದೆ.
ಜ.13ರಂದು ಸಂಜೆ ಅಂಗಾರ ಅವರು ಸಚಿವರಾಗಿ ಪ್ರಮಾಣ ಸ್ವೀಕರಿಸಲಿರುವ ಸಿಹಿ ಸುದ್ದಿಯನ್ನು ಸುಳ್ಯ ಬಿಜೆಪಿ ಮಂಡಲ ಶ್ಯಾರ್ ಮಾಡಿಕೊಂಡಿದೆ.
ಸುಳ್ಯ ಶಾಸಕರಿಗೆ ಈ ಬಾರಿ ಮಂತ್ರಿಗಿರಿ ಬಹುತೇಕ ಖಚಿತ ಎಂಬುದನ್ನು ವಿ4 ನ್ಯೂಸ್ ದಿನದ ಹಿಂದೆಯೇ ವರದಿ ಮಾಡಿತ್ತು.
ಕರಾವಳಿಗೆ ಪ್ರಾತಿನಿಧ್ಯ ಎನ್ನುವ ವಿಚಾರ ಬಂದಾಗ ಸುಳ್ಯ ಕ್ಷೇತ್ರವು ಇಲ್ಲಿಯವರೆಗೆ ಸುಮಾರು 14 ವಿಧಾನ ಸಭಾ ಚುನಾವಣೆಯನ್ನು ಕಂಡಿದೆ. ಎಸ್ ಅಂಗಾರ ಗರಿಷ್ಠ ಅವಧಿಯಿಂದ ಅಂದರೆ ಸತತವಾಗಿ ಆರನೇ ಬಾರಿಗೆ ಗೆದ್ದಿದ್ದಾರೆ. ಅಷ್ಟಿದ್ದರೂ ತಾನು ಪಕ್ಷದ ಬೆಂಬಲಿಗ, ಕಾರ್ಯಕರ್ತ ಹಾಗೂ ಪಕ್ಷನಿಷ್ಠನಾಗಿಯೇ ಇರುತ್ತೇನೆ, ಯಾವುದೇ ಸಂಪುಟದ ಆಕಾಂಕ್ಷಿಯಲ್ಲ ಎಂದು ಸಚಿವ ಸ್ಥಾನದಿಂದ ದೂರ ಉಳಿದು ಇನ್ನಿತರರಿಗೆ ಅವಕಾಶಗಳನ್ನು ಬಿಟ್ಟುಕೊಟ್ಟಿದ್ದರು. ಆದರೆ ಅವರಿಗೆ ನಿಜಕ್ಕೂ ಸಚಿವ ಸ್ಥಾನ ಸಿಗಬೇಕು ಎನ್ನುವುದು ಕಾರ್ಯಕರ್ತರ ಮನದಾಸೆಯಾಗಿತ್ತು. ಅದೀಗ ಕೂಡಿ ಬಂದಿದೆ. ಅದರಂತೆ ಇದೀಗ ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನದ ಬಗ್ಗೆ ಮಾಹಿತಿ ಬರುತ್ತಿದ್ದಂತೆಯೇ ಅಭಿಮಾನಿಗಳಲ್ಲಿ ಸಂತಸದ ವಾತಾವರಣ ಸೃಷ್ಠಿಯಾಗಿದೆ.
ಮಧ್ಯಾಹ್ನ ವರೆಗೆ ಕಡಬ ವ್ಯಾಪ್ತಿಯಲ್ಲಿದ್ದ ಶಾಸಕರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕರೆಗೆ ದಿಢೀರನೆ ಬೆಂಗಳೂರು ಪ್ರಯಾಣಿಸಿದ್ದಾರೆ.•