

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಅನ್ವೇಷಣಾ ಸಂಘದ ವತಿಯಿಂದ ಸಸ್ಯ ವಿಜ್ಞಾನಿ ಸರ್ ಜಗದೀಶ್ ಚಂದ್ರ ಬೋಸ್ ರವರ ಜನ್ಮದಿನಾಚರಣೆಯನ್ನು ವೆಬಿನಾರ್ ಮುಖಾಂತರ ಆಚರಿಸಲಾಯಿತು.
ಪ್ರಥಮ ಬಿ ಎಸ್ಸಿಯ ವಿದ್ಯಾರ್ಥಿಗಳಾದ ಕು. ಶ್ರೇಯಸ್ ರವರು ಭೌತವಿಜ್ಞಾನಿ ಹಾಗೂ ಸಸ್ಯ ವಿಜ್ಞಾನಿ ಸರ್ ಜೆ.ಸಿ ಬೋಸ್ ರವರ ಜೀವನ ಚರಿತ್ರೆಯ ಪರಿಚಯ ನೀಡಿದರೆ. ಸಸ್ಯಗಳೂ ಸಹ ಸಂವೇದನ ಶೀಲತೆಯುಳ್ಳ ಜೀವಿಗಳು ಎಂಬುದನ್ನು ತಾನೇ ಸೃಷ್ಟಿಸಿದ Crescograph ಮೂಲಕ ತೋರಿಸಿಕೊಟ್ಟರು. ಹಾಗೆಯೇ ಮರ್ಕೋನಿಗಿಂತ ಮೊದಲೇ ರೇಡಿಯೋ ತರಂಗಾಂತರದ ಮೇಲೆ ಸಂಶೋಧನೆ ಮಾಡುತ್ತಿದ್ದ ಬೋಸ್ರನ್ನು ವೈರ್ಲೆಸ್ ದೂರಸಂಪರ್ಕದ ಪಿತಾಮಹನೆಂದೇ ಪರಿಗಣಿಸಲಾಗುತ್ತದೆ ಎಂದು ಕು. ಅಕ್ಷತಾ, ಅನುಷಾ, ದೀಪ್ತಿ ಮತ್ತು ಮೆಲ್ರಿನ್ ಡಿಸೋಜರವರು ಜೆ.ಸಿ ಬೋಸ್ ರವರ ಸಾಧನೆ ಮತ್ತು ಪ್ರಯೋಗದ ಬಗ್ಗೆ ವಿವರವಾಗಿ ತಿಳಿಸಿದರು.
ಅನ್ವೇಷಣಾ ಸಂಘದ ಸಹ ನಿರ್ದೇಶಕರಾದ ಡಾ. ಸಿದ್ದರಾಜು ಎಮ್.ಎನ್ ರವರು ಮಾತನಾಡುತ್ತ ನವೆಂಬರ್ 14 ರಂದು ಸಸ್ಯವಿಜ್ಞಾನಿ ಬೀರಬಲ್ ಸಾಹ್ನಿಯವರ ಜನ್ಮ ದಿನಾಚರಣೆ ಇಂದು ಜೆ.ಸಿ ಬೋಸ್ ನೆನಪಿನಾಚರಣೆ ಮಾಡುತ್ತಿರುವ ಉದ್ದೇಶ ಇಂದಿನ ಪೀಳಿಗೆಗೆ ನಮ್ಮ ಭಾರತೀಯ ವಿಜ್ಞಾನಿಗಳ ಪರಿಚಯ ನೀಡುವುದು ಹಾಗೆಯೆ ಅತಿ ಕಡಿಮೆ ಸೌಲಭ್ಯಗಳ ನಡುವೆಯೂ ಅಸಾಧಾರಣ ಸಂಶೋಧನೆಗಳನ್ನು ಕೈಗೊಂಡು ಜಗತ್ತೇ ಹುಬ್ಬೇರಿಸುವಂತೆ ಮಾಡಿದ ನಮ್ಮ ಹಿರಿಯರ ಬಗ್ಗೆ ಹೆಮ್ಮೆಯ ಭಾವ ಮೂಡಿಸುವುದು ಎಂದರು.
ಭಾರತದ ಪ್ರಥಮ ಸೈನ್ಸ್ ಫಿಕ್ಷನ್ ಕತೆ”The Runaway Cyclone” ಬರೆದಿದ್ದು ಜೆ.ಸಿ ಬೋಸ್ ರವರು ಎಂದು ತಿಳಿಸುತ್ತ ಆ ಕಾಲದಲ್ಲೇ ಬಟರ್ ಫ್ಲೈ ಎಫೆಕ್ಟ್ ಎಂದರೇನು? ಎಂಬುದನ್ನು ಒಂದು ಕಾಲ್ಪನಿಕ ಕತೆಯಲ್ಲಿ ವಿವರಿಸಿರುವ ಬೋಸ್ ರವರು ನಿಜವಾಗಿಯೂ ಅಸಾಮಾನ್ಯ ಪ್ರತಿಭಾವಂತರು ಎಂದು ಪುನರುಚ್ಚರಿಸಿದರು.
ಕಾರ್ಯಕ್ರಮವು ಕು. ಪಲ್ಲವಿಯ ದೈವಿಕ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಮೆಲ್ರಿನ್ ಸ್ವಾಗತ ಕೋರಿದರೆ, ವೇದಾಶಿನಿಯವರು ವಂದನಾರ್ಣೆ ಮಾಡಿದರು. ಸಂಘದ ಹಿರಿಯ ವಿದ್ಯಾರ್ಥಿ ಕು. ಸಲೋನಿ ಸಮಾರಂಭವನ್ನು ನಿರ್ವಹಿಸಿದರು.