Header Ads
Breaking News

ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿದೆ ಪುತ್ತೂರು ಮಿನಿವಿಧಾನಸೌಧ

ಸ್ವಚ್ಛತೆಗೆ ಕೇಂದ್ರವಾಗ ಬೇಕಾಗಿದ್ದ ಪುತ್ತೂರು ಉಪವಿಭಾಗದ ಪ್ರಮುಖ ತಾಣವಾದ ಮಿನಿವಿಧಾನಸೌಧ ಕಟ್ಟಡದ ಹಿಂಭಾಗ ಡೆಂಗ್ಯು ಮಲೇರಿಯಾ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಬದಲಾಗಿದೆ.

`ಸ್ವಚ್ಛತೆ ಕನಸಲ್ಲ…’ ಎಂದುಕೊಂಡಿರುವ ಪುತ್ತೂರು ನಗರಸಭಾ ಇಲಾಖೆಯಿಂದ ಕೂಗಳತೆ ದೂರದಲ್ಲಿರುವ ಮಿನಿವಿಧಾನಸೌಧದ ಹಿಂಭಾಗದಲ್ಲಿ ಕಸದ ರಾಶಿ ತುಂಬಿಕೊಂಡಿದೆ. ಅದಕ್ಕಿಂತಲೂ ಮುಖ್ಯವಾಗಿ ಇಲ್ಲಿರುವ ಹಳೆಯ ಶೌಚಾಲಯದ ಗುಂಡಿಯ ಮುಚ್ಚಳ ತುಕ್ಕು ಹಿಡಿದು ಬಾಯ್ದೆರೆದು ನಿಂತಿದೆ. ಇದರಿಂದ ಸೊಳ್ಳೆಗಳು ಜೇನುಗೂಡಿನಂತೆ ಹೊರಬಂದು ನಗರಕ್ಕೆ ರೋಗ ಹರಡುವ ಕೆಲಸ ಮಾಡುತ್ತಿವೆ.

ಇಲ್ಲಿರುವ ಕಸದ ರಾಶಿ ಮಿನಿವಿಧಾನ ಸೌಧದ ಕಚೇರಿಗಳ ಜತೆಗೆ ಸಾರ್ವಜನಿಕರ ಕೊಡುಗೆಯಾಗಿದೆ. ಇಲ್ಲಿಂದ ನಗರಸಭಾ ಕಸ ಸಂಗ್ರಹಕರು ಕಸ ವಿಲೇವಾರಿ ಮಾಡುವುದು ಕಂಡುಬರುತ್ತಿಲ್ಲ. ಹಾಗಾಗಿ ತ್ಯಾಜ್ಯ ಸಂಗ್ರಹದ ತಾಣವಾಗಿ ಮಾರ್ಪಟ್ಟಿದೆ.
ಮಿನಿವಿಧಾನಸೌಧದಲ್ಲಿ ಪ್ರಸ್ತುತ ಉಪವಿಭಾಗಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ ಸಹಿತ ಕಂದಾಯ ಇಲಾಖೆಗೆ ಸಂಬಂಧಿಸಿದ ಕಚೇರಿಗಳು, ನೋಂದಣಾ ಕಚೇರಿ ಹಾಗೂ ಪುತ್ತೂರು ಶಾಸಕರ ಕಚೇರಿಗಳಿವೆ. ಈ ಎಲ್ಲಾ ಕಚೇರಿಗಳಿಗೆ ದಿನಂಪ್ರತಿ ಸಾವಿರಾರು ಸಾರ್ವಜನಿಕರು ಭೇಟಿ ನೀಡುತ್ತಿದ್ದಾರೆ.

ಮಿನಿವಿಧಾನಸೌಧ ನಿರ್ಮಾಣವಾಗುವ ಮೊದಲು ಇಲ್ಲಿದ್ದ ಎಸಿ ಕಚೇರಿಗಾಗಿ ಹಿಂಭಾಗದಲ್ಲಿ 3 ಶೌಚಾಲಯದ ಗುಂಡಿಗಳನ್ನು ನಿರ್ಮಿಸಲಾಗಿತ್ತು. ಇದರಲ್ಲಿ ಒಂದು ಗುಂಡಿಯ ಮುಚ್ಚಳ ದೊಡ್ಡದಾಗಿ ತೂತು ಬಿದ್ದು, ಇನ್ನೊಂದು ಗುಂಡಿಯ ಮುಚ್ಚಳವೂ ಇದೇ ಹಾದಿಯಲ್ಲಿದೆ. ಜತೆಗೆ ಈ ಭಾಗದಲ್ಲಿ ಸಾರ್ವಜನಿಕರು ಓಡಾಡುವ ಸಂದರ್ಭಗಳಿದ್ದು, ಇಂತಹ ವೇಳೆ ಶೌಚಾಲಯದ ಗುಂಡಿಗೆ ಬೀಳುವ ಅಪಾಯವೂ ಇಲ್ಲಿ ನಿರ್ಮಾಣವಾಗಿದೆ.
ಪುತ್ತೂರು ತಾಲೂಕಿನಲ್ಲಿ ಈಗಾಗಲೇ 96 ಡೆಂಗ್ಯು ಪ್ರಕರಣಗಳು, 28 ಮಲೇರಿಯಾ ಪ್ರಕರಣಗಳು ದಾಖಲಾಗಿವೆ. ಮಳೆಗಾಲದ ಆರಂಭದಲ್ಲಿ ಮಾರಕ ಸಾಂಕ್ರಾಮಿಕ ರೋಗಗಳಾದ ಡೆಂಗ್ಯು ಮಲೇರಿಯಾ ಬಾಧೆ ಹೆಚ್ಚಾಗುತ್ತದೆ. ಆದರೆ ಇದೀಗ ಮಳೆಗಾಲ ಮುಗಿಯುವ ಹಂತದಲ್ಲೂ ಈ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಂಡುಬರುತ್ತಿಲ್ಲ. ತಾಲೂಕಿನ ಆರೋಗ್ಯ ಇಲಾಖೆಯ ಅಧಿಕಾರಿಗಳು ನಗರಭಾಗದ ಸೊಳ್ಳೆ ಉತ್ಪಾದನಾ ತಾಣಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಈ ಹಿನ್ನಲೆಯಲ್ಲಿಯೇ ಮಿನಿವಿಧಾನಸೌಧದ ಹಿಂಭಾಗದಲ್ಲಿ ನಿರ್ಮಾಣವಾಗಿರುವ ಸೊಳ್ಳೆ ಉತ್ಪಾದನಾ ತಾಣ ಇನ್ನೂ ಕಾರ್ಯಾಚರಿಸುತ್ತಿದೆ…!

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪುತ್ತೂರು ಉಪವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಮಿನಿ ವಿಧಾನಸೌಧದ ಹಿಂಭಾಗದಲ್ಲಿ ಹಳೆಯ ಶೌಚಾಲಯದ ಗುಂಡಿ ಅಪಾಯಕಾರಿ ಸ್ಥಿತಿಯಲ್ಲಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಲೋಕೋಪಯೋಗಿ ಇಲಾಖೆಗೆ ಅದನ್ನು ಮುಚ್ಚುವಂತೆ ಸೂಚನೆ ನೀಡಿದ್ದೇನೆ. ಅಲ್ಲಿ ಹಾಕಲಾಗುತ್ತಿರುವ ತ್ಯಾಜ್ಯವನ್ನು ವಾರದಲ್ಲಿ ಒಂದು ಬಾರಿ ನಗರಸಭೆ ವತಿಯಿಂದ ವಿಲೇವಾರಿ ಮಾಡಲಾಗುತ್ತಿದೆ. ಇನ್ನು ಮುಂದೆ ವಾರದಲ್ಲಿ 2 ದಿನ ಕಸ ವಿಲೇವಾರಿ ನಡೆಸಲು ಕ್ರಮ ಕೈಗೊಳ್ಳುತ್ತೇನೆ ಎಂದು
ಹೇಳಿದ್ರು.

ಒಟ್ಟಿನಲ್ಲಿ ಪುತ್ತೂರಿನ ಮಿನಿ ವಿಧಾನಸೌಧದ ಹಿಂಬದಿಯ ಹಾಳು ಕೊಂಪೆಯಂತಾಗಿದ್ದು ಸಾಂಕ್ರಾಮಿಕ ರೋಗದ ಭೀತಿಯನ್ನು ಸ್ಥಳೀಯರು ಎದುರಿಸುವಂತಾಗಿದೆ. ಇನ್ನು ವಾರದಲ್ಲಿ ಎರಡು ದಿನ ಕಸ ವಿಲೇವಾರಿ ಮಾಡುವ ಕ್ರಮವನ್ನು ಕೈಗೊಳ್ಳುವುದಾಗಿ ಪುತ್ತೂರಿನ ಎಸಿಯವರು ಭರವಸೆ ನೀಡಿದ್ದಾರೆ. ಆದರೆ ಅದು ಎಷ್ಟರ ಮಟ್ಟಿಗೆ ಸಮರ್ಪಕವಾಗಲಿದೆ ಎಂದು ಕಾದುನೋಡಬೇಕಿದೆ.

Related posts

Leave a Reply

Your email address will not be published. Required fields are marked *