Header Ads
Header Ads
Breaking News

ಸೊಳ್ಳೆ ಉತ್ಪಾದನಾ ಕೇಂದ್ರವಾದ ಬಿಸಿ ರೋಡ್ ಖಾಸಗಿ ಬಸ್‌ನಿಲ್ದಾಣ

ಬಂಟ್ವಾಳ: ಮೇಲ್ಗಡೆ ಸ್ವಚ್ಛ ಭಾರತ, ನಿರ್ಮಲ ಬಂಟ್ವಾಳ ಎಂದು ಗಮನ ಸೆಳೆಯುವ ಬೋರ್ಡ್ ಬರಹ. ಅದರ ಕೆಳಭಾಗದಲ್ಲೇ ಕೊಳಚೆ ಹಾಗೂ ಮಳೆ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುತ್ತಿರುವ ದೃಶ್ಯ.. ಇದು ಇರುವುದು ಬಂಟ್ವಾಳ ತಾಲೂಕಿನ ಕೇಂದ್ರ ಸ್ಥಾನ ಬಿ.ಸಿ.ರೋಡಿನ ಖಾಸಗಿ ಬಸ್ಸು ನಿಲ್ದಾಣದಲ್ಲಿ. ಸ್ವಚ್ಛತೆಯ ಬಗ್ಗೆ ಜನರಿಗೆ ತಿಳಿ ಹೇಳುವ ಬಂಟ್ವಾಳ ಪುರಸಭೆಯ ವಾಣಿಜ್ಯ ಸಂಕೀರ್ಣದ ಮೇಲ್ಭಾಗದಲ್ಲಿ. ಪುರಸಭೆಯ ಸ್ವಚ್ಛತೆಯ ಪರಿಕಲ್ಪನೆಯನ್ನು ಅಣಕಿಸುವಂತಿದೆ ಈ ದೃಶ್ಯ.ಬಿ.ಸಿ.ರೋಡಿನ ಬಸ್ಸು ನಿಲ್ದಾಣದಲ್ಲಿರುವ ಪುರಸಭೆಯ ವಾಣಿಜ್ಯ ಸಂಕೀರ್ಣದ ಮೇಲ್ಬಾಗ ಸಣ್ಣ ಡಂಪಿಂಗ್ ಯಾರ್ಡ್ ಇದ್ದಂತಿದೆ. ಪಾಸ್ಟಿಕ್ ಬಾಟಲ್‌ಗಳು, ಕೈ ಚೀಲಗಳು, ಪೈಪ್ ಮೊದಲಾದ ಗುಜರಿ ವಸ್ತುಗಳು ಇಲ್ಲಿ ರಾಶಿ ಬಿದ್ದಿದೆ. ಇದರ ಮೇಲೆ ಪಾಚಿ, ಕಳೆಗಿಡಗಳು ಬೆಳೆದು ನಿಂತಿದೆ. ವಾಣಿಜ್ಯ ಸಂಕೀರ್ಣದ ಅಂಗಡಿದಾರರಿಂದ ಬಾಡಿಗೆ ಹಣ ವಸೂಲು ಮಾಡುವ ಪುರಸಭೆ ಕಟ್ಟಡದ ನಿರ್ವಹಣೆಯ ಜವಾಬ್ದಾರಿಯನ್ನು ಮರೆತು ಬಿಟ್ಟಿದೆ. ಸ್ವಚ್ಛತೆಯನ್ನು ಕಾಪಾಡುವಂತೆ ಸಾರ್ವಜನಿಕರಿಗೆ ಭೋದಿಸುವ ಪುರಸಭೆ ತನ್ನ ವಾಣಿಜ್ಯ ಸಂಕೀರ್ಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದಕ್ಕೆ ಹಿಂದೇಟು ಹಾಕಿದೆ. ಇದರಿಂದಾಗಿ ವಾಣಿಜ್ಯ ಸಣಕೀರ್ಣದಲ್ಲಿ ಈ ಸ್ಥಿತಿ ನಿರ್ಮಾಣಗೊಂಡಿದೆ. ಇದೇ ಕೊಳಚೆ ತುಂಬಿರುವ ಕಟ್ಟಡದ ಅಡಿಭಾಗದಲ್ಲಿ ಹೊಟೇಲು, ಬೇಕರಿ, ಹಣ್ಣು ಹಂಪಲುಗಳ ಅಂಗಡಿಗಳು ಕಾರ್ಯಚರಿಸುತ್ತಿದೆ.
ಸೊಳ್ಳೆ ಉತ್ಪಾದನಾ ಕೇಂದ್ರ ಕಟ್ಟಡದ ಮೇಲ್ಭಾಗದಲ್ಲಿ ಕೊಳಚೆ, ಮಳೆ ನೀರು ತುಂಬಿಕೊಂಡು ಸೊಳ್ಳೆ ಉತ್ಪಾದನ ತಾಣವಾಗಿ ಈ ಸ್ಥಳ ಮಾರ್ಪಡುಗೊಂಡಿದೆ. ಸೊಳ್ಳೆಯ ಲಾರ್ವ ನೀರಿನಲ್ಲಿ ತುಂಬಿಕೊಂಡಿದೆ. ಬಿ.ಸಿ.ರೋಡಿನ ಪರಿಸರದ ಜನರಿಗೆ ಡೆಂಗ್ಯು, ಮಲೇರಿಯಾ, ಚಿಕುನ್‌ಗುನ್ಯದಂತಹ ರೋಗಗಳು ಹರಡಲು ಇದೊಂದೇ ಕಟ್ಟಡ ಸಾಕು. ಇಲ್ಲಿ ಎಸೆದಿರುವ ಪ್ಲಾಸ್ಟಿಕ್ ಬಾಟಲ್, ಡಬ್ಬಗಳಲ್ಲೂ ಮಳೆ ನೀರು ತುಂಬಿಕೊಂಡು ಅವುಗಳಲ್ಲೂ ಸೊಳ್ಳೆಗಳು ಸಂತಾನಭಿವೃದ್ಧಿ ಮಾಡಿಕೊಳ್ಳುತ್ತಿವೆ. ಪುರಸಭೆಯ ವಾಣಿಜ್ಯ ಸಂಕೀರ್ಣದ ಟೆರೆಸ್‌ನಲ್ಲಿ ನಿಂತ ನೀರು ಹರಿದು ಹೋಗಲು ಪೈಪ್‌ಗಳನ್ನು ಅಳವಡಿಸಲಾಗಿದೆ. ಆದರೆ ಪೈಪ್‌ಗಳೆಲ್ಲಾ ಮುರಿದು ನೀರು ಪೈಪ್‌ನಲ್ಲಿ ಹರಿಯದೆ ಮೇಲಿಂದ ಕೆಳಕ್ಕೆ ಚಿಮ್ಮುತ್ತಿದೆ. ಈ ವಾಣಿಜ್ಯ ಸಂಕೀರ್ಣದ ಹಿಂಭಾಗದಲ್ಲಿ ಸಾಕಷ್ಟು ಅಂಗಡಿಗಳಿದ್ದು ಅಲ್ಲಿಗೆ ವ್ಯಾಪರಕ್ಕೆ ಬರುವ ಗ್ರಾಹಕರಿಗೆ ಹಾಗೂ ಹಿಂಭಾಗದ ರಸ್ತೆಯ ಮೂಲಕ ನಡೆದು ಹೋಗುವ ಸಾರ್ವಜನಿಕರ ಮೇಲೆ ಈ ನೀರು ಚಿಮ್ಮಿ ಬೀಳುತ್ತದೆ. ಈ ಲೀಕೆಜ್ ನಿಲ್ಲಿಸಲು ಇಲ್ಲಿನ ಅಂಗಡಿದಾರರು ಹಲವು ಬಾರಿ ಪ್ರಯತ್ನಿಸಿದ್ದಾರೆ. ನೀರಿನ ಸೋರಿಕೆಯಿಂದ ಕಟ್ಟಡ ಗೋಡೆಯೂ ತೇವಗೊಳ್ಳುತ್ತಿದೆ. ಮೇಲಿಂದ ಚಿಮ್ಮಿ ಬೀಳುವ ನೀರಿನಿಂದ ಇತ್ತೀಚೆಗಷ್ಟೆ ಪುರಸಭೆ ಇಲ್ಲಿನ ಕಾಲ್ದರಿಗೆ ಅಳವಡಿಸಿದ ಇಂಟರ್‌ಲಾಕ್ ಎದ್ದು ಹೋಗುವ ದಿನ ದೂರವಿಲ್ಲ. ಒಟ್ಟಿನಲ್ಲಿ ಪುರಸಭೆಯ ನಿರ್ವಹಣೆಯ ಕೊರತೆಯಿಂದ ಈ ದುರಾವಸ್ಥೆ ನಿರ್ಮಾಣಗೊಂಡಿದೆ. ತನ್ನ ಕಟ್ಟಡವನ್ನು ಮೊದಲು ಸ್ವಚ್ಛವಾಗಿಟ್ಟುಕೊಂಡು ಇತರ ಕಟ್ಟಡಗಳ ಸ್ವಚ್ಛತೆಯಡೆಗೆ ಪುರಸಭೆ ಆದ್ಯತೆ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Related posts

Leave a Reply