Header Ads
Header Ads
Breaking News

ಸ್ಥಳೀಯ ಮಾವಿನ ಗಿಡಕ್ಕೆ ಕಸಿ ಕಟ್ಟುವ ಪ್ರಯೋಗ

ಬಂಟ್ವಾಳ: ನೆಕ್ಕರೆ, ಬೆಳ್ಳಾರೆ, ಪುಳಿಕುಕ್ಕು, ಮುಂಡಪ್ಪ ಮೊದಲಾದ ಸ್ಥಳೀಯ ಮಾವಿನ ತಳಿಗಳಿಗೂ ಹೈಬ್ರಿಡ್ ತಳಿಗಳಾಗುವ ಭಾಗ್ಯ ಒದಗಿಬಂದಿದೆ. ಸ್ಥಳೀಯ ತಳಿಯ ಮಾವಿನ ಗಿಡಗಳನ್ನು ಕಸಿ ಕಟ್ಟಿ, ಅವುಗಳನ್ನು ಗಿಡ್ಡ ತಳಿಯ ಗಿಡಗಳಾಗಿ ಅಭಿವೃದ್ದಿ ಪಡಿಸಿ ಅಳಿವಿನಂಚಿನಲ್ಲಿರುವ ತಳಿಗಳನ್ನು ಉಳಿಸುವ ಪ್ರಯತ್ನವನ್ನು ದ.ಕ. ಜಿಲ್ಲಾ ಪಂಚಾಯಿತಿ ತೋಟಗಾರಿಕಾ ಇಲಾಖೆಯ ಮೂಲಕ ಮಾಡುತ್ತಿದೆ.ತುಳುನಾಡಿನಲ್ಲಿ ಸಾಕಷ್ಟು ಬಗೆಯ ಮಾವಿನ ತಳಿಗಳಿವೆ. ಮನೆಯ ಹಿತ್ತಿಲಲ್ಲೋ, ಗದ್ದೆಯ ಬದುಗಳಲ್ಲೋ, ಕಾಡಿನ ಮಧ್ಯದಲ್ಲೋ.. ಹೀಗೆ ಬೀಜ ಬಿದ್ದ ಜಾಗದಲ್ಲಿ ಮೊಳಕೆಯೊಡೆದು ಯಾವ ಪೋಷಣೆಯೂ ಇಲ್ಲದೆ ತನ್ನ ಪಾಡಿಗೆ ಬೆಳೆಯುತಿದ್ದ ಸ್ಥಳೀಯ ಜಾತಿಯ ಮಾವಿನ ಮರಗಳು ಸಮೃದ್ದವಾಗಿ ಕಾಯಿ, ಹಣ್ಣುಗಳನ್ನು ನೀಡುತ್ತವೆ. ಕೆಲವು ಮಾವಿನ ಕಾಯಿಗಳು ಉಪ್ಪಿನಕಾಯಿಗೆಂದೆ ಸೀಮಿತವಾಗಿದ್ದರೆ ಉಳಿದ ಜಾತಿಯ ಮಾವಿನ ಹಣ್ಣುಗಳ ರುಚಿ ತಿಂದವನೇ ಬಲ್ಲ. ನಗರೀಕರಣ, ಕೈಗಾರಿಕರಣದ ಕ್ರಾಂತಿಯಿಂದ ಕಾಡುಗಳು ನಾಶವಾಗುವುದರ ಜೊತೆಗೆ ಇಂತಹ ಸ್ಥಳೀಯ ತಳಿಯ ಮಾವಿನ ಮರಗಳು ನಾಶವಾಗಿವೆ.

 

ಹೈಬ್ರಿಡ್ ತಳಿಗಳ ಆಗಮನದ ಬಳಿಕವಂತೂ ಸ್ಥಳೀಯ ಮಾವಿನ ಗಿಡಗಳಿಗೆ ನೆಲೆ ಇಲ್ಲಂದತ್ತಾಗಿತ್ತು. ಅಳಿವಿನಂಚಿಲ್ಲಿರುವ ಸ್ಥಳೀಯ ತಳಿಯ ಮಾವಿನ ಗಿಡಗಳನ್ನು ಉಳಿಸಿ ಬೆಳೆಸಬೇಕೆನ್ನುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಆರ್.ರವಿಯವರು ತೋಟಗಾರಿಕ ಇಲಾಖೆಗೆ ಗಿಡಗಳನ್ನು ಅಭಿವೃದ್ದಿ ಪಡಿಸುವಂತೆ ಸೂಚಿಸಿದ್ದು ತುಂಬೆ ತೋಟಗಾರಿಕ ಇಲಾಖೆಯ ಸಹಾಯಕ ಅಧಿಕಾರಿ ಹರೀಶ್ ಕುಮಾರ್ ಅವರ ನಿರ್ದೇಶನದಲ್ಲಿ ಸ್ಥಳೀಯ ತಳಿಯ ಮಾವಿನ ಗಿಡಗಳು ಕಸಿಕಟ್ಟಿ ಸಿದ್ದಪಡಿಸಲಾಗಿದೆ.ತುಳುನಾಡಿನಲ್ಲಿ ಅಳವಿನಂಚಿನತ್ತ ವಾಲಿರುವ ನೆಕ್ಕರೆ, ಚಿನ್‌ಕುಬರಿ, ರಸಾಲು, ಬೆಟ್ಟತುಕ್ರ, ಮುಂಡಪ್ಪ, ಅಮಿನ್, ನಾರಾಯಣ ಕಿಣಿ, ವಾರಾಣಾಸಿ, ಅಂಗಡಿ ಮಾವು, ಬೆಳ್ಳಾರೆ, ಮುಳಬಾಗಿಲು, ಕದ್ರಿ, ಮುಂಡೋಡಿ ಮಾವು, ಗಿಳಿಮಾವು, ಪುಳಿಕುಕ್ಕು ಮೊದಲಾದ ೧೫ ಬಗೆಯ ಸ್ಥಳೀಯ ಮಾವಿನ ತಳಿಗಳನ್ನು ತುಂಬೆ ತೋಟಗಾರಿಕಾ ಕೇಂದ್ರದಲ್ಲಿ ಅಭಿವೃದ್ದಿ ಪಡಿಸಲಾಗಿದೆ. ೫ ಸಾವಿರ ಗಿಡಗಳನ್ನು ಸಿದ್ದಪಡಿಸಲು ಯೋಜಿಸಲಾಗಿದ್ದು ಈಗಾಗಲೇ ೩೧೨೫ ಗಿಡಗಳನ್ನು ಕಸಿಕಟ್ಟಿ ನೆಡಲು ಸಿದ್ದಗೊಂಡಿದೆ. ಅಳವಿನಂಚಿನಲ್ಲಿರುವ ಮಾವಿನ ತಳಿಗಳನ್ನು ಮುಂದಿನ ತಲೆಮಾರಿಗೂ ಉಳಿಸಿ ಬೆಳೆಸುವುದು ಮೊದಲ ಪ್ರಯೋಜನವಾದರೆ ನೂರಾರು ಅಡಿ ಎತ್ತರಕ್ಕೆ ಬೆಳೆಯುವ ಸ್ಥಳೀಯ ತಳಿಯ ಗಿಡಗಳನ್ನು ಕಸಿ ಕಟ್ಟಿ ಗಿಡ್ಡತಳಿಗಳನ್ನಾಗಿ ಪರಿವರ್ತಿಸುವುದು ಇನ್ನೊಂದು ಪ್ರಯೋಜನ. ಈ ವಿಧಾನದಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿಯನ್ನು ಪಡೆಯಲು ಸಾಧ್ಯವಿದೆ.

Related posts

Leave a Reply