Header Ads
Header Ads
Breaking News

ಸ್ಮಶಾನ ಮೌನವಾದ ಕೊಡಗಿನ ಹಸಿರ ಹಾದಿ. ಹಸಿರು ಉಸಿರು ಕಳೆದುಕೊಂಡ ಮಡಿಕೇರಿ-ಸಂಪಾಜೆ ರಸ್ತೆ. ರಸ್ತೆಯ ಎರಡು ಬದಿ ಮಣ್ಣು, ಕಲ್ಲು, ಮರಗಳ ರಾಶಿ.

ದಕ್ಷಿಣದ ಕಾಶ್ಮಿರ ಎಂದು ಹೆಸರುವಾಸಿಯಾದ ಮಡಿಕೇರಿ ಹಸಿರು ಅರಣ್ಯ ರಾಶಿಯಿಂದ ಕಂಗೋಳಿಸುತ್ತಿದ್ದ ಪ್ರದೇಶ. ಇದರ ನಡುವೆ ಹಾವಿನಂತೆ ಹರಿಯುತ್ತ ಸಾಗುವ ಹೆದ್ದಾರಿ. ತಲೆ ಎತ್ತಿ ಕಣ್ಣು ಹಾಯಿಸಿದರೆ ಅನತಿ ದೂರದವರೆಗೂ ಬೆಟ್ಟ ಗುಡ್ಡಗಳದ್ದೇ ವೈಭವ. ದೂರಕ್ಕೆ ಬೆಳ್ಳಿ ಗೆರೆಯಂತೆ ತೋರುವ ತೊರೆಗಳು, ಹಾಲಿನ ನೊರೆಯಂತೆ ಧುಮ್ಮಕ್ಕುವ ಜಲಪಾತಗಳು.ಇದು ಸರಿ ಸುಮಾರು ಒಂದು ತಿಂಗಳ ಹಿಂದೆ ಸಂಪಾಜೆ-ಮಡಿಕೇರಿ ರಸ್ತೆಯಲ್ಲಿ ಹೋಗುವಾಗ ಕಣ್ಣಿಗೆ ಕಟ್ಟುವ ಚಿತ್ರಣವಿದು ಕೊಡಗಿನ ವನಸಿರಿಗೆ ಮನಸೋತವರು ಯಾರು ಇಲ್ಲ. ಆದರೆ ಇಂದು ಈ ರಸ್ತೆಯಲ್ಲಿ ಸಂಚರಿಸಿದರೆ ಸ್ಮಶಾನ ಮೌನ ಕಾಡುತ್ತಿದೆ. ಹಸಿರು ಉಸಿರು ಎರಡನ್ನು ಕಳೆದುಕೊಂಡಂತಿದೆ. ಕೆಸರು ಮೊಣಕಾಲಿನ ವರೆಗೆ ಕಾಲಿಗಂಟುತ್ತದೆ. ಎತ್ತರದ ಹಸಿರು ಮರಗಳ ಬದಲಿಗೆ ಕಾಣುವುದು ಎತ್ತರದ ಜೆಸಿಬಿಗಳು. ವಾಹನಗಳ ಸಂಚಾರ ಇಲ್ಲ. ಪ್ರಾಣಿ ಪಕ್ಷಿಗಳ ಕಲರವ ಇಲ್ಲ.ಒಂದು ತಿಂಗಳ ಹಿಂದೆ ಸಂಪಾಜೆ-ಮಡಿಕೇರಿ ಘಾಟ್ ರಸ್ತೆಯಲ್ಲಿ ಹಸಿರು ಸಾಲುಗಳ ಮಧ್ಯೆ ಪ್ರಯಾಣ ಮಾಡುವಾಗ ಹಿತಕರವಾಗುತ್ತಿತ್ತು ರಸ್ತೆಯ ಬಲ ಬದಿಗೆ ಕಡಮಕಲ್ಲು, ಗಾಳಿಬೀಡು ಅರಣ್ಯ ಪ್ರದೇಶಗಳು. ಅದರಾಚೆ ಪುಷ್ಪಗಿರಿ ಬೆಟ್ಟು ಸಾಲುಗಳು ಕೈಬೀಸಿ ಕರೆಯುತ್ತಿತ್ತು. ಸಂಪಾಜೆಯಿಂದ ಕೊಯನಾಡು, ದೇವರಕೊಲ್ಲಿ, ಜೋಡುಪಾಲ, ಮೊಣ್ಣಂಗೇರಿ, ಕಾಟಿಕೇರಿ, ತಾಳತ್‌ಮನೆಗಳಂತಹ ಸೊಗಡಿನ ಊರುಗಳಿವೆ. ಸಂಪಾಜೆ ಘಾಟ್ ಪ್ರದೇಶಗಳು ಹೆಚ್ಚಿನ ತಿರುವ ಇಲ್ಲದಿದ್ದರೂ ತುಂಬ ಆಕರ್ಷಕವಾಗಿತ್ತು. ರಸ್ತೆ ಬದಿಗಳಲ್ಲಿ ರಬ್ಬರ್ ತೋಟಗಳು, ಕಾಫಿ ಗಿಡಗಳು, ಎತ್ತರದಿಂದ ದುಮ್ಮಿಕ್ಕುವ ಜಲಪಾತಗಳು ಈ ಘಾಟಿಯ ಆಕರ್ಷಣೆ,ಸಂಪಾಜೆ-ಮಡಿಕೇರಿ ಮಾರ್ಗದುದ್ದಕ್ಕೂ ರಸ್ತೆ ಬದಿಯಲ್ಲಿ, ಬೆಟ್ಟದ ಮೇಲೆ ನೂರಾರು ಮನೆಗಳು ಕಂಗೊಳಿಸುತ್ತಿದ್ದವು. ಹೋಂಸ್ಟೇಗಳು ಪ್ರವಾಸಿಕರನ್ನು ಕೈಬೀಸಿ ಕರೆಯುತ್ತಿತ್ತು. ಅವೆಲ್ಲ ಇಂದು ತನ್ನ ಜೀವಂತಿಕೆಯನ್ನೇ ಕಳೆದುಕೊಂಡಿದೆ. ದುರಂತ ಸಂಭವಿಸಿದ ಬಳಿಕ ಕೆಲವು ಮನೆಗಳಿಗಷ್ಟೆ ಜನರು ಹಗಲು ಹೊತ್ತಿನಲ್ಲಿ ಹೋಗಿ ಬರುತ್ತಿದ್ದಾರೆ. ಬೆಟ್ಟದ ಮೇಲೆ ಮನೆ ಮಾಡಿರುವ ಮನೆಮಂದಿಗೆ ತಾವು ನಿಂತ ನೆಲ ಕಸಿಯಬಹುದು ಎನ್ನುವ ಆತಂಕ ಇನ್ನೂ ದೂರವಾಗಲೇ ಇಲ್ಲ.ಜೋಡುಪಾಲ, ಮದೆನಾಡು, ಮೊಣ್ಣಂಗೇರಿಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಕೊಯನಾಡಿನಿಂದ ಮಡಿಕೇರಿವರೆಗಿನ ಸುಮಾರು 25 ಕಿ.ಮೀ ದೂರಾದ ಹೆದ್ದಾರಿ ಇಂದು ಹಸಿರು ಮತ್ತು ಉಸಿರನ್ನು ಕಳೆದುಕೊಂಡು ನಿರ್ಜೀವವಾಗಿ ಮಲಗಿದೆ. ಬೆಟ್ಟಗಳ ಸಾಲಿನ ಗುಡ್ಡಗಳು ಕುಸಿದು ಬಿದ್ದಿದೆ. ಜೋಡುಪಾಲದವರೆಗೆ ಎರಡು ಬದಿಯ ಬೆಟ್ಟಗಳು ಕುಸಿದು ಹೆದ್ದಾರಿಯ ಎರಡೂ ಬದಿಗಳಲ್ಲಿ ಕಲ್ಲು,ಮಣ್ಣು, ಮರಗಳ ರಾಶಿ ಬಿದ್ದಿದೆ. ಜಲಸ್ಫೋಟಕ್ಕೆ ಬೆಟ್ಟವೇ ಧುಮ್ಮಿಕ್ಕಿ ನದಿಯಾಗಿ ಹರಿದು ಕೃಷಿಯನ್ನು, ಜನರ ಬದುಕನ್ನು ನಾಶ ಮಾಡಿದೆ. ಈ ಪ್ರದೇಶಗಳಲ್ಲಿ ಬೃಹತ್ ಆಕಾರದ ಕಲ್ಲುಗಳು, ರೆಂಬೆ, ಕೊಂಬೆ, ಕಾಂಡವನ್ನು ಕಳೆದುಕೊಂಡು ಮಕಾಡೆ ಮಲಗಿಕೊಂಡಿರುವ ಮರದ ರಾಶಿಗಳು. ಇನ್ನೂ ನಿಲ್ಲದ ಕೆಸರಿನ ಒಸರು. ನೆರೆ ನೀರು ಮತ್ತು ಮರಗಳು ಬಂದ ರಭಸಕ್ಕೆ ಹೆದ್ದಾರಿಯ ಬದಿಗೆ ಹಾಕಿದ ರಕ್ಷಣಾ ಬೇಲಿಗಳು, ವಿದ್ಯುತ್ ಕಂಬಗಳು, ವಿದ್ಯುತ್ ತಂತಿಗಳು ಎಲ್ಲವೂ ಆಕಾರ ಕಳೆದುಕೊಂಡಿದೆ. ಜೋಡುಪಾಲದಲ್ಲಿ ಬೆಟ್ಟವೇ ಸಿಡಿದು ಮೇಲಿನಿಂದ ನದಿಯಾಗಿ ಹರಿದು ಆಸ್ತಿಪಾಸ್ತಿ, ಜೀವ ಹಾನಿಯನ್ನು ಮಾಡಿದೆ. ಎರಡನೇ ಮೊಣ್ಣಂಗೇರಿಯಲ್ಲಿ ಹೆದ್ದಾರಿ ರೆಡು ಕಡೆ ಕುಸಿದು ರಸ್ತೆ ಸಂಪರ್ಕವೇ ಕಡಿದು ಹೋಗಿದೆ. ಒಂದು ಕಡೆ ಮೇಲಿನಿಂದ ಇನ್ನೈ ಕುಸಿಯುತ್ತಿರುವ ಬೆಟ್ಟ. ಮತ್ತೊಂದು ಕಡೆ ಜಲ ಪ್ರಳಯಕ್ಕೆ ತುತ್ತಾಗಿ ಧುಮ್ಮಿಕ್ಕಿ ಹರಿಯುತ್ತಿರುವ ಕೆಸರು ಮಿಶ್ರಿತ ನೀರು ಪ್ರಕೃತಿ ದುರಂತದ ಭೀಕರತೆ ಕಣ್ಣಿಗೆ ಕಟ್ಟುತ್ತದೆ. ಸಂಪಾಜೆ-ಮಡಿಕೇರಿ ರಸ್ತೆಯನ್ನು ಮೊದಲಿನಂತೆ ಮಾಡಲು ಹತ್ತಾರು ಜೆಸಿಬಿಗಳು ಕೆಲಸ ಮಾಡುತ್ತಿದೆ. ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸಲಾಗುತ್ತಿದೆ. ರಸ್ತೆಗಳು ಕುಸಿದ ಜಾಗದಲ್ಲಿ ಮರಳಿನ ಚೀಲಗಳನ್ನು ಈಗ ಇರಿಸಿ ರಕ್ಷಣೆಯ ಪ್ರಯತ್ನ ಮಾಡಲಾಗುತ್ತಿದೆ. ನೂರಾರು ಕಾರ್ಮಿಕರು ಇದಕ್ಕಾಗಿ ದುಡಿಯುತ್ತಿದ್ದಾರೆ. ವಿದ್ಯುತ್ ಕಂಬಗಳನ್ನು ಹಾಕಿ ವಿದ್ಯುತ್ ಸಂಪರ್ಕ ನೀಡಿ ಬೆಳಕು ನೀಡುವ ಕೆಲಸ ಭರದಿಂದ ಸಾಗುತ್ತಿದೆ. ತತ್ಕಾಲಿಕವಾಗಿ ಅಭಿವೃದ್ದಿ ಕೆಲಸಗಳು ನಡೆಯುತ್ತಿದ್ದರೂ ಪ್ರಕೃತಿಯ ಮುಂದೆ ಇವರ ಆಟ ನಡೆಯುವುದಿಲ್ಲವೆಂಬುದು ಸಾಬೀತಾಗುತ್ತಲೇ ಇದೆ.ಮಡಿಕೇರಿ-ಸಂಪಾಜೆ ರಸ್ತೆ ದುರಂತ ಸಂಭವಿಸುವವೆಗೆ ಆರ್ಥಿಕ ವಾಹಿವಾಟಿನ ಕೇಂದ್ರವಾಗಿತ್ತು. ರಸ್ತೆ ಬದಿಗಳಲ್ಲಿ ಅಂಗಡಿ ಮಳಿಗೆಗಳು, ಹೋಟೆಲ್‌ಗಳು, ಡಾಬಾಗಳು ತಲೆ ಎತ್ತಿ ಭರ್ಜರಿ ವ್ಯಾಪಾರ ನಡೆಸುತ್ತಿತ್ತು. ಆದರೆ ಪ್ರಕೃತಿಯ ಮುಂದೆ ಇವುಗಳು ತಲೆ ಬಗ್ಗಿಸಿ ಬಾಗಿಲು ಹಾಕಿಕೊಂಡಿದೆ. ಇವೆಲ್ಲ ಇನ್ನೂ ಜೀವಂತಿಕೆ ಪಡೆದುಕೊಂಡಿತೇ ಎಂಬುದು ಈಗ ಉಳಿದಿರುವ ಪ್ರಶ್ನೆ.

Related posts

Leave a Reply