Header Ads
Header Ads
Header Ads
Breaking News

ಸ್ವಚ್ಚ ಗ್ರಾಮದತ್ತ ಹೆಜ್ಜೆಯಿಟ್ಟ ಪುತ್ತೂರಿನ ಪುಟ್ಟ ಗ್ರಾಮ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಪುಟ್ಟ ಗ್ರಾಮವೊಂದು ತನ್ನ ಗ್ರಾಮವನ್ನು ಸ್ವಚ್ಛ ಗ್ರಾಮವನ್ನಾಗಿ ಮಾಡುವ ನಿಟ್ಟಿನಲ್ಲಿ ಸದ್ದಿಲ್ಲದೆ ಹೆಜ್ಜೆಯಿಟ್ಟಿದೆ. ಅಂದ ಹಾಗೆ ಈ ಗ್ರಾಮವನ್ನು ಸ್ವಚ್ಛವಾಗಿಡುವ ಪಣತೊಟ್ಟಿದ್ದಾರೆ.


ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮಪಂಚಾಯತ್ ವ್ಯಾಪ್ತಿಗೆ ಬರುವ ಕುರಿಯ ಎನ್ನುವ ಪುಟ್ಟ ಗ್ರಾಮ. ಹೆದ್ದಾರಿಗಳ ಅಕ್ಕಪಕ್ಕದಲ್ಲಿ ಯಾವ ರೀತಿಯಲ್ಲಿ ಪ್ಲಾಸ್ಟಿಕ್ ಕಸಗಳು ಎಲ್ಲೆಂದರಲ್ಲಿ ಹರಡಿ ದುರ್ನಾತ ಬೀರುತ್ತಿತ್ತೋ, ಅದೇ ರೀತಿಯ ಅವಸ್ಥೆ ಈ ಗ್ರಾಮದ ರಸ್ತೆಗೂ ಬಂದಿತ್ತು. ಆದರೆ ಕಳೆದ ಒಂದು ತಿಂಗಳಿನಿಂದ ಈ ರಸ್ತೆಯ ಚಿತ್ರಣವೇ ಬದಲಾಗಿದೆ. ರಸ್ತೆಯ ಅಕ್ಕಪಕ್ಕ ಪ್ಲಾಸ್ಟಿಕ್ ತ್ಯಾಜ್ಯ ಸೇರಿದಂತೆ ಕಸಗಳು ಮಾಯವಾಗಿವೆ. ಹೌದು ಇದಕ್ಕೆ ಕಾರಣ ಈ ಗ್ರಾಮದಲ್ಲಿರುವ ಸರಕಾರಿ ಶಾಲೆಯ ಪುಟ್ಟ ಮಕ್ಕಳು. ಪ್ರಧಾನಿ ನರೇಂದ್ರ ಮೋದಿ ಕಲ್ಪನೆಯ ಸ್ವಚ್ಛ ಭಾರತ್ ಗೆ ಸಚಿನ್ ತೆಂಡುಲ್ಕರ್, ಅಮಿತಾಬ್ ಬಚ್ಚನ್, ಪ್ರಿಯಾಂಕಾ ಚೋಪ್ಡಾ ಯಾವ ರೀತಿಯಲ್ಲಿ ಸಿಲೆಬ್ರೆಟಿಗಳಾಗಿದ್ದಾರೋ, ಅದೇ ರೀತಿ ಈ ಗ್ರಾಮದ ಸ್ವಚ್ಛತೆಗೆ ಈ ಪುಟಾಣಿಗಳೇ ಸಿಲೆಬ್ರೆಟಿಗಳು. ಕುರಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಈ ಮಕ್ಕಳು ಮನೆಯಿಂದ ಬರುವ ದಾರಿಯಲ್ಲಿ ಸಿಗುವ ಪ್ಲಾಸ್ಟಿಕ್ ಗಳನ್ನು ಹೆಕ್ಕಿ ತಂದು ತನ್ನ ಪರಿಸರವನ್ನು ಸ್ವಚ್ಛವಾಗಿಡುವ ಪಣ ತೊಟ್ಟಿದ್ದಾರೆ. ಶಾಲೆಯ ಹಳೆ ವಿದ್ಯಾರ್ಥಿಯಾಗಿರುವ, ಪ್ರಸ್ತುತ ಪುತ್ತೂರು ಎಪಿಎಂಸಿ ಅಧ್ಯಕ್ಷರಾಗಿರುವ ಬುಡಿಯಾರು ರಾಧಾಕೃಷ್ಣ ಎನ್ನುವ ವ್ಯಕ್ತಿ ಈ ಕಲ್ಪನೆಯ ಹಿಂದೆ ಇದ್ದಾರೆ. ಯುವಕರಿಗೆ ಪರಿಸರದ ಬಗ್ಗೆ ಮಾಹಿತಿ ನೀಡಿದಲ್ಲಿ ಅದು ಒಂದು ದಿನದ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಬಹುದು. ಆದರೆ ಎಳೆಯ ಮನಸ್ಸುಗಳಿಗೆ ಸ್ವಚ್ಛತೆಯಂತಹ ವಿಚಾರಗಳನ್ನು ತಿಳಿಸಿದಾಗ ಅದು ಭವ್ಯ ಭಾರತ ನಿರ್ಮಾಣಕ್ಕೆ ಕೊಡುಗೆಯಾಗ ಬಲ್ಲದು ಎನ್ನುವ ಉದ್ಧೇಶದಿಂದ ಪುಟಾಣಿಗಳನ್ನೇ ಇಲ್ಲಿ ಸ್ವಚ್ಛತೆಯ ರಾಯಭಾರಿಗಳನ್ನಾಗಿ ಮಾಡಲಾಗಿದೆ.


ಕೇವಲ ಹದಿನೈದು ದಿನಗಳಲ್ಲಿ ಈ ಮಕ್ಕಳು ತಮ್ಮ ಗ್ರಾಮದಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯಗಳು ಬರೋಬ್ಬರಿ 4 ಕ್ವಿಂಟಾಲ್. ಸ್ವಚ್ಛತೆಯಿದ್ದರೆ ಆರೋಗ್ಯ ಎನ್ನುವ ಗಂಭೀರ ವಿಚಾರವನ್ನು ಮನದಟ್ಟು ಮಾಡಿಕೊಂಡಿರುವ ಈ ಪುಟಾಣಿಗಳು ಇದೀಗ ತಮ್ಮ ಮನೆಯನ್ನಲ್ಲದೆ, ಊರನ್ನೇ ಸ್ವಚ್ಛ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಊರಿನಿಂದ ಹೆಕ್ಕಿ ತಂದ ಕಸಗಳನ್ನು ಇದೀಗ ಶಾಲೆಯ ವಠಾರದಲ್ಲಿ ಶೇಖರಿಸಿಟ್ಟಿರುವ ಈ ಪುಟಾಣಿಗಳು ಕಸದ ವಿಲೇವಾರಿಯ ಜವಾಬ್ದಾರಿಯನ್ನು ಸರಕಾರ ಹೊತ್ತುಕೊಳ್ಳಬೇಕು ಎನ್ನುವ ಆಶಯ ಈ ಪುಟಾಣಿಗಳದ್ದಾಗಿದೆ.
ಹೆಣ್ಣೊಂದು ಕಲಿತರೆ ಮನೆಯೊಂದು ಬೆಳಗಿದಂತ ಎನ್ನುವಂತೆ, ಶಾಲೆಯೊಂದು ಸ್ವಚ್ಛತೆಯ ಕಡೆಗೆ ಗಮನಹರಿಸಿದರೆ ಅದು ದೇಶದ ಸ್ವಚ್ಛತೆಗೆ ಗಣನೀಯ ಕೊಡುಗೆ ನೀಡಬಹುದು ಎನ್ನುವ ಸೂಚನೆಯನ್ನು ಈ ಪುತ್ತೂರಿನ ಶಾಲೆ ದೇಶಕ್ಕೆ ನೀಡಿದೆ. ಪ್ರಧಾನಿ ಮೋದಿ ಸ್ವಚ್ಛತೆಯಲ್ಲಿ ಶಾಲೆಗಳನ್ನು ಈ ರೀತಿಯಾಗಿ ತೊಡಗಿಸಿಕೊಳ್ಳುವತ್ತ ಗಮನ ಹರಿಸಬೇಕೆಂಬ ಒತ್ತಾಯವೂ ಕೇಳಿ ಬರುತ್ತಿದೆ.
ವರದಿ: ಪ್ರವೀಣ್ ಪುತ್ತೂರು

Related posts

Leave a Reply