Header Ads
Header Ads
Breaking News

ಹಕ್ಕುಪತ್ರವಿಲ್ಲ, ಯಾವುದೇ ಸರ್ಕಾರಿ ಸೌಲಭ್ಯವೂ ಇಲ್ಲ, ಕಣ್ಣೀರು ಹಾಕುತ್ತಿರುವ ಹಿರಿಯ ಜೀವ…

 

ಎಲ್ಲರೂ ಬಡವರ ಬಗ್ಗೆಯೇ ಮಾತನಾಡುತ್ತಾರೆ..! ಸರ್ಕಾರ ಕೂಡಾ ಆರ್ಥಿಕವಾಗಿ ಹಿಂದುಳಿದವರ, ದೀನ ದಲಿತರ ಅಭ್ಯುದಯಕ್ಕಾಗಿ ನಿಯಮಗಳನ್ನು ರೂಪಿಸುತ್ತಿದೆ. ಬಡವರ ಪರವಾದ ಕಾನೂನುಗಳ ಲಾಭ ಮಾತ್ರ ಉಳ್ಳವರ ಪಾಲಾಗುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತ.

ಹೀಗೇ ಹಕ್ಕುಪತ್ರವಿಲ್ಲದೇ ನಮಗ್ಯಾವ ಸರ್ಕಾರಿ ಸೌಲಭ್ಯವೂ ಸಿಕ್ಕಿಲ್ಲ ಎಂದು ಕಣ್ಣೀರು ಹಾಕುತ್ತಿರುವ ಹಿರಿಯ ಜೀವ. ಈ ವೃದ್ದೆಯ ಕಣ್ಣೀರು ಎಂತವರ ಹೃದಯವೂ ಚುರುಕ್ ಅನ್ನಿಸದೆ ಇರದು. ಈ ಕಣ್ಣೀರಿಗೆ ಕಾರಣ ಬೇರೇನು ಅಲ್ಲ. ಅದುವೇ ಸ್ಥಳೀಯಾಡಳಿತದ ಇಬ್ಬಗೆ ನೀತಿ. ವೈಲ್ಡ್‌ಲೈಫ್ ಕಾರಣವೊಡ್ಡಿ ಬಡಕುಟುಂಬಗಳಿಗೆ ಹಕ್ಕುಪತ್ರ ನಿರಾಕರಣೆ ಮಾಡಲಾಗಿದೆ. ಆದರೆ ಐಶರಾಮಿ ಮನೆಗಳಿಗೆ ಮಾತ್ರ ಯಾವ ವೈಲ್ಡ್‌ಲೈಫ್ ಅಡ್ಡಿ ಬರದಿರುವುದು ಮಾತ್ರ ಅಚ್ಚರಿ! ಕುಂದಾಪುರ ತಾಲೂಕು ಆಲೂರು ಗ್ರಾಮದ ಕಳಿ ನಿವಾಸಿಗಳಾದ ಮಂಜಿ ಮತ್ತು ಸರ್ವೇಶ್ರೀಯವರಿಗೆ ಜಾಗದ ಹಕ್ಕುಪತ್ರ ಸಿಗದೆ ಮೂಲಭೂತ ಸೌಲಭ್ಯಕ್ಕೂ ಕತ್ತರಿ ಬಿದ್ದಿದೆ. ಹಕ್ಕುಪತ್ರ ಇಲ್ಲದೆ ಚಿಕ್ಕಾಸು ಸಾಲ ಹುಟ್ಟುವುದಿಲ್ಲ. ರಟ್ಟೆ ಕುಟ್ಟಬೇಕು ಹೊಟ್ಟೆ ತುಂಬಬೇಕು. ಅಂತ್ಯೋದಯ ಕಾರ್ಡ್ ಸಿಕ್ಕಿದ್ದರಿಂದ ಊಟಕ್ಕೆ ಅಕ್ಕಿ ಸಿಗುತ್ತಿರುವುದೇ ಇವರಿಗೆ ಬಹುದೊಡ್ಡ ಸೌಲಭ್ಯ.

ಹೌದು..ಕಳಿ ನಿವಾಸಿ ಸರ್ವೇಶ್ರೀ ಮತ್ತು ಮಂಜಿಯ ಹಿರಿಯರು ಕಳೆದ 70 ವರ್ಷಗಳಿಂದ ಇಲ್ಲೇ ವಾಸ ಮಾಡಿಕೊಂಡಿದ್ದಾರೆ. ಸರ್ವೇಶ್ರೀ ಪತಿ ಕಳೆದ ಮೂವತ್ತು ವರ್ಷದ ಹಿಂದೆ ತೆಂಗಿನ ಮರದಿಂದ ಬಿದ್ದು ಮೃತಪಟ್ಟಿದ್ದು, ಒಂದು ಹೆಣ್ಣು ಹಾಗೂ ಎರಡು ಗಂಡು ಮಕ್ಕಳನ್ನು ಕೂಲಿನಾಲಿ ಮಾಡಿ ಸಾಕಿದ್ದಾರೆ. ಪ್ರಸಕ್ತ ಮಗಳು ಕೂಲಿ ಕೆಲಸಕ್ಕೆ ಹೋದರೆ ಇಬ್ಬರು ಗಂಡು ಮಕ್ಕಳು ಬೆಂಗಳೂರಿನ ಹೋಟೆಲ್‌ನಲ್ಲಿ ದುಡಿಯುತ್ತಿದ್ದಾರೆ. ಸರ್ವೇಶ್ರೀ ಕತೆ ಹೀಗಾದರೆ ಮಂಜಿಯ ಕತೆ ಇನ್ನೊಂದು. ಕೆಲಸ ಮಾಡಲಾಗದ ಪತಿ ಹಾಗೂ ನಾಲ್ವರು ಹೆಣ್ಣು ಮಕ್ಕಳ ಮದುವೆ ಮಾಡಿಯೇ ಹೈರಾಣಾಗಿದ್ದಾರೆ. ಮೊಮ್ಮಮಗಳಿಗೆ ಕಾಣಿಸಿಕೊಂಡ ಕಾಯಿಲೆಯಿಂದಾಗಿ ಕಂಗಾಲಾಗಿದ್ದಾರೆ. ಸರ್ವೇಶ್ರೀ ಹಾಗೂ ಮಂಜಿ ಆಲೂರು ಗ್ರಾಮದ ಕಳಿ ಸೆರ್ವೇ ನಂಬರ್ 102ರಲ್ಲಿ ನೆಲೆಸಿದ್ದು, ವೈಲ್ಡ್ ಲೈಫ್ ಹಿನ್ನೆಲೆಯಲ್ಲಿ ಹಕ್ಕುಪತ್ರ ನಿರಾಕರಣೆ ಮಾಡಲಾಗಿದೆ. ಇಬ್ಬರ ಮನೆಯೂ ಕುಸಿಯುವ ಹಂತ ಮುಟ್ಟಿದ್ದರಿಂದ ಮನೆ ಕಟ್ಟಲು ಆರಂಭಿಸಿದ್ದು, ಮನೆ ಪೂರ್ತಿ ಮಾಡಲು ಆಗದೆ ಮಂಜಿಮನೆ ಅರ್ಧಕ್ಕೆ ಮನೆ ನಿಲ್ಲಿಸಿದರೆ ಸರ್ವೆಶ್ರೀ ಅರ್ಧಕಟ್ಟಿದ ಮನೆ ಹಟ್ಟಿಯಾಗಿದೆ. ಈ ಮನೆಗಳ ಸಾಲಲ್ಲಿ ನಾಲ್ಕಾರು ಮನೆ ಕಟ್ಟಿ ವಾಸ ಮಾಡುತ್ತಿದ್ದರೂ ಅರಣ್ಯ ಇಲಾಖೆ ಸುಮ್ಮನಿದ್ದು, ಬಡವರ ಮನೆ ನಿರ್ಮಾಣಕ್ಕೆ ತಕರಾರು ಮಾಡವುದು ಸರಿನಾ ಎನ್ನೋದು ಸಾರ್ವಜನಿಕರ ಪ್ರಶ್ನೆ. ಒಟ್ಟಾರೆ ಹಕ್ಕುಪತ್ರ ಸಿಗದ ಕಾರಣ ಸರ್ವೇಶ್ರೀ ಹಾಗೂ ಮಂಜಿ ಸರ್ಕಾರದ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಮಂಜಿ ಮತ್ತು ಸರ್ವೇಶ್ರೀ ಕೂತ ಜಾಗ ಆಲೂರು ಚಿತ್ತೂರು ರಸ್ತೆ ಮಗ್ಗುಲಲ್ಲಿದೆ. ಆದರೆ ಸರ್ವೇಶ್ರೀ ಮನೆ ಇರುವ ಸಾಲಲ್ಲೇ ನಾಲ್ಕಾರು ಮನೆಗಳಿದ್ದು, ಅವೆಲ್ಲಾ ಐಷಾರಾಮಿ ಮನೆಗಳು. ಮಂಜಿ ಹಾಗೂ ಸರ್ವೇಶ್ರೀ ಮನೆ ಅರ್ಧಕ್ಕೆ ನಿಲ್ಲಲು ಅರಣ್ಯ ಕಾಯಿದೆ ಅಡ್ಡಿಯಾದರೆ, ಅಲ್ಲೇ ಅನತಿ ದೂರದಲ್ಲಿರುವ ಐಷರಾಮಿ ಮನೆಗಳಿಗೆ ಏಕೆ ಅರಣ್ಯ ಕಾಯ್ದೆ ಅನ್ವಯಿಸುವುದಿಲ್ಲ ಎನ್ನುವುದು ಮಾತ್ರ ಯಕ್ಷ ಪ್ರಶ್ನೆ. ಅಷ್ಟು ದೊಡ್ಡ ಮನೆ ಕಟ್ಟುವ ವೇಳೆಯಲ್ಲಿ ಕಣ್ಣೆತ್ತಿಯೂ ನೋಡದ ಇಲಾಖೆ ತಮಗೆ ಮಾತ್ರ ಏಕೆ ತೊಡರಾಗುತ್ತಿದ್ದಾರೆ ಎನ್ನುವುದು ಇಲ್ಲಿನ ನಿವಾಸಿಗಳ ಅಳಲು. ಆಲೂರು ಗ್ರಾಮ ಸರ್ವೆ ನಂಬರ್ 102ರಲ್ಲಿ 300.67ಎಕ್ರೆ ಸರ್ಕಾರಿ ಜಾಗವಿದ್ದು, ಅದರಲ್ಲಿ 152 ಎಕ್ರೆ ಜಾಗ ಅಕ್ರಮ ಸಕ್ರಮದಲ್ಲಿ ಜಮೀನು ಮನೆ ಇರುವವರೇ ಮಂಜೂರು ಮಾಡಿಕೊಂಡಿದ್ದಾರೆ. ಅಕ್ರಮ ಸಕ್ರಮದಲ್ಲಿ ಜಾಗ ಮಂಜೂರು ಮಾಡಿಕೊಳ್ಳುವವರಿಗೆ ಭೂರಹಿತರಾಗಿದ್ದು, ಒತ್ತುವರಿ ಮಾಡಿಕೊಂಡು ಕೂತು ಕೃಷಿ ಮಾಡಿರಬೇಕು. ಅಂತಹ ಜಾಗ ಮಾತ್ರ ಅಕ್ರಮ ಸಕ್ರಮದಲ್ಲಿ ಮಂಜೂರು ಮಾಡಲು ಅವಕಾಶವಿದೆ. ಆದರೆ ಅಕ್ರಮ ಸಕ್ರಮದಲ್ಲಿ ಎಕ್ರೆಗಟ್ಟಲೆ ಮಂಜೂರಾದ ಜಾಗದಲ್ಲಿ ಅಕ್ರಮ ಗಣಿ ನಡೆಯುತ್ತಿದೆ. ಸರ್ಕಾರಿ ಜಾಗ, ವೈಲ್ಡ್ ಲೈಫ್ ರಕ್ಷಿತಾರಣ್ಯದಲ್ಲಿ ಕೆಂಪುಕಲ್ಲು ಶಿಲೆಕಲ್ಲು ಗಣಿ ನಡೆಸಿದರೂ ಮಾತನಾಡದ ಇಲಾಖೆ ಬಡವರು ಮನೆ ಕಟ್ಟಲು ನೋಡಿದರೆ ತಕರಾರೆತ್ತುವುದು ಎಷ್ಟು ಸರಿ ಎನ್ನುವುದು ಎಲ್ಲರ ಮುಂದಿರುವ ಪ್ರಶ್ನೆಗಳು.


ಸಂಕಷ್ಟದ ನಡುವೆಯೂ ತಮ್ಮ ಹಿರಿಯರು ಬಾಳಿ ಬದುಕಿದ ಜಾಗದಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಇಲ್ಲಿನ ಎರಡು ಕುಟುಂಬಗಳ ಅರಣ್ಯ ರೋದನ ಜನಪ್ರತಿನಿಧಿಗಳಿಗೆ ಕೇಳಿಸದೆ ಹೋಗಿದೆ.

ಇವರ ಸಂಕಷ್ಟಗಳಿಗೆ ನೆರವಾಗಬೇಕಿದ್ದ ಜನಪ್ರತಿನಿಧಿಗಳು ಚುನಾವಣಾ ವೇಳೆಯಲ್ಲಿ ಮಾತ್ರ ಭರವಸೆ ನೀಡಿ ಅವರಿಂದಲೇ ಮತ ಪಡೆದು ಮತ್ತೆ ಅಧಿಕಾರದ ಗದ್ದುಗೆ ಏರಿದ್ದಾರೆ. ಹಣವಂತರಿಗೊಂದು, ದುರ್ಬಲರಿಗೊಂದು ಅನ್ವಯವಾಗುವ ಕಾನೂನನ್ನು ಪ್ರಜ್ಙಾವಂತ ನಾಗರಿಕರು ಪ್ರಶ್ನಿಸಲೇಬೇಕಿದೆ. ಈ ಇಬ್ಬಗೆ ನೀತಿಯ ಬಗ್ಗೆ ವಿ4 ವರದಿಗಾರ ಆಲೂರು ಗ್ರಾ.ಪಂಗೆ ತೆರಳಿ ಪ್ರಶ್ನಿಸಿದ್ದಾರೆ. ಆದರೆ ಗ್ರಾ.ಪಂ ಮಾತ್ರ ಹತ್ತು ವರ್ಷದ ಹಿಂದಿನ ಕಡತಗಳು ಅಟ್ಟ ಸೇರಿವೆ. ಹುಡುಕಿ ದಾಖಲೆ ಕೊಡುತ್ತೇವೆ ಎಂದಷ್ಟೇ ಉತ್ತರಿಸಿದೆ.

Related posts

Leave a Reply

Your email address will not be published. Required fields are marked *