Header Ads
Header Ads
Breaking News

ಹಡಿಲು ಬಿದ್ದ ಗದ್ದೆಯಲ್ಲಿ ನಾಟಿ ಪೊಸಳ್ಳಿಯ ಗದ್ದೆಯಲ್ಲಿ ಫಲಭರಿತ ಕೃಷಿ ಆಳ್ವಾಸ್ ವಿದ್ಯಾರ್ಥಿಗಳಿಂದ ಕಟಾವು ಗದ್ದೆಯಲ್ಲೇ ಪಡಿ ಬಳಸಿ ಭತ್ತ ಸಂಗ್ರಹ

ಬಂಟ್ವಾಳ: ಕಳೆದ ಅಕ್ಟೋಬರ್‌ನಲ್ಲಿ ವಿದ್ಯಾರ್ಥಿಗಳೇ ಗದ್ದೆ ಉಳುಮೆ ಹಾಗೂ ನೇಜಿ ನಾಟಿ ಮಾಡಿದ್ದರು, ಮೂರು ತಿಂಗಳ ಬಳಿಕ ಭಾನುವಾರ ಅದೇ ವಿದ್ಯಾರ್ಥಿಗಳೇ ಕೊಯ್ಲು ಮಾಡಿದ್ದಾರೆ. ಹಡಿಲು ಗದ್ದೆಯನ್ನು ಫಲಭರಿತ ಗದ್ದೆಯಾಗಿ ಪರಿವರ್ತಿಸಬಹುದು ಎಂಬುದನ್ನು ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ.

ರೈತ ಸಂಘ ಹಸಿರು ಸೇನೆಯ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಾಣಿಲ ಶ್ರೀ ಮಹಾಲಕ್ಷ್ಮೀ ಸೇವಾ ಸಮಿತಿಯ ಶ್ರೀಧಾಮ ಸೇವಾ ಪ್ರಕಲ್ಪ ಸಹಕಾರದೊಂದಿಗೆ ಹಡಿಲುಗದ್ದೆಯಲ್ಲಿ ಭತ್ತದ ಸಾಗುವಳಿ ಕಾರ್ಯಕ್ರಮವನ್ನು ಮೂರು ತಿಂಗಳ ಹಿಂದೆ ಬಿ.ಸಿ.ರೋಡಿನ ಪೊಸಳ್ಳಿಯ ಜನಾರ್ದನ ಕುಲಾಲ್ ಅವರ ಗದ್ದೆಯಲ್ಲಿ ಆಯೋಜಿಲಾಗಿತ್ತು. ಆಳ್ವಾಸ್ ವಿದ್ಯಾಸಂಸ್ಥೆಯ ಪದವಿ ವಿಭಾಗದ ಎನ್‌ಎಸ್‌ಎಸ್ ವಿಭಾಗದ 90 ಮಂದಿ ವಿದ್ಯಾರ್ಥಿಗಳು ನೇಜಿ ಕಿತ್ತು, ಗದ್ದೆ ಉಳುಮೆ ಮಾಡಿ ಬಳಿಕ ತಾವೇ ನಾಟಿ ಮಾಡಿ ತೆರಳಿದ್ದರು. ಮೂರು ತಿಂಗಳ ಅವಧಿಯಲ್ಲಿ ವಿದ್ಯಾರ್ಥಿಗಳು ಬೆಳೆದ ಬೆಳೆ ಉತ್ತಮ ಫಸಲು ನೀಡಿದ್ದು ವಿದ್ಯಾರ್ಥಿಗಳೇ ಹಿರಿಯರ ಮಾರ್ಗದರ್ಶನ ಪಡೆದು ಕಟಾವು ಮಾಡಿದರಲ್ಲದೆ ಗದ್ದೆಯಲ್ಲಿಯೇ ಪಡಿ ಬಳಸಿ ಭತ್ತವನ್ನು ಸಂಗ್ರಹಿಸಿದರು. ಮಯ್ಯರಬೈಲು ಬಳಿ ಚಾಪೆ ನೇಜಿಯ ಟ್ರೇಗೆ ಮಣ್ಣು ತುಂಬುವ ಕಾರ್ಯದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡರು.

93 ವರ್ಷ ಪ್ರಾಯದ ಹಿರಿಯ ಮಹಿಳೆ ಲಿಲ್ಲಿ ಬಾ ದಿನಪೂರ್ತಿ ಉತ್ಸಾಹದಿಮದ ಕೃಷಿಕಾರ್ಯದಲ್ಲಿ ತೊಡಗಿಸಿಕೊಂಡಿದ್ದದ್ದು ಗಮನ ಸೆಳೆಯಿತು. ಪೈರು ಕಟಾವು ಮಾಡುವುದು, ಸೂಡಿ ಕಟ್ಟುವುದು, ಪೈರು ಬಡಿಯುವ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಸಮಾರೋಪ ಕಾರ್ಯಕ್ರಮದಲ್ಲಿ ಲಿಲ್ಲಿ ಬಾ ಅವರನ್ನು ಸನ್ಮಾನಿಸಲಾಯಿತು.

ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ವಿದ್ಯಾರ್ಥಿಗಳ ಕೃಷಿ ಕಾರ್ಯಕ್ಕೆ ಸಾಥ್ ನೀಡಿದರು. ಗದ್ದೆಗಿಳಿದ ಶ್ರೀಗಳು ಭತ್ತ ಸಂಗ್ರಹಿಸುವ ಕಾರ್ಯದಲ್ಲಿ ಪಾಲ್ಗೊಂಡರು. ವಿದ್ಯಾರ್ಥಿಗಳ ಸಾಗವಳಿ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಪ್ರಮಾಣ ಪತ್ರ ವಿತರಿಸಿದರು. ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು ಹಾಜರಿದ್ದರು ಸುದೇಶ್ ಮಯ್ಯ ಅವರು ತೆಂಗಿನ ಮರ ಹತ್ತುವ ಮರ ಹತ್ತುವ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಕೋಮು ಸಂಘರ್ಷದಿಂದ ನಲುಗಿ ಹೋಗಿರುವ ಜಿಲ್ಲೆಯಲ್ಲಿ ಕೃಷಿ ಕಾರ್ಯ ಸಾಮರಸ್ಯದ ಪಾಠ ಭೋದಿಸಿತು. ಮಾಣಿಲ ಶ್ರೀಗಳ ಮಾರ್ಗದರ್ಶನದ ಈ ಕಾರ್ಯದಲ್ಲಿ ರೈತ ಸಂಘದ ಇದ್ದಿನಬ್ಬ, ಹಿರಿಯ ರೈತ ಮಹಿಳೆ ಲಿಲ್ಲಿ ಬಾ ಸೇರಿದಂತೆ ಎಲ್ಲಾ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಕೈ ಜೋಡಿಸುವ ಮೂಲಕ ಸಾಮರಸ್ಯದ ಬೆಸುಗೆ ಹಾಕಿದರು. ಕೃಷಿಯಿದ ಮಾತ್ರ ಸಾಮರಸ್ಯ ಬೆಸಯಲು ಸಾಧ್ಯ ಎನ್ನುವುದನ್ನು ವಿದ್ಯಾರ್ಥಿಗಳು ಅರಿತುಕೊಂಡರು.