Header Ads
Header Ads
Breaking News

ಹಾಕಿ ವಿಶ್ವ ಲೀಗ್ ಲಂಡನ್, ಗೆಲುವಿನೊಂದಿಗೆ ಶುಭಾರಂಭ ಮಾಡಿದ ಭಾರತ

ಭಾರತ ತಂಡದವರು ಲಂಡನ್ ನಲ್ಲಿ ನಡೆಯುತ್ತಿರುವ ಹಾಕಿ ವಿಶ್ವ ಲೀಗ್ ಸೆಮಿ ಫೈನಲ್ಸ ಹಂತದ ತಮ್ಮ ಮೊದಲ ಪಂದ್ಯದಲ್ಲಿ ಶುಭಾರಂಭ ಮಾಡಿದರು. ಭಾರತದ ಆಟಗಾರರು ೪-೧ ಗೋಲುಗಳಿಂದ ಸ್ಕಾಟ್ಲೆಂಡ್ ತಂಡವನ್ನು ಸೋಲಿಸಿದರು.
ಪಂದ್ಯದ ಆರಂಭ ಕ್ಷಣಗಳಲ್ಲಿ ಮೇಲುಗೈ ಸಾಧಿಸಿದ್ದ ಸ್ಕಾಟ್ಲೆಂಡ್ ತಂಡ ಆರನೇ ನಿಮಿಷದಲ್ಲಿಯೇ ನಾಯಕ ಕ್ರಿಸ್ ಗ್ರಾಸಿಕ್ ತಂದಿತ್ತ ಗೋಲಿನ ನೆರವಿನಿಂದ ೧-೦ ಗೋಲಿನ ಮುನ್ನಡೆ ಗಳಿಸಿತು. ಆ ನಿಮಿಷಗಳಲ್ಲಿ ಭಾರತದ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಚೇತರಿಕೆಯ ಆಟವಾಡಿದ ಆಟಗಾರರು ಆನಂತರದ ನಿಮಿಷಗಳಲ್ಲಿ ಸ್ಕಾಟ್ಲೆಂಡ್ ಎದುರು ಗಮನ ಸೆಳೆದರು. ಮೂರನೇ ಕ್ವಾರ್ಟರ್ನಲ್ಲಿಯೇ ಭಾರತ ಎಲ್ಲಾ ನಾಲ್ಕೂ ಗೋಲುಗಳನ್ನು ಗಳಿಸಿದ್ದೊಂದು ವಿಶೇಷವೇ ಆಗಿದೆ. ಬಿ ಗುಂಪಿನ ಈ ಪಂದ್ಯದಲ್ಲಿ ರಮಣದೀಪ್ ಸಿಂಗ್ ೩೧ನೇ ಮತ್ತು ೩೪ನೇ ನಿಮಿಷಗಳಲ್ಲಿ ಗೋಲು ಗಳಿಸಿದರೆ, ಆಕಾಶ್ ದೀಪ್ ಸಿಂಗ್ ೪೦ನೇ ನಿಮಿಷದಲ್ಲಿ ಮತ್ತು ಹರ್ಮನ್ಪ್ರೀತ್ ಸಿಂಗ್ ೪೨ನೇ ನಿಮಿಷದಲ್ಲಿ ತಲಾ ಒಂದು ಗೋಲು ತಂದಿತ್ತರು.
ಮೂರನೇ ಕ್ವಾರ್ಟರ್ನಲ್ಲಿ ಭಾರತದ ಆಟಗಾರರೇ ವಿಜೃಂಭಿಸಿದರು. ಸರ್ದಾರ್ಸಿಂಗ್ ಅವರಂತೂ ಎದುರಾಳಿ ತಂಡಕ್ಕೆ ಸಿಂಹಸ್ವಪ್ನವಾಗಿ ಕಾಡಿದರು. ಮಧ್ಯಂತರಕ್ಕೆ ಹತ್ತು ನಿಮಿಷಗಳಿದ್ದಾಗ ಕೋಚ್ ರೋಲೆಂಟ್ ಓಲ್ಟಮಸ್ ತಮ್ಮ ಆಟಗಾರರಿಗೆ ಕೆಲವು ಸೂಚನೆಗಳನ್ನು ನೀಡಿ ಹೊಸ ಯೋಜನೆಯಂತೆ ಆಡಲು ಸಲಹೆ ನೀಡಿದರು. ಅದು ಫಲ ನೀಡಿತು. ೩೧ನೇ ನಿಮಿಷದಲ್ಲಿ ರಮಣದೀಪ್ ಏಕಾ‌ಏಕಿ ದಾಳಿಗಿಳಿದು ರಕ್ಷಣಾ ಆಟಗಾರ ವಿಲಿ ಮಾರ್ಷಲ್ ಅವರನ್ನು ಬಲು ಚಾಣಾಕ್ಷ್ಯತನದಿಂದ ವಂಚಿಸಿ ಗೋಲು ಗಳಿಸಿ ಅಂತರವನ್ನು ಸಮಗೊಳಿಸಿದರು. ಅಂತಿಮ ಕ್ವಾರ್ಟರ್ನಲ್ಲಿ ಭಾರತ ರಕ್ಷಣಾತ್ಮಕವಾಗಿ ಆಡಿತು. ಸತತ ದಾಳಿಗಿಳಿದ ಸ್ಕಾಟ್ಲೆಂಡ್ ಆಟಗಾರರ ಗೋಲು ಗಳಿಸುವ ಅನೇಕ ಯತ್ನಗಳನ್ನು ಗೋಲ್ಕೀಪರ್ ಆಕಾಶ್ ಚಿಕ್ಟೆ ವಿಫಲಗೊಳಿಸಿದರು. ಭಾರತ ಬಿ ಗುಂಪಿನ ತನ್ನ ಮುಂದಿನ ಪಂದ್ಯವನ್ನು ಕೆನಡಾ ವಿರುದ್ಧ ಆಡಲಿದೆ.

Related posts

Leave a Reply