Header Ads
Header Ads
Header Ads
Breaking News

ಹಾಡುಹಗಲೇ ಮನೆಗೆ ನುಗ್ಗಿ ನಗದು ಸಹಿತ ಚಿನ್ನಾಭರಣ ಕಳವು

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಮನೆಗೆ ಹಾಡುಹಗಲಲ್ಲೇ ಕಳ್ಳರು ನುಗ್ಗಿ ನಗದು ಸಹಿತ ಚಿನ್ನಾಭರಣ ಕಳವುಗೈದ ಘಟನೆ ತುಂಬೆಯಲ್ಲಿ ಭಾನುವಾರ ಮಧ್ಯಾಹ್ನದ ವೇಳೆ ನಡೆದಿದೆ. ಇಲ್ಲಿನ ನಿವಾಸಿ, ಮಾಜಿ ತಾ.ಪಂ.ಸದಸ್ಯ ಸೋಮಪ್ಪ ಕೋಟ್ಯಾನ್ ಅವರ ಮನೆಯಲ್ಲಿ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಮನೆಮಂದಿ ಯಾರೂ ಇಲ್ಲದ ವೇಳೆ ಕೈಚಳಕ ತೋರಿರುವ ಕಳ್ಳರು ಮನೆಯ ಕೌಂಪಾಂಡ್ ಹಾರಿ ಹಿಂಬಾಗಿಲ ಚಿಲಕ ಮುರಿದು ಕೋಣೆಯ ಕಪಾಟಿನಿಂದ ನಗದು ಹಾಗೂ ಚಿನ್ನಾಭರಣವನ್ನು ಲಪಟಾಯಿಸಿದ್ದಾರೆ. ಮನೆಯಲ್ಲಿದ್ದ ಐದು ಕಪಾಟುಗಳನ್ನು ಜಾಲಾಡಿದ್ದು ಕೈಗೆ ಸಿಕ್ಕ ಆಭರಣಗಳನ್ನು ದೋಚಿದ್ದಾರೆ. ಸುಮಾರು 15 ಸಾವಿರ ರುಪಾಯಿ ನಗದು ಹಾಗೂ 50 ರಿಂದ 60 ಪವನ್ ಚಿನ್ನಾಭರಣ ಕಳ್ಳರ ಪಾಲಾಗಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಬಂಟ್ವಾಳ ಪೊಲೀಸ್ ವೃತ್ತನಿರೀಕ್ಷಕ ಟಿ.ಡಿ.ನಾಗರಾಜ್, ಬೆರಳಚ್ಚು ತಜ್ಞ ಗೌರೀಶ್ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಸೋಮಪ್ಪ ಕೋಟ್ಯಾನ್ ಅವರ ಮನೆ ರಾಷ್ಟ್ರೀಯ ಹೆದ್ದಾರಿಯ ಪಕ್ಕವೇ ಇದ್ದು ಸುತ್ತಮುತ್ತ ಸಾಕಷ್ಟು ಮನೆಗಳಿದ್ದರೂ ಕಳ್ಳತನ ನಡೆಸುವ ಸಂದರ್ಭದಲ್ಲಿ ಯಾರ ಗಮನಕ್ಕೆ ಬಾರದೇ ಇರುವುದು ಸಾರ್ವಜನಿಕರಲ್ಲಿ ಆಶ್ಚರ್ಯ ಉಂಟು ಮಾಡಿದೆ. ಖಾಸಗಿ ಕಾರ್ಯಕ್ರಮ ನಿಮಿತ್ತ ಮನೆಮಂದಿ ಬೇರೆಡೆ ತೆರಳಿರುವ ಸಂದರ್ಭ ಅಂದರೆ ಮಧ್ಯಾಹ್ನ 12ರಿಂದ 1.30ರ ಒಳಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

Related posts

Leave a Reply

Your email address will not be published. Required fields are marked *