Header Ads
Breaking News

ಹಿರಿಯಡ್ಕ ವೀರಭದ್ರ ದೇವಸ್ಥಾನದಲ್ಲಿ ಸಿರಿ ಜಾತ್ರೆ

ತುಳುನಾಡಿನಲ್ಲಿ 3 ಶತಮಾನಗಳ ಹಿಂದೆ ಕ್ರಾಂತಿಯನ್ನುಂಟುಮಾಡಿದ ಮಹಿಳೆ ಸಿರಿ. ಕಾಯವನ್ನಳಿದು ಮಾಯದ ಶಕ್ತಿಯಾಗಿ ತುಳುನಾಡಿನಾದ್ಯಂತ ಆರಾದಿಸಲ್ಪಡುವ ಮಹಾನ್ ಶಕ್ತಿ. ಇತಿಹಾಸ ಪ್ರಸಿದ್ದ ಉಡುಪಿಯ ಹಿರಿಯಡ್ಕ ವೀರಭದ್ರ ದೇವಸ್ಥಾನದಲ್ಲಿ ಸಿರಿ ಜಾತ್ರೆ ನಡೆಯಿತು. ಅಧಿಕ ಸಂಖ್ಯೆಯ ಸಿರಿ ಆರಾಧಕರು ತಮ್ಮ ಸೇವೆ ಸಲ್ಲಿಸಿದರು. ಐತಿಹಾಸಿಕ ಹಿನ್ನಲೆಯಲ್ಲಿ ಆರಾಧಿಸಲ್ಪಡುವ ಸಿರಿ ಮತ್ತು ಕುಮಾರ ಎಂಬ ಪವಾಡ ಶಕ್ತಿಗಳನ್ನು ಶ್ರದ್ಧಾ ಭಕ್ತಿಗಳಿಂದ ಆರಾಧಿಸಲಾಯಿತು.

ತುಳುನಾಡಿನ ಜಾನಪದ ಸಂಸ್ಕೃತಿಯಲ್ಲಿ ಪ್ರಮುಖ ಪಾತ್ರ ಪಡೆದ ಸಿರಿ ಮತ್ತು ಕುಮಾರ ಇಂದಿಗೂ ದಂತಕತೆಯಾಗಿ ಉಳಿದಿವೆ. ಅತಿಮಾನುಷ ಶಕ್ತಿ ಪಡೆದ ಸಿರಿ ಎಂಬ ಮಹಿಳೆಯ ಪವಾಡ ಮತ್ತು ಆಕೆಯ ಸಂತಾನದಲ್ಲಿ ಜನಿಸಿದ ಕುಮಾರ ಮತ್ತಿತರ ಪವಾಡ ಶಕ್ತಿಗಳನ್ನು ಆರಾಧಿಸುವುದು ತುಳುನಾಡಿನ ಪರಂಪರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನಂದಳಿಕೆ ಸಿರಿ ಆರಾಧಕರ ತವರೂರು. ಆ ಬಳಿಕ ಕವತ್ತಾರು, ಬೊಳ್ಯೊಟ್ಟು ಮತ್ತು ಹಿರಿಯಡ್ಕ ಸಿರಿ ಆರಾಧನಾ ಕೇಂದ್ರಗಳು. ತುಳುನಾಡಿನ ಜನಪದೀಯ ವಿಶಿಷ್ಟ ಆಚರಣೆಗಳಲ್ಲಿ ಒಂದಾಗಿರುವ ಸಿರಿ ಆರಾಧನೆಗೆ ಅದರದ್ದೇ ಆದ ರೂಪು-ರೇಷೆ ಇದೆ. ಸಿರಿ ಮೈಮೇಲೆ ಬಂದಂತೆ ಆವೇಶ ಭರಿತರಾಗಿ ನರ್ತಿಸುವ ಮಹಿಳೆಯರು ಸಿರಿಯ ಪುತ್ರ ಕುಮಾರನಾಗಿ ನರ್ತಿಸುವ ಪುರುಷರು ದೇವಸ್ಥಾನದ ಸುತ್ತಲೂ ಕಾಣ ಸಿಗುತ್ತಾರೆ.ಇನ್ನೂ ಕಂಚಿಲ್ದಾ ಬಾಲೆ(ಅಂದ್ರೆ ಹೆಣ್ಣು ,ಗಂಡು ಮಕ್ಕಳಿಗೆ ಮದುಮಕ್ಕಳ ಅಲಂಕಾರ ಮಾಡಿ ದೇವರ ಮುಂದೆ ಹೂ ಹಣ್ಣು ಬಾಳೆ ಗೊನೆ ಇಟ್ಟು ಸಲ್ಲಿಸುವ ಪೂಜೆ),ತೊಟ್ಟಿಲಿನಲ್ಲಿ ಮಗು ಕುಳಿರಿಸಿ ದೇವರ ಬಲಿಯ ಜೊತೆ ಪ್ರದಕ್ಷಿಣೆ ಹಾಕೊ ಸೇವೆ ಕೂಡ ಇಲ್ಲಿಯ ವಿಶಿಷ್ಟ ಆಚರಣೆ.ಸಂತಾನ ಭ್ಯಾಗ ಕರುಣಿಸುವಂತೆ ಬೇಡಿಕೊಂಡ ಭಕ್ತರು ಈ ಸೇವೆ ದೇವರಿಗೆ ಅರ್ಪಿಸುವುದು ಇಲ್ಲಿಯ ರೂಡಿ.ಒಂದು ರೀತಿಯಿಂದ ಮಾನಸಿಕ ವೈಚಾರಿಕತೆ ಎಂದೆನಿಸಿದರೂ ಜನ ಭಕ್ತಿ ಭಾವಗಳಿಂದ ಆರಾದಿಸುತ್ತಾರೆ.

ಇದು ಒಂದು ರೀತಿಯಿಂದ ಮೂಢನಂಬಿಕೆ ಎಂದೆನಿಸಬಹುದು. ಆದರೆ ಇದರ ಹಿಂದೆ ಜಾನಪದದ ಸೊಗಡಿದೆ. ಸಿರಿ ಎಂದು ಮೈಮೇಲೆ ಆವೇಶ ಭರಿತಳಾಗಿ ದರ್ಶನ ಬರುವ ಮಹಿಳೆ ಅತ್ಯಂತ ಸ್ಪಷ್ಟವಾಗಿ ಸಿರಿ ಪಾಡ್ದನವನ್ನು ಹೇಳುತ್ತಾಳೆ. ಮಕ್ಕಳಾಗದವರು, ಮಕ್ಕಳಿಗೆ ಅಸೌಖ್ಯ ಇರುವವರು ಅಲ್ಲದೆ ಅನೇಕ ಸಮಸ್ಯೆಗಳನ್ನು ಹೊಂದಿದವರು ಇಲ್ಲಿ ಹುರುಳಿ ಕಾಯಿ, ಹಿಂಗಾರ ಹರಕೆ ಸಲ್ಲಿಸುವುದರ ಮೂಲಕ ಮಾನಸಿಕ ನೆಮ್ಮದಿ ಪಡೆದಿದ್ದಾರೆ. ಪ್ರತೀ ವರ್ಷ ಇಲ್ಲಿಗೆ ವಿವಿಧ ಭಾಗಗಳಿಂದ ಜನ ಬಂದು ಹರಕೆ ಸಲ್ಲಿಸುತ್ತಾರೆ. ಬೇರೆ ವಿಚಾರಗಳು ಏನೇ ಇದ್ದರೂ ಜಾನಪದ ಸಮೃದ್ಧತೆಯ ತುಳುನಾಡಿನಲ್ಲಿ ಇಂದಿಗೂ ಸಿರಿ ಆರಾಧನೆ ತನ್ನ ಮಹತ್ವವನ್ನು ಉಳಿಸಿಕೊಂಡಿದೆ.

ಹಿಂದೆ ಮಹಿಳೆಗೆ ತನ್ನೊಳಗೆ ಅಂತರ್ಗತವಾಗಿರತಕ್ಕಂತಹ ಆವೇಶವನ್ನು, ಭಾವನೆಯನ್ನು ಹೊರಹಾಕುವುದಕ್ಕೆ ಇದು ಒಂದು ವೇದಿಕೆಯಾಗಿತ್ತು. ಇಂದಿಗೂ ಇದು ಜಾನಪದ ಸಂಸ್ಕೃತಿಯಾಗಿ-ದಾರ್ಮಿಕ ಆಚರಣೆಯಲ್ಲಿ ಒಂದಾಗಿ ಮುಂದುವರಿದಿದೆ. ಒಟ್ಟಿನಲ್ಲಿ ನಂಬಿಕೆಗಳೂ ಮಾತ್ರ ಇಲ್ಲಿ ಭಿನ್ನ-ವಿಭಿನ್ನವಾಗಿದ್ದು, ಅವರವರ ನಂಬಿಕೆಯ ಮೇಲೆ ಆಚರಣೆಗಳೂ ಭದ್ರವಾಗಿ ನೆಲೆಯೂರಿವೆ.

Related posts

Leave a Reply

Your email address will not be published. Required fields are marked *