Header Ads
Breaking News

ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರಿಗೆ ಸಂತಾಪ ಸೂಚನೆ : ಕುಂದಾಪುರ ಕಾರ್ಯನಿರತ ಪತ್ರಕರ್ತರ ಸಂಘದಿಂದ ನುಡಿನಮನ

ಕುಂದಾಪುರ: ಪತ್ರಕರ್ತ, ಲೇಖಕ, ನಟ ಹೀಗೆ ಬಹುಮುಖವಾಗಿ ತನ್ನನ್ನು ತಾನು ಗುರುತಿಸಿಕೊಂಡಿದ್ದ ರವಿ ಬೆಳಗೆರೆ ಅವರ ನಿಧನ ಕರುನಾಡಿಗೆ ದೊಡ್ಡ ನಷ್ಟ. ಓದುಗರನ್ನು ಮಾತ್ರವಲ್ಲ, ಪ್ರತಿಭಾನ್ವಿತ ಲೇಖಕರನ್ನು ಹುಟ್ಟುಹಾಕಿದವರು. ಪತ್ರಿಕೋದ್ಯಮಕ್ಕೆ ಹೊಸ ಅರ್ಥವನ್ನು ಕಲ್ಪಿಸಿದವರು. ಕನ್ನಡದ ಈಗಿನ ಬಹುತೇಕ ಪತ್ರಕರ್ತರನ್ನು ಒಂದಲ್ಲ ಒಂದು ರೀತಿಯಲ್ಲಿ ತನ್ನದೇ ಆದ ರೀತಿಯಲ್ಲಿ ಪ್ರಭಾವಿಸಿದವರು ರವಿ ಬೆಳಗೆರೆಯವರು ಎಂದು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಹೇಳಿದರು.

ಶುಕ್ರವಾರ ನಿಧನ ಹೊಂದಿದ ಖ್ಯಾತ ಪತ್ರಕರ್ತ, ಹಾಯ್ ಬೆಂಗಳೂರು ವಾರ ಪತ್ರಿಕೆಯ ಪ್ರಧಾನ ಸಂಪಾದಕ, ಲೇಖಕ ರವಿ ಬೆಳಗೆರೆಯವರಿಗೆ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಸಂಘದ ಕಚೇರಿಯಲ್ಲಿ ಶನಿವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಸಂತಾಪ ಸೂಚಿಸಿ, ನುಡಿ ನಮನ ಸಲ್ಲಿಸಿದರು.

ರವಿ ಬೆಳಗೆರೆಯವರ ಬದುಕಿನ ಧನಾತ್ಮಕ ಅಂಶಗಳೇ ಒಂದು ರೀತಿಯಲ್ಲಿ ಅನೇಕರಿಗೆ ಮಾದರಿಯಾಗಬಲ್ಲುದು. ಅಕ್ಷರದಲ್ಲೇ ಬದುಕು ಕಟ್ಟಿಕೊಂಡ ರೀತಿ ಮಾತ್ರ ನಿಜಕ್ಕೂ ಅಪ್ರತಿಮ ಸಾಧನೆ. ಹಾಯ್ ಬೆಂಗಳೂರು ಪತ್ರಿಕೆಯ ಮೂಲಕ ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ರಾಜ್ಯದಾದ್ಯಂತ ಜನಮನ್ನಣೆ ಗಳಿಸಿರುವುದು ಅವರ ಜನಪ್ರಿಯತೆಗೆ ಸಾಕ್ಷಿ. ಅವರು ಬರೆಯದ, ತಿಳಿದುಕೊಳ್ಳದ ವಿಷಯಗಳಿಲ್ಲ. ಯಾವುದೇ ಸಿದ್ಧಾಂತಕ್ಕೂ ಕಟ್ಟು ಬೀಳದೆ, ತನ್ನದೇ ಆದ ರೀತಿಯಲ್ಲಿ ಬರೆದು, ಬದುಕಿದವರು ರವಿ ಬೆಳಗೆರೆ ಎಂದಯ ಶಶಿಧರ ಹೆಮ್ಮಾಡಿ ಹೇಳಿದರು.

ಪತ್ರಕರ್ತ ರಕ್ಷಿತ್ ಬೆಳಪು ಮಾತನಾಡಿ, ನನ್ನಂತ ಅನೇಕ ಮಂದಿ ಯುವ ಪತ್ರಕರ್ತರಿಗೆ ಅವರ ಬರಹಗಳು ಸೂರ್ತಿಯೊಂದಿಗೆ ಪ್ರೇರಣೆಯೂ ಹೌದು. ಅವರಲ್ಲಿನ ಧೈರ್ಯವಂತಿಕೆ, ಅಧ್ಯಯನಶೀಲತೆ, ಎಂದಿಗೂ ಬತ್ತದ ಉತ್ಸಾಹ ಮೆಚ್ಚಬೇಕಾದುದು. ಆದರೆ ಈಗ ಅಕಾಲಿಕವಾಗಿ ಅಗಲಿರುವುದು ಮಾತ್ರ ದುಃಖಕರ ಸಂಗತಿ ಎಂದರು.

ಸಂಘದ ಕಾರ್ಯದರ್ಶಿ ನಾಗರಾಜ ರಾಯಪ್ಪನಮಠ ಸ್ವಾಗತಿಸಿ, ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ವಂದಿಸಿದರು.ಸಂಘದ ಸದಸ್ಯರಾದ ನಾಗರಾಜ ವಂಡ್ಸೆ, ರಾಘವೇಂದ್ರ ಬಳ್ಕೂರು, ಸಿಲ್ವೇಸ್ಟರ್, ದಿನೇಶ್ ರಾಯಪ್ಪನಮಠ, ರಾಜೇಶ್ ಕುಂದಾಪುರ, ಪ್ರಶಾಂತ್ ಪಾದೆ, ಶ್ರೀಕರ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *