
ಹೆಜಮಾಡಿ ಗ್ರಾ.ಪಂ. ಆಡಳಿತ ಸಮಿತಿಯ ಮನವಿಗೂ ಜಗ್ಗದ ನವಯುಗ್ ಕಂಪನಿಯ ಸರ್ವಾಧಿಕಾರದ ವಿರುದ್ಧ, ರೊಚ್ಚಿಗೆದ್ದ ಹೆಜಮಾಡಿ ಗ್ರಾ.ಪಂ. ಆಡಳಿತ ಸಮಿತಿಯ ಎಲ್ಲಾ ಸದಸ್ಯರು ಒಳ ರಸ್ತೆಯ ಟೋಲ್ಗೇಟ್ ಬಳಿಯ ಖಾಸಗಿ ಜಾಗದಲ್ಲಿ ಮತ್ತೊಂದು ರಸ್ತೆ ನಿರ್ಮಿಸಿ, ವಾಹನಗಳಿಗೆ ಟೋಲ್ ತಪ್ಪಿಸಿ ಹೋಗುವ ವ್ಯವಸ್ಥೆ ಕಲ್ಪಿಸುತ್ತಿದಂತೆ ಚುರುಕಾದ ನವಯುಗ್ ಅಧಿಕಾರಿಗಳು ಹೆಜಮಾಡಿ ವಿಳಾಸದ ಐಡಿ ಇದ್ದ ವಾಹನಗಳಿಗೆ ಟೋಲ್ ಫ್ರೀ ಎಂಬುದಾಗಿ ಲಿಖಿತವಾಗಿ ನೀಡಿದ್ದಾರೆ.
ಹೆಜಮಾಡಿ ಗ್ರಾ.ಪಂ. ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ ನೇತೃತ್ವದಲ್ಲಿ ಎಲ್ಲಾ ಸದಸ್ಯರು ಒಳ ರಸ್ತೆಯ ಟೋಲ್ ಬಳಿ ಸೇರಿ, ತಾವು ಕಂಪನಿಗೆ ನೀಡಿದ ಮನವಿಯ ಬಗ್ಗೆ ವಿಚಾರಿಸಿದರೂ ಪೂರಕ ಉತ್ತರ ದೊರಕದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಗ್ರಾ.ಪಂ. ಸದಸ್ಯರು, ಯಂತ್ರದ ಮೂಲಕ ಟೋಲ್ ಸಮೀಪದ ಖಾಸಗಿ ರಸ್ತೆಯಲ್ಲಿ ಪೊಲೀಸರ ಆಕ್ಷೇಪದ ನಡುವೆಯೂ ರಸ್ತೆ ನಿರ್ಮಿಸಿ, ಎಲ್ಲಾ ವಾಹನಗಳಿಗೂ ಉಚಿತವಾಗಿ ಓಡಾಟ ನಡೆಸಲು ಅವಕಾಶ ಕಲ್ಪಿಸುವ ಮೂಲಕ, ಗ್ರಾ.ಪಂ. ಸದಸ್ಯರು ಸಾರ್ವಜನಿಕರಿಗಾಗಿ ತಮ್ಮ ಅಧಿಕಾರದ ಸದುಪಯೋಗ ಹೇಗೆ ಮಾಡಬಹುದು ಎಂಬುದನ್ನು ಮಾಡಿ ತೋರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಗ್ರಾ.ಪಂ. ಸದಸ್ಯರು ನಿರ್ಮಿಸಿದ ರಸ್ತೆಯನ್ನು ಒಂದು ಹಂತದಲ್ಲಿ ಮುಚ್ಚಲು ಯತ್ನಿಸಿದರಾದರೂ, ಅದಕ್ಕೆ ವಿರೋಧ ವ್ಯಕ್ತ ಪಡಿಸಿದ ಸದಸ್ಯರು ಹೆಜಮಾಡಿ ಗ್ರಾಮಸ್ಥರಿಗೆ ಟೋಲ್ ಫ್ರೀ ಎಂಬುದಾಗಿ ಲಿಖಿತವಾಗಿ ನೀಡದ ಹೊರತು ಆ ರಸ್ತೆಯನ್ನು ಮುಚ್ಚಲು ಬಿಡುವುದಿಲ್ಲ ಎಂದಾಗ, ಟೋಲ್ನ ಉಸ್ತುವಾರಿ ಶಿವಪ್ರಸಾದ್ ರೈ, ಮೇಲಾಧಿಕಾರಿಗಳಿಗೆ ಇಲ್ಲಿನ ಪರಿಸ್ಥಿತಿಯನ್ನು ಮನದಟ್ಟು ಮಾಡಿ ಟೋಲ್ ಫ್ರೀ ಎಂಬ ಪತ್ರ ಗ್ರಾ.ಪಂ. ಕೈ ಸೇರುವಂತ್ತೆ ಮಾಡುವ ಮೂಲಕ ಸಮಸ್ಯೆ ತಾತ್ಕಾಲಿಕ ಪರಿಹಾರ ಕಂಡಿದ್ದು ಬುಧವಾರ ನವಯುಗ್ ಅಧಿಕಾರಿಯೋರ್ವರು ಗ್ರಾ.ಪಂ.ಗೆ ಮಾತುಕತೆಗೆ ಬಂದು ಇಂದು ನೀಡಿದ ಪತ್ರವನ್ನು ಅಧಿಕೃತ ಮಾಡಲಿದ್ದಾರೆ.