Header Ads
Breaking News

ಹೆದ್ದಾರಿ ಅರೆಬರೆ ಕಾಮಗಾರಿಯ ವಿರುದ್ಧ ಪ್ರತಿಭಟನೆ; ಪಡುಬಿದ್ರಿ ಗ್ರಾ.ಪಂ. ಸಾರಥ್ಯದಲ್ಲಿ ಪ್ರತಿಭಟನೆ, ಆಕ್ರೋಶ

ಸರ್ವಿಸ್ ರಸ್ತೆ ಸಹಿತ ಒಳಚರಂಡಿ ಕಾಮಗಾರಿ ಅರೆಬರೆಯಾಗಿ ನಿರ್ವಾಹಿಸಿದ ರಾಷ್ಟ್ರೀಯ ಹೆದ್ದಾರಿ ಚತುರ್ಷಥ ಕಾಮಗಾರಿಯ ಗುತ್ತಿಗೆ ಕಂಪನಿ ನವಯುಗ್ ಹಾಗೂ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಪಡುಬಿದ್ರಿ ಗ್ರಾ.ಪಂ ಸಾರಥ್ಯದಲ್ಲಿ ಪೇಟೆ ಪ್ರದೇಶದಲ್ಲಿ ಪ್ರತಿಭಟನಾ ಸಭೆ ನಡೆಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ದಲಿತ ಮುಖಂಡ ಲೋಕೇಶ್ ಕಂಚಿನಡ್ಕ, ಹೆದ್ದಾರಿಯ ಅರೆಬರೆ ಕಾಮಗಾರಿ ಪಡುಬಿದ್ರಿ ಸಹಿತ ಎಲ್ಲಾ ಸಾರ್ವಜನಿಕರಿಗೂ ಸಮಸ್ಯೆಯ ಮೂಲವಾಗಿದ್ದರೂ ಪಡುಬಿದ್ರಿ ಪೇಟೆ ಭಾಗದ ಅಂಗಡಿ ಮುಗ್ಗಟ್ಟುಗಳನ್ನು ಪ್ರತಿಭಟನೆಯ ಸಂದರ್ಭ ಅರ್ಧ ದಿನ ಮುಚ್ಚುವಂತೆ ಗ್ರಾ.ಪಂ.ಕೇಳಿಕೊಂಡಿದ್ದರೂ ಬಹುಪಾಲು ಅಂಗಡಿಗಳು ಗ್ರಾ.ಪಂ. ಮನವಿಗೆ ಮಾನ್ಯತೆ ನೀಡದೆ ತಮ್ಮ ಸಾರ್ವಜನಿಕ ಕಾಳಜಿಯನ್ನು ಎತ್ತಿ ತೋರಿಸಿದಂತ್ತಾಗಿದೆ.

ಕಾನೂನು ಬಾಹಿರವಾಗಿ ತೀರ ಹತ್ತಿರ ಹತ್ತಿರವಾಗಿ ಮೂರು ಟೋಲ್ ಗೇಟ್ ಗಳು ಜನರ ಪ್ರಾಣ ಹಿಂಡುತ್ತಿದ್ದು, ಅದಕ್ಕೆ ಪೂರಕವಾಗಿ ಪೊಲೀಸರು ಜನರ ಪ್ರಾಣವನ್ನೇ ತೆಗೆಯ ಹೊರಟಂತ್ತಿದೆ.. ತಕ್ಷಣವೇ ಈ ವಸೂಲಿ ದಂಧೆಯನ್ನು ಪೊಲೀಸರು ನಿಲ್ಲಿಸುವಂತೆ ಪ್ರತಿಭಟನಾ ಸ್ಥಳದಲ್ಕಿದ್ದ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಗ್ರಾ.ಪಂ . ಬೇರೆಯವರ ತಪ್ಪನ್ನು ಎತ್ತಿ ತೋರಿಸುವಂತ್ತೆ ತಮ್ಮ ತಪ್ಪನ್ನು ಕೂಡ ಸರಿ ಪಡಿಸಿಕೊಳ್ಳಬೇಕಾಗಿದೆ, ಹೆದ್ದಾರಿಯ ಪಶ್ಚಿಮ ಬದಿಯಲ್ಲಿದ್ದ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಮೂಲಕ ಉತ್ತಮ ಕೆಲಸವನ್ನೇ ಮಾಡಿದ್ದಾರೆ, ಆದರೆ ಪೂರ್ವ ಬದಿಯ ಗೂಡಂಗಡಿಗಳು ಸಹಿತ ಹೆದ್ದಾರಿ ಆಕ್ರಮಿಸಿಕೊಂಡು ವ್ಯಾಪಾರ ವಹಿವಾಟು ನಡೆಸುವವರ ಪರ ನಿಂತಿದ್ದಾರೆ. ಗ್ರಾ.ಪಂನ ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಸರಿಯಲ್ಲ ಎಲ್ಲರಿಗೂ ಒಂದೇ ರೀತಿಯ ಕಾನೂನು ಪಾಲಿಸಬೇಕು ತಕ್ಷಣವೇ ಪೂರ್ವ ಬದಿಯ ಅಕ್ರಮಗಳನ್ನು ತೆರವುಗೊಳಿಸಬೇಕು ತಪ್ಪಿದಲ್ಲಿ ಗ್ರಾ.ಪಂ. ವಿರುದ್ಧವೇ ಪ್ರತಿಭಟಿಸ ಬೇಕಾದೀತು ಎಂಬುದಾಗಿ ಎಚ್ಚರಿಸಿದ್ದಾರೆ.

ಈ ಸಂದರ್ಭ ಗ್ರಾ.ಪಂ.ಅಧ್ಯಕ್ಷೆ ದಮಯಂತಿ ಅಮೀನ್, ಉಪಾಧ್ಯಕ್ಷ ವೈ.ಸುಕುಮಾರ್, ಜಿ.ಪಂ.ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾ. ಪಂ.ಸದಸ್ಯ ದಿನೇಶ್ ಕೋಟ್ಯಾನ್, ಗ್ರಾ.ಪಂ.ಸದಸ್ಯರುಗಳು, ವಿವಿಧ ಸಂಘಟನೆಗಳ ಪಧಾಧಿಕಾರಿಗಳು ಭಾಗವಹಿಸಿದ್ದು, ಪಡುಬಿದ್ರಿ, ಕಾಪು, ಶಿರ್ವ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.

Related posts

Leave a Reply

Your email address will not be published. Required fields are marked *