Breaking News

ಹೊಸಾಡು ಕೊರಗರ ಮೇಲೆ ಮೇಲ್ಜಾತಿ ಜನರ ಹಲ್ಲೆ, ಬೇಗ ಕ್ರಮಕ್ಕೆ ಒತ್ತಾಯಿಸಿ ಗಂಗೊಳ್ಳಿಯಲ್ಲಿ ಪ್ರತಿಭಟನೆ


ಹೊಸಾಡು ಗ್ರಾಮದ ಕೊರಗ ಸಮುದಾಯದ ಮೇಲೆ ಹಲ್ಲೆ ನಡೆಸಿ ನೈತಿಕ ಪೊಲೀಸ್‌ಗಿರಿ ನಡೆಸಿದವರ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ಸಹಿತ ಚಾರ್ಜ್‌ಶೀಟ್ ಹಾಕುವಂತೆ ಕೋರಿ ಸಿಪಿ‌ಎಂ ಬೈಂದೂರು ವಲಯ ಸಮಿತಿ ಹಾಗೂ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಕುಂದಾಪುರ ಇವರ ನೇತೃತ್ವದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿ‌ಐ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಹೊಸಾಡು ಗ್ರಾಮದ ಕೊರಗ ಸಮುದಾಯದ ನಿಶ್ಚಿತಾರ್ಥ ಸಮಾರಂಭದಲ್ಲಿದ್ದ ಮನೆಗೆ ಏಕಾ‌ಏಕಿ ನುಗ್ಗಿ ಕೊರಗ ಯುವಕರ ಮೇಲೆ ಹಲ್ಲೆ ನಡೆಸಿ ಪಂಚಾಯತ್ ಸದಸ್ಯೆಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಅತ್ಯಾಚಾರದ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕೂಡಲೇ ದಲಿತ ದೌರ್ಜನ್ಯ ಪ್ರಕರಣ ಸಹಿತ ಚಾರ್ಜ್‌ಶೀಟ್ ಹಾಕಬೇಕು. ಆಹಾರದ ಹಕ್ಕು ನಮ್ಮ ಆಯ್ಕೆ, ಆಹಾರ ಹಕ್ಕು ತಡೆಯುವ ಅಧಿಕಾರ ಯಾರಿಗೂ ಇಲ್ಲ. ಈ ಪ್ರಕರಣದಲ್ಲಿ ಮುಗ್ಧರ ಮೇಲೆ ನಡೆದ ದೌರ್ಜನ್ಯ ಅತ್ಯಂತ ಹೇಯ ಕೃತ್ಯ ಹಾಗೂ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಂಚಾಯತ್ ಸದಸ್ಯೆ ಶಕುಂತಲಾ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ಬರಹಗಳನ್ನು ಹಾಕಿ ಸದಸ್ಯೆಯ ತೇಜೋವಧೆ ಮಾಡಲಾಗುತ್ತಿದ್ದು ಪ್ರಕರಣದ ಕೂಲಂಕೂಷ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ದೌರ್ಜನ್ಯಕ್ಕೊಳಗಾದ ಅಮಾಯಕ ಕೊರಗ ಸಮುದಾಯದ ಕುಟುಂಬದವರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ರದ್ದುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ರಾಘವ ಪಡೀಲ್ ಮನವಿಯನ್ನ ಸ್ವೀಕರಿಸಿದರು. ಗಂಗೊಳ್ಳಿ ಪೊಲೀಸ್ ಠಾಣೆಯ ಎಸ್ಸೈ ಸುಬ್ಬಣ್ಣ, ಸಿಪಿ‌ಐ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ. ಶಂಕರ, ಪಕ್ಷದ ಮುಖಂಡರಾದ ಸುರೇಶ ಕಲ್ಲಾಗರ, ಎಚ್. ನರಸಿಂಹ, ವೆಂಕಟೇಶ ಕೋಣಿ, ಕುಂದಾಪುರ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಂಚಾಲಕ ಶ್ರೀಧರ ನಾಡ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply