Breaking News

ಹೊಸ ಪೊಲೀಸ್ ಆಯುಕ್ತರ ನೇಮಕಾತಿಯಲ್ಲಿ ಮತ್ತೆ ರಾಜಕೀಯ ಮೇಲಾಟ

ಮಂಗಳೂರು: ನಗರ ಪೊಲೀಸ್ ಆಯುಕ್ತರಾಗಿದ್ದ ಎಮ್.ಚಂದ್ರಶೇಖರ್ ಅವರನ್ನು ಬೆಂಗಳೂರಿಗೆ ವರ್ಗಾಯಿಸಿ ಸತೀಶ್ ಕುಮಾರ್ ಅವರನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಕಗೊಳಿಸಿ ರಾಜ್ಯ ಗೃಹ ಇಲಾಖೆ ಆದೇಶ ಹೊರಡಿಸಿತ್ತು. ಆದರೆ ಇದೀಗ ಕೆಲವೊಂದು ಕಾಂಗ್ರೆಸ್ ಮುಖಂಡರಿಂದ ಸತೀಶ್ ನೇಮಕದ ಬಗ್ಗೆ ದೂರುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಗೃಹ ಇಲಾಖೆ ಸತೀಶ್ ಕುಮಾರ್ ಅವರ ನೇಮಕಾತಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಸಚಿವ ಯು.ಟಿ.ಖಾದರ್ ಹಾಗೂ ಇತರ ಶಾಸಕರು ಮತ್ತು ಕಾಂಗ್ರೆಸ್ ಮುಖಂಡರು ಜೊತೆಯಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸತೀಶ್ ಕುಮಾರ್ ವಿರುದ್ಧ ದೂರು ಸಲ್ಲಿಸಿದ್ದರು. 2008ರಲ್ಲಿ ಸತೀಶ್ ಕುಮಾರ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಆಗಿದ್ದ ಸಮಯದಲ್ಲಿ ಮಂಗಳೂರಿನಲ್ಲಿ ಚರ್ಚ್ ದಾಳಿ ನಡೆಸಿದ್ದಲ್ಲದೆ, ತದನಂತರ ಚರ್ಚ್‌ಗೆ ತೆರಳುವ ಭಕ್ತರ ಮೇಲಾದ ಪೊಲೀಸ್ ದೌರ್ಜನ್ಯಗಳನ್ನು ಸಹಿತ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಈ ದೂರನ್ನು ಸ್ವೀಕರಿಸಿ ಗೃಹ ಇಲಾಖೆ ಸತೀಶ್ ಕುಮಾರ್ ಅವರ ನೇಮಕಾತಿಯನ್ನು ಕೂಡಲೇ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ಪರ್ಯಾಯ ಅಧಿಕಾರಿಯನ್ನು ಶೀಘ್ರವೇ ನೇಮಕಾತಿಗೊಳಿಸಿ ಸರ್ಕಾರ ಆದೇಶ ಹೊರಡಿಸಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Related posts

Leave a Reply