Header Ads
Header Ads
Breaking News

ಹೊಸ ರೂಪ ಪಡೆದ ಬಂಟ್ವಾಳದ ಬಡ್ಡಕಟ್ಟೆಯ ಬಸ್ ನಿಲ್ದಾಣ

ಬಂಟ್ವಾಳ: ಪ್ಲಾಸ್ಟಿಕ್ ಚೀಲ, ಬಾಟಲಿ ಹಾಗೂ ಕೆಸರು ತುಂಬಿಕೊಂಡು ನಿಷ್ಪ್ರಯೋಜಕವಾಗಿದ್ದ ಬಂಟ್ವಾಳದ ಬಡ್ಡಕಟ್ಟೆಯ ಬಸ್ಸು ನಿಲ್ದಾಣ ಸ್ವಚ್ಛತಾ ಆಂದೋಲನದಡಿ ದುರಸ್ತಿಗೊಂಡಿದ್ದು ಇದೀಗ ಸುಣ್ಣ ಬಣ್ಣ ಬಳಿದು ಹೊಸ ರೂಪ ಪಡೆದುಕೊಂಡಿದೆ.ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಬಸ್ಸು ನಿಲ್ದಾಣದ ದುರಸ್ತಿಯ ಜವಬ್ದಾರಿ ಹೊತ್ತುಕೊಂಡು ಹೊಸ ಛಾವಣಿ ಅಳವಡಿಸಿ ಜನ ಬಳಕೆಗೆ ಉಪಯೋಗವಾಗುವಂತೆ ಮಾಡಿದ್ದಾರೆ. ಭಾನುವಾರ ಸಂಜೆ ಬಂಟ್ವಾಳದ ರೋಟರಿ ಕ್ಲಬ್ ಹಾಗೂ ಆನ್ಸ್ ಕ್ಲಬ್ ಸದಸ್ಯರು ಸೇರಿಕೊಂಡು ಬಸ್ಸು ನಿಲ್ದಾಣದಲ್ಲಿ ವರ್ಲಿ ಚಿತ್ರಗಳನ್ನು ಬಿಡಿಸಿ ಬಸ್ಸು ನಿಲ್ದಾಣಕ್ಕೆ ವಿಶೇಷ ಮೆರುಗು ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಪುರಸಭೆಯ ವತಿಯಿಂದ ಇಂಟರ್‌ಲಾಕ್ ಅಳವಡಿಸುವುದಾಗಿ ಪುರಸಭಾಧಿಕಾರಿಗಳು ತಿಳಿಸಿದ್ದಾರೆ. ಹಲವು ವರ್ಷಗಳಿಂದ ಸಮಸ್ಯೆಯ ಗೂಡಾಗಿದ್ದ ಬಡ್ಡಕಟ್ಟೆಗೆ ಬಸ್ಸುನಿಲ್ದಾಣ ಸ್ವಚ್ಛಗೊಳ್ಳುವ ಮೂಲಕ ಹಲವು ಅವಕಾಶಗಳನ್ನು ತೆರೆದಿಟ್ಟಿದೆ. ಬಸ್ಸು ನಿಲ್ದಾಣದಲ್ಲಿಯೇ ಬಸ್ಸುಗಳ ನಿಲುಗಡೆಗೆ ಅವಕಾಶ, ರಿಕ್ಷಾ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ, ಖಾಸಗಿ ವಾಹನಗಳ ನಿಲುಗಡೆಗೆ ವ್ಯವಸ್ಥೆಗಳನ್ನು ಕಲ್ಪಿಸುವ ಭರವಸೆಯೂ ಸಿಕ್ಕಿದೆ. ಅ.2 ಗಾಂಧಿಜಯಂತಿಯಂದು ಬಸ್ಸುನಿಲ್ದಾಣ ಜನೋಪಯೋಗಕ್ಕೆ ಮುಕ್ತಗೊಳ್ಳಲಿದೆ. ಕಳೆದ ಶುಕ್ರವಾರ ಬಂಟ್ವಾಳ ಪುರಸಭೆಯ ನೇತೃತ್ವದಲ್ಲಿ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ರೋಟರಿ ಕ್ಲಬ್ ಬಂಟ್ವಾಳ ಹಾಗೂ ಜೇಸಿಐ ಬಂಟ್ವಾಳದ ಸಹಯೋಗದೊಂದಿಗೆ ಸ್ವಚ್ಛತಾ ಕಾರ್ಯಕ್ರಮ ಬಡ್ಡಕಟ್ಟೆಯಲ್ಲಿ ನಡೆದಿತ್ತು.

Related posts

Leave a Reply