Header Ads
Breaking News

10 ವರ್ಷದಿಂದ ‘ಕತ್ತಲು ಆವರಿಸಿದ್ದ’ ಮನೆಗೆ ಬೆಳಕು

ಪುತ್ತೂರು : ಪುತ್ತೂರು ನಗರಸಭಾ ವ್ಯಾಪ್ತಿಯಲ್ಲೇ ಇದ್ದರೂ ಕಳೆದ10 ವರ್ಷಗಳಿಂದ ವಿದ್ಯುತ್ ಸೌಕರ್ಯದಿಂದ ವಂಚಿತವಾಗಿದ್ದ ಕುಟುಂಬವೊಂದರ ಮನೆಗೆ ಈ ಬಾರಿಯ ನಗರಸಭಾ ಚುನಾವಣೆಯಲ್ಲಿ ವಾರ್ಡಿನಲ್ಲಿ ಗೆಲುವುದು ಸಾಧಿಸಿರುವ ಎಸ್‌ಡಿಪಿಐ ಪಕ್ಷದವರು ಇದೀಗ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವ ಮೂಲಕ ಆ ಮನೆ ಬೆಳಗುವ ಜತೆಗೆ ಕುಟುಂಬದ ಮನ ಗೆದ್ದಿದ್ದಾರೆ.ಬನ್ನೂರು5ನೇ ವಾರ್ಡಿನಲ್ಲಿ ಬರುವ ಬನ್ನೂರು ಜನತಾ ಕಾಲೋನಿ ನಿವಾಸಿ ಶಶಿಕಾಂತ್ ಆಚಾರ್ಯ ಅವರ ಮನೆಗೆ ಕಳೆದ 10 ವರ್ಷಗಳಿಂದ ಮನೆ ನಂಬ್ರ ಇಲ್ಲದ ಕಾರಣಕ್ಕಾಗಿ ವಿದ್ಯುತ್ ಸಂಪರ್ಕ ಸಿಕ್ಕಿರಲಿಲ್ಲ. ಪ್ರತಿ ಬಾರಿಯ ಚುನಾವಣೆಯ ವೇಳೆ ಮತ ಕೇಳಲು ಬಂದ ರಾಜಕಾರಣಿಗಳ ಮುಂದೆ ಅವರು ತಮ್ಮ ಈ ಸಮಸ್ಯೆಯನ್ನು ಹೇಳಿಕೊಂಡಿದ್ದರೂ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಯಾರ ಸ್ಪಂದನೆಯೂ ಸಿಗದ ಕಾರಣ ಅವರು ಕತ್ತಲ ಬದುಕಿನಲ್ಲೇ ಉಳಿದಿದ್ದರು. ಕಳೆದ ನಗರಸಭಾ ಚುನಾವಣೆಯ ವೇಳೆ ಮತಕೇಳಲು ಹೋಗಿದ್ದ ಎಸ್‌ಡಿಪಿಐ ಕಾರ್ಯಕರ್ತರ ಮುಂದೆಯೂ ಅವರು ವಿದ್ಯುತ್ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಆ ವೇಳೆ ಎಸ್‌ಡಿಪಿಐ ಕಾರ್ಯಕರ್ತರು ಈ ವಾರ್ಡಿನಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವ ಭರವಸೆ ನೀಡಿದ್ದರು. ವಾರ್ಡಿನಲ್ಲಿ ಸಿಕ್ಕಿದ ಜಯದ ಹಿನ್ನಲೆಯಲ್ಲಿ ಇದೀಗ ಎಸ್‌ಡಿಪಿಐ ಕಾರ್ಯಕರ್ತರು ಅವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವ ಮೂಲಕ ನೀಡಿದ ಭರವಸೆ ಈಡೇರಿಸಿದ್ದಾರೆ. ಶಶಿಕಾಂತ್ ಅವರ ಮನೆಗೆ ಎಸ್‌ಡಿಪಿಐ ಪಕ್ಷ ಕಲ್ಪಿಸಿಕೊಟ್ಟಿರುವ ಈ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಗೆಲುವು ಸಾಧಿಸಿರುವ ಎಸ್‌ಡಿಪಿಐ ಪಕ್ಷದ ನಗರಸಭಾ ಸದಸ್ಯೆ ಫಾತಿಮತ್ ಝೌರ ಅವರು ಶುಕ್ರವಾರ ಉದ್ಘಾಟಿಸಿದರು. ಸರ್ಕಾರದಿಂದ ಸಿಗುವ ಮೂಲ ಸೌಕರ್ಯಗಳನ್ನು ಬಡವರು,ಶೋಷಿತರು ಸೇರಿದಂತೆ ವಾರ್ಡಿನ ಎಲ್ಲಾ ವರ್ಗದ ಜನತೆಗೆ ಸಮಾನವಾಗಿ ಹಂಚುವ ಕೆಲಸ ಮಾಡುವುದಾಗಿ ಅವರು ತಿಳಿಸಿದರು. ಶಶಿಕಾಂತ್ ಅವರು ಮಾತನಾಡಿ ಚುನಾವಣೆ ವೇಳೆ ಮತ ಕೇಳಲು ಬಂದಿದ್ದ ಎಲ್ಲರಲ್ಲೂ ವಿದ್ಯುತ್ ಸಮಸ್ಯೆಯನ್ನು ಹೇಳಿಕೊಂಡಿದ್ದೆ. ಆದರೆ ಯಾರೂ ಸ್ಪಂದಿಸಿರಲಿಲ್ಲ. ಆದರೆ ಎಸ್‌ಡಿಪಿಐ ಪಕ್ಷದವರು ಗೆದ್ದರೆ ಮಾಡಿಕೊಡುತ್ತೇವೆ ಎಂದು ಹೇಳಿದ್ದರು. ಈಗ ಅವರು ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ ಎಂದರು. ಎಸ್‌ಡಿಪಿಐ ಪುತ್ತೂರು ಕ್ಷೇತ್ರ ಸಮಿತಿಯ ಜತೆ ಕಾರ್ಯದರ್ಶಿ ಅಶ್ರಫ್ ಬಾವ,ಪುತ್ತೂರು ನಗರ ಸಮಿತಿಯ ಅಧ್ಯಕ್ಷ ಹಂಝ ಅಫ್ನಾನ್, ಬನ್ನೂರು ವಲಯಾಧ್ಯಕ್ಷ ಮೊಹಮ್ಮದ್ ಹುಸೇನ್,ಬನ್ನೂರು ವಲಯ ಕಾರ್ಯದರ್ಶಿ ಇಫಾಝ್,ರಫೀಕ್ ಬಾಂಬೆ, ಮೊಹಮ್ಮದ್ ಮೋನು ಮತ್ತಿತರರು ಇದ್ದರು.

Related posts

Leave a Reply