Header Ads
Breaking News

13 ವರ್ಷದ ಆಡಳಿತದಲ್ಲಿ ನಗರದ ಅಭಿವೃದ್ದಿಗೆ ಬಿಜೆಪಿ ಪ್ರಯತ್ನ ಮಾಡಿಲ್ಲ : ಎಂ. ವೆಂಕಪ್ಪ ಗೌಡ ಹೇಳಿಕೆ

ಕಳೆದ 13ವರ್ಷಗಳಿಂದ ಸುಳ್ಯ ನಗರ ಪಂಚಾಯತ್‌ನಲ್ಲಿ ಆಳ್ವಿಕೆ ನಡೆಸಿದ ಬಿಜೆಪಿ ನಗರದ ಅಭಿವೃದ್ದಿಗೆ ಮತ್ತು ಇಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಯಾವುದೇ ರೀತಿಯಲ್ಲಿ ಪ್ರಯತ್ನ ನಡೆಸಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಕೆಪಿಸಿಸಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ ಹೇಳಿದರು.

ಅವರು ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಪ್ರತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ನಗರದ ಅಭಿವೃದ್ದಿಗಾಗಿ ಬದಲಾವಣೆ ಸುಳ್ಯ ನಗರದಲ್ಲಿ ಆಗಬೇಕು ಎನ್ನುವ ಉದ್ದೇಶಗಳಿನ್ನಿಟ್ಟು ಕಾಂಗ್ರೆಸ್ ಪ್ರಣಾಳಿಕೆಯ ಮೂಲಕ ಚುನಾವಣೆ ಎದುರಿಸುತ್ತಿದ್ದೇವೆ. ಬಿಜೆಪಿ ಆಡಳಿತ ಅಲ್ಲದೇ ಶಾಸಕರು ಇದ್ದರೂ ನಗರದ ಸಮಸ್ಯೆಯನ್ನು ಪರಿಹಾರ ನಡೆಸುವಲ್ಲಿ ಬಿಜೆಪಿ ವಿಫಲವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಶೀಘ್ರದಲ್ಲಿಯೇ ನಗರಕ್ಕೆ ಶುದ್ದ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಲಾಗುವುದು. ಇದಕ್ಕಾಗಿ ಪಯಸ್ವಿನಿ ನದಿಗೆ ವೆಂಟೆಡ್ ಡ್ಯಾಂ ನಿರ್ಮಿಸಿ ಶಾಶ್ವತ ಯೋಜನೆ ರೂಪಿಸಲಾಗುವುದು. ನಗರದಲ್ಲಿ ಒಳಚರಂಡಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲಾಗುವುದು. ಪಯಸ್ವಿನಿ ನದಿಗೆ ನಗರದ ಕೊಳಚೆ ನೀರು ಹರಿಯುವುದನ್ನು ತಡೆದು ಕೊಳಚೆ ನೀರು ಒಳಚರಂಡಿಯಲ್ಲಿ ಹರಿಯುವಂತೆ ಮಾಡಲಾಗುವುದು. ಜನಪ್ರತಿನಿಧಿಗಳನ್ನು ಮತ್ತು ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಕೆ.ಎಂ. ಮುಸ್ತಫ ಮಾತನಾಡಿ ಸುಳ್ಯ ಪ್ರಮುಖವಾದ ವಾಣಿಜ್ಯ ಕೇಂದ್ರ ಬೆಳೆಯುತ್ತಿರುವ ನಗರದಲ್ಲಿ ಅಭಿವೃದ್ದಿ ಕುಂಠಿತಗೊಂಡಿದೆ. ನಗರಕ್ಕೆ ಶುದ್ದ ಕುಡಿಯುವ ನೀರು ಅತೀ ಅಗತ್ಯ. ನಗರದ ಕೊಳಚೆ ನಿರ್ಮೂಲನೆ ಆಗಬೇಕಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಈ ಬಗ್ಗೆ ಹಲವು ವರ್ಷಗಳ ಹಿಂದೆಯೇ ಸರ್ವೇ ನಡೆಸಿದೆ ಎಂದು ಹೇಳಿದರು.ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್. ಸಂಶುದ್ದೀನ್, ನಂದರಾಜ್ ಸಂಕೇಶ, ಶಿಲ್ಪ ಇಬ್ರಾಹಿಂ, ಲಕ್ಷ್ಮಣ ಶೆಣೈ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *