Header Ads
Breaking News

14 ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ : ಪುತ್ತೂರಿನಲ್ಲಿ ದಲಿತ್ ಸೇವಾ ಸಮಿತಿ ಪ್ರತಿಭಟನೆ

ಪುತ್ತೂರು : ಸರ್ಕಾರಿ ಮತ್ತು ಸರ್ಕಾರದ ಅಧೀನ ಇಲಾಖೆಗಳಲ್ಲಿ ದುಡಿಯುತ್ತಿರುವ ಡಿಗ್ರೂಪ್ ನೌಕರರರನ್ನು ಖಾಯಂಗೊಳಿಸುವುದು, ಡಿಸಿ ಮನ್ನಾ ಭೂಮಿಯನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಆಯಾಯ ಗ್ರಾಮಗಳಲ್ಲಿ ಹಂಚುವುದು, ಪುತ್ತೂರಿನಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣ ನಿವೇಶನ ರಹಿತರಿಗೆ ನಿವೇಶನ ಒದಗಿಸುವುದು, ಕಾಲೋನಿಗಳಿಗೆ ರಸ್ತೆ ಸೌಕರ್ಯ ಒದಗಿಸುವುದು ಸೇರಿದಂತೆ ವಿವಿಧ 14 ಬೇಡಿಕೆಗಳನ್ನು ಮುಂದಿಟ್ಟುಕೊಂಡು ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ಪುತ್ತೂರು ಶಾಖೆಯ ನೇತೃತ್ವದಲ್ಲಿ ಪುತ್ತೂರಿನ ಮಿನಿವಿಧಾನ ಸೌಧದ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ಅಧ್ಯಕ್ಷ ಸೇಸಪ್ಪ ಬೆದ್ರಕ್ಕಾಡು ಅವರು, ಡಿಸಿ ಮನ್ನಾ ಭೂಮಿಯನ್ನು ಅಲ್ಪಪ್ರಮಾಣದಲ್ಲಿ ಹಂಚಲಾಗಿದೆಯೇ ಹೊರತು ಹೆಚ್ಚಿನ ಕಡೆಗಳಲ್ಲಿ ಬಾಕಿ ಉಳಿಸಿಕೊಳ್ಳಲಾಗಿದೆ. ಹೆಚ್ಚಿನ ಹಳ್ಳಿಗಳ ಕಾಲೋನಿಗಳಿಗೆ ರಸ್ತೆ ಸೌಕರ್ಯವಿಲ್ಲ, ರಸ್ತೆಗಳಿದ್ದರೂ ಅಭಿವೃದ್ಧಿ ಪಡಿಸುವ ಕೆಲಸ ನಡೆದಿಲ್ಲ. ಕಾಲೋನಿಗಳ ರಸ್ತೆ ಅಭಿವೃದ್ಧಿಗೆ ಕೇವಲ ರೂ.10 ಲಕ್ಷ ಅನುದಾನ ನೀಡಿ ಕೈತೊಳೆಯುವ, ರಸ್ತೆ ಅಭಿವೃದ್ಧಿಗೆ ಅನುದಾನ ಬಂದಿದೆ ಎಂದು ಬ್ಯಾನರ್ ಅಳವಡಿಸಿ  ಪೋಸ್  ಕೊಡುವ ಕೆಲಸ ಆಗುತ್ತಿದೆ, ಡಿಗ್ರೂಪ್ ಹೊರಗುತ್ತಿಗೆ ನೌಕರರಿಗೆ ಸಮಾನ ಸಂಬಳ ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು. ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ಮುಖಂಡ ಮನೋಹರ್ ಕೋಡಿಜಾಲು ಅವರು ತಮ್ಮ ಬೇಡಿಕೆಗಳನ್ನು ಮುಂದಿಟ್ಟು, ಸಂಬಂಧಪಟ್ಟವರು ಇದಕ್ಕೆ ಸ್ಪಂದನೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಆಲಿಸಿದ ಶಾಸಕ ಸಂಜೀವ ಮಠಂದೂರು ಅವರು, ಈ 14 ಬೇಡಿಕೆಗಳ ಪೈಕಿ ಶಾಸಕರ ಮಿತಿಮಿತಿಯಲ್ಲಿ ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿ ಏನೇನು ಮಾಡಬೇಕೋ ಅದನ್ನು ನಾನು ಮಾಡುತ್ತೇನೆ. ಡಿಸಿ ಮನ್ನಾ ಹಾಗೂ ಡಿಗ್ರೂಪ್ ನೌಕರರ ಸಮಸ್ಯೆ ಸರ್ಕಾರದ ಹಂತದಲ್ಲಿ ಪರಿಹಾರವಾಗಬೇಕಿದ್ದು, ಈ ಕುರಿತು ಸಂಬಂಧಪಟ್ಟ ಸಚಿವರ ಹಾಗೂ ಮುಖ್ಯಮಂತ್ರಿಯವರ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ ಎಂದರು.

ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ಪುತ್ತೂರು ಶಾಖೆಯ ಅಧ್ಯಕ್ಷ ಬಿ.ಕೆ.ಅಣ್ಣಪ್ಪ ಕಾರೆಕ್ಕಾಡು, ಜಿಲ್ಲಾ ಸಮಿತಿಯ ಉಪಾಧ್ಯಕ್ಷ ರಾಜು ಹೊಸ್ಮಠ, ತಾಲೂಕು ಶಾಖೆಯ ಸಂಚಾಲಕ ಕೃಷ್ಣ ನಾಯ್ಕ ಆಯರ್?ಪು, ಗೌರವಾಧ್ಯಕ್ಷ ತನಿಯಾ ಒಳತ್ತಡ್ಕ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸುನಂದಾ ತೆಂಕಿಲ, ಜಿಲ್ಲಾ ಸಮಿತಿಯ ಮುಖಂಡ ಪ್ರಸಾದ್ ಬೊಳ್ಮಾರು ಮತ್ತಿತರರು ಇದ್ದರು.

Related posts

Leave a Reply

Your email address will not be published. Required fields are marked *