Header Ads
Header Ads
Breaking News

ಕನ್ನಡ ವಿದ್ಯಾರ್ಥಿಗಳಿಗೆ ಮಲಯಾಳ ಅಧ್ಯಾಪಕನ ನೇಮಕ : ವಿದ್ಯಾರ್ಥಿಗಳಿಂದ ನಿರಾಹಾರ ಸತ್ಯಾಗ್ರಹ: ಸ್ಥಳಕ್ಕಾಗಮಿಸಿದ ಜಿಲ್ಲಾ ಶಿಕ್ಷಣ ಉಪನಿರ್ದೇಶಕರಿಗೆ ದಿಗ್ಬಂಧನ.

ಮಂಜೇಶ್ವರ: ಮಾತೃಭಾಷೆಯಲ್ಲಿ ಕಲಿಯುವುದು ಒಬ್ಬ ವಿದ್ಯಾರ್ಥಿಯ ಸಾಂವಿಧಾನಿಕ ಹಕ್ಕು ಆಗಿದ್ದು, ಅದನ್ನು ತಡೆಹಿಡಿದು ಅನ್ಯ ಮಾಧ್ಯಮದಲ್ಲಿ ಪಠ್ಯ ಬೋಧಿಸುವುದು ಅನ್ಯಾಯವಾಗಿದೆ. ಉಚ್ಚ ನ್ಯಾಯಾಲಯದ ವಿಧಿಯನ್ನು ನಿರ್ಲಕ್ಷ್ಯಿಸಿ ಗಡಿನಾಡು ಕಾಸರಗೋಡಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡ ಬಾರದ ಶಿಕ್ಷಕನನ್ನು ಪ್ರತಿವರ್ಷ ಲೋಕಸೇವಾ ಆಯೋಗದ ಮೂಲಕ ನೇಮಿಸುವುದು ಅಕ್ಷಮ್ಯವಾಗಿದೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ ಕನ್ನಡ ಹೋರಾಟ ಸಮಿತಿ ಪದಾಧಿಕಾರಿ ಮಹಾಲಿಂಗೇಶ್ವರ ಭಟ್ ಅಭಿಪ್ರಾಯಪಟ್ಟರು.ಉಪ್ಪಳ ಸಮೀಪದ ಮಂಗಲ್ಪಾಡಿ ಸರಕಾರಿ ಫ್ರೌಢಶಾಲೆ(ಕುಕ್ಕಾರು ಶಾಲೆ)ಯ ಹೈಸ್ಕೂಲು ವಿಭಾಗದ ಗಣಿತ ಕನ್ನಡ ಮಾಧ್ಯಮ ಶಿಕ್ಷಕ ಹುದ್ದೆಗೆ ಎರಡು ವಾರಗಳ ಹಿಂದೆ ನೇಮಕಗೊಂಡ ಮಲೆಯಾಳಿ ಶಿಕ್ಷಕನನ್ನು ಬದಲಾಯಿಸಿ ಕನ್ನಡ ಬಲ್ಲ ಶಿಕ್ಷಕರನ್ನೇ ನೇಮಿಸಬೇಕೆಂದು ಶಾಲಾ ವಿದ್ಯಾರ್ಥಿಗಳು-ರಕ್ಷಕ ಶಿಕ್ಷಕ ಸಂಘ ನಡೆಸುತ್ತಿರುವ ಹೋರಾಟದ ಭಾಗವಾಗಿ ಗುರುವಾರ ಶಾಲಾ ಪರಿಸರದಲ್ಲಿ ಆಯೋಜಿಸಿದ ಒಂದು ದಿನದ ನಿರಾಹಾರ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಅಂಬಾರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಕ.ಸಾ.ಪ ಜಿಲ್ಲಾಧ್ಯಕ್ಷ ಎಸ್.ವಿ.ಭಟ್, ಸಾಮಾಜಿಕ ಮುಖಂಡರಾದ ಗೋಪಾಲ ಶೆಟ್ಟಿ ಅರಿಬೈಲು, ವಿಜಯಕುಮಾರ್ ರೈ ಪರಂಕಿಲ, ದಿನೇಶ್ ಚೆರುಗೋಳಿ, ರವೀಂದ್ರ ಶೆಟ್ಟಿ ಹೇರೂರು, ರಕ್ಷಕ ಶಿಕ್ಷಕ ಸಂಘದ ಸದಸ್ಯರಾದ ಭವಾನಿ, ಶಾರದಾ, ಸರ್ವಾಣಿ, ಮಮತಾ, ಶ್ರೀಲತಾ, ಸುಜಾತಾ, ಸತ್ಯವತಿ, ಶೋಭನ್ ಬಾಬು, ಕೇಶವ ಇಚ್ಲಂಗೋಡು, ಚಂದ್ರಕಾಂತ ಇಚ್ಲಂಗೋಡು, ರಾಜೇಶ್ ಇಚ್ಲಂಗೋಡು, ಪದ್ಮನಾಭ ಇಚ್ಲಂಗೋಡು, ಸದಾಶಿವ ಶೆಟ್ಟಿ, ಪ್ರಶಾಂತ್, ಪ್ರಕಾಶ್ ಶೆಟ್ಟಿ ಇಚ್ಲಂಗೋಡು ಬನ್ನೂರು ಮೊದಲಾದವರು ದಿನಪೂರ್ತಿ ಬೆಂಬಲ ಸೂಚಿಸಿ ಉಪಸ್ಥಿತರಿದ್ದರು.ವಿದ್ಯಾರ್ಥಿಗಳು ನಿರಾಹಾರ ಸತ್ಯಾಗ್ರಹ ಸ್ಥಳಕ್ಕೆ ಒತ್ತಡಗಳ ಬಳಿಕ ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಗತ್ಯಂತರವಿಲ್ಲದೆ ಭೇಟಿ ನೀಡಿದರು. ಈ ವೇಳೆ ವಿದ್ಯಾರ್ಥಿಗಳು ಹಾಗೂ ರಕ್ಷಕ ಶಿಕ್ಷಕ ಸಂಘದ ಸದಸ್ಯರು ಉಪನಿರ್ದೇಶಕರನ್ನು ಸುತ್ತುವರಿದು ಕನ್ನಡ ಶಿಕ್ಷಕರನ್ನು ನೇಮಿಸುವಂತೆ ಘೋಷಣೆ ಕೂಗಿದರು. ಮೊದಲಿಗೆ ಕಾರಿಂದ ಇಳಿಯಲು ಬಿಡದ ವಿದ್ಯಾರ್ಥಿಗಳು ಬಳಿಕ ಸತ್ಯಾಗ್ರಹ ಪರಿಸರಕ್ಕೆ ತೆರಳಲು ಅವಕಾಶ ನೀಡಿದರು. ಬಳಿಕ ಅಲ್ಲಿ ಚರ್ಚೆ ನಡೆಸಿದ್ದು, ವಿದ್ಯಾರ್ಥಿಗಳು ಹಾಗೂ ರಕ್ಷಕ ಶಿಕ್ಷಕ ಸಮಿತಿ ಮತ್ತು ಜನಪ್ರತಿನಿಧಿಗಳ ಒತ್ತಾಯಕ್ಕೆ ಮಣಿದು ಶಾಲೆಯಲ್ಲಿ ಕನ್ನಡ ವಿಭಾಗ ಗಣಿತ ಶಿಕ್ಷಕನಾಗಿ ಆಯ್ಕೆಯಾದ ಮಲೆಯಾಳ ಮಾತ್ರ ಗೊತ್ತಿರುವ ಸುನೀಶ್ ಮಾಸ್ತರ್ ಸಮಕ್ಷಮ ಮಾತುಕತೆ ನಡೆಸಿ . ಅಂತಿಮ ಬೇಡಿಕೆ ಈಡೇರಿಕೆ ಮಾಡದ ವಿನಹಃ ಉಪನಿರ್ದೇಶಕರನ್ನು ತೆರಳಲು ಬಿಡುವೆವು ಎಂದು ಹಾಕಿದ ಒತ್ತಡದ ತರವಾಯ ಶಿಕ್ಷಣ ಉಪನಿಧೇರ್ಶಕರು ಶಾಲಾ ಆವರಣದೊಳಗೆ ಮುಖ್ಯೋಪಾಧ್ಯಾಯರ ಕಾರ್ಯಾಲಯಕ್ಕೆ ಆಗಮಿಸಿ ಬಿಸಿಯೇರಿದ ಚರ್ಚೆ ನಡೆಸಿದರು. ಈ ವೇಳೆ ಶಿಕ್ಷಣ ಉಪನಿರ್ದೇಶಕ ಗಿರೀಶ್, ಮುಖ್ಯೋಪಾಧ್ಯಾಯಿನಿ ಲತಾ ಕೆ, ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಸದಸ್ಯೆ ಫರೀದಾ ಝಕೀರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಅಂಬಾರು, ವಿಜಯಕುಮಾರ್ ರೈ, ಜನಪ್ರತಿನಿಧಿಗಳಾದ ಅಬ್ದುಲ್ ರಝಾಕ್ ಚಿಪ್ಪಾರು, ಮೊಹಮ್ಮದ್ ಉಪ್ಪಳ ಗೇಟ್ ಮೊದಲಾದವರು ಕಾರ್ಯಾಲಯದಲ್ಲಿ ಸುನೀಶ್ ಮಾಸ್ತರ್ ಅವರಲ್ಲಿ ಕನ್ನಡ ಭಾಷೆ ಅರಿತಿರುವ ಬಗ್ಗೆ ತೀವ್ರ ಚರ್ಚೆ ನಡೆಸಿದರು. ಆದರೆ ಸುನೀಶ್ ಮಾಸ್ತರ್ ಸಹಕರಿಸದೆ ಮೊಂಡು ನೆವಗಳಿಂದ ಶಿಕ್ಷಣ ಉಪನಿರ್ದೇಶಕರ ಕೇಳಿಕೆಯನ್ನೂ ಅವಗಣಿಸಿದರು.ಕನ್ನಡ ಬಾರದ ಮಲೆಯಾಳಿ ಶಿಕ್ಷಕ ಸುನೀಶ್ ಅವರಲ್ಲಿ ಶಿಕ್ಷಣ ಉಪನಿರ್ದೇಶಕರು ರಜೆಯಲ್ಲಿ ತೆರಳಿ ಕನ್ನಡ ಕಲಿತು ಬರುವಂತೆ ತಿಳಿಸಿದರೂ, ಯಾವೊಂದು ತೀರ್ಮಾನಗಳಿಗೂ ಸಹಕರಿಸದೆ ಮತ್ತಷ್ಟು ಸತಾಯಿಸಿದಾಗ ಶಿಕ್ಷಣ ಉಪನಿರ್ದೇಶಕರು ಕೊಟ್ಟಕೊನೆಗೆ ಕನ್ನಡದಲ್ಲಿ ಮಾತಾಡಲು ಸೂಚಿಸಿದಾಗ ತಬ್ಬಿಬ್ಬಾದುದು ಕಂಡುಬಂತು.ಸೋಮವಾರ ತಾನು ರಜೆಯಲ್ಲಿ ತೆರಳುವ ಬಗ್ಗೆ ಅಂತಿಮ ನಿರ್ಧಾರ ತಿಳಿಸುವುದಾಗಿ ಶಿಕ್ಷಕ ಸುನೀಶ್ ತಿಳಿಸಿದ ಮಾತಿನ ಮೇರೆಗೆ ನಿರಾಹಾರ ಸತ್ಯಾಗ್ರಹ ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.ನಿರಾಹಾರ ಸತ್ಯಾಗ್ರಹಕ್ಕೆ ಇಳಿದ ಹೈಸ್ಕೂಲು ಕನ್ನಡ ವಿಭಾಗದ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಶಾಲೆಯ ಕನ್ನಡ ಶಿಕ್ಷಕರು ಮಧ್ಯಾಹ್ನ ಊಟ ಮಾಡಲಿಲ್ಲ. ವಿದ್ಯಾರ್ಥಿಗಳು ನಿರಾಹಾರರಾಗಿರುವಾಗ ನಾವು ಊಟಮಾಡಲಾರೆವು ಎಂದು ಅವರು ಈ ಸಂದರ್ಭ ತಮ್ಮ ನಿರ್ಧಾರ ಪ್ರಕಟಿಸಿ ಬೆಂಬಲ ಸೂಚಿಸಿದರು. ಬಳಿಕ ಸತ್ಯಾಗ್ಹ ಹಿಂಪಡೆದ ಬಳಿಕ ಅಪರಾಹ್ನ ಊಟ ಮಾಡಿ ತರಗತಿಗಳಿಗೆ ತೆರಳಿದರು.ಹೈಸ್ಕೂಲು ಕನ್ನಡ ವಿಭಾಗದ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ಜಿಲ್ಲಾ ಕನ್ನಡ ಪತ್ರಕರ್ತರೂ ಬೆಂಬಲ ಸೂಚಿಸಿದರು. ಪತ್ರಕರ್ತರಾದ ಪುರುಷೋತ್ತಮ ಭಟ್, ಅಬ್ದುಲ್ ರಹ್ಮಾನ್ ಉದ್ಯಾವರ, ಹರ್ಷಾದ್ ವರ್ಕಾಡಿ, ಆರೀಫ್ ಮಚ್ಚಂಪಾಡಿ, ಸಾಯಿಭದ್ರಾ ರೈ, ಅಚ್ಯುತ್ತ ಚೇವಾರು, ವಿವೇಕ್ ಆದಿತ್ಯ, ರವಿ ಪ್ರತಾಪನಗರ, ಸ್ಟೀಫನ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.ಭ್ರಷ್ಟಾಚಾರ-ಅಪರಾಧ ನಿಯಂತ್ರಣ ಅಸೋಸಿಯೇಶನ್ ಜಿಲ್ಲಾ ಘಟಕದ ಸವಾದ್ ವಿದ್ಯಾರ್ಥಿಗಳ ನಿರಾಹಾರ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು. ಕನ್ನಡ ಬಲ್ಲೆವು ಎಂಬ ನಕಲಿ ಪ್ರಮಾಣ ಪತ್ರದ ಮೂಲಕ ಕನ್ನಡ ಭಾಷಾ ಅಲ್ಪಸಂಖ್ಯಾತ ಪ್ರದೇಶದಲ್ಲಿ ಕೆಲಸಗಿಟ್ಟಿಸಿ ಬೇಳೆ ಬೇಯಿಸಿಕೊಳ್ಳುವ ಹುನ್ನಾರ ಸಾಧುವಲ್ಲ ಎಂದು ಅವರು ತಿಳಿಸಿದರು. ಈ ಬಗ್ಗೆ ಸರಕಾರಕ್ಕೆ ವರದಿ ಮಾಡಲಾಗುವುದೆಂದು ಭರವಸೆ ನೀಡಿದರು.

Related posts

Leave a Reply