Header Ads
Breaking News

ಒಂಟಿಯಾಗಿದ್ದ ಹಿರಿ ಜೀವಕ್ಕೆ ಹೊಸಮನೆಯ ಆಸರೆ..!: ಸಮಾನ ಮನಸ್ಕರ ಸಂಘಟನೆಯಿಂದ ಹೊಸಮನೆ

ಮನೆಮಂದಿಯನ್ನೆಲ್ಲಾ ಕಳೆದುಕೊಂಡು ಒಂಟಿಯಾಗಿದ್ದ ಹಿರಿ ಜೀವ, ಶಿಥಿಲಾವಸ್ಥೆಯಲ್ಲಿದ್ದು ಮುರಿದು ಬೀಳುವ ಸ್ಥಿತಿಯಲ್ಲಿದ್ದ ಮುರುಕಲು ಮನೆ, ಹಿರಿ ಜೀವ ಬೀದಿ ಪಾಲಾಗುತ್ತೆ ಎನ್ನುವ ಪರಿಸ್ಥಿತಿ. ಇಷ್ಟೆಲ್ಲಾ ಬಡತನ ಇದ್ದ ಆ ಹಿರಿಜೀವಕ್ಕೆ ಆಸರೆಯಾಗಿದ್ದು ಸಮಾನ ಮನಸ್ಕರ ಸಂಘಟನೆ. ಅದೇನಂತೀರಾ..? ಈ ಸ್ಟೋರಿ ನೋಡಿ.

ಹೌದು.. ಇತ್ತೀಚಿಗೆ ಮನುಷ್ಯತ್ವನೇ ಮರೆಯಾಗಿದೆ. ತಾನು, ತನ್ನ ಕುಟುಂಬ ಅಂತ ಜೀವನ ಸಾಗಿಸೋರೆ ಹೆಚ್ಚು. ಆದ್ರೆ ಇಲ್ಲೊಂದು ಹಿರಿ ಜೀವಕ್ಕೆ ಸಮಾನ ವಯಸ್ಕರ ತಂಡವೊಂದು ಶ್ರಮದಾನದ ಮೂಲಕ ಮನೆ ಕಟ್ಟಿಕೊಟ್ಟು ಮಾನವೀಯತೆಯನ್ನು ಮೆರೆದಿದ್ದಾರೆ. ಒಂದು ತಿಂಗಳ ಪರಿಶ್ರಮದಲ್ಲಿ ಗುಡಸಲಿನಂತಿದ್ದ ಮನೆಯ ಜಾಗದಲ್ಲಿ ಸುಂದರವಾದ ಹೊಸ ಮನೆ ನಿರ್ಮಾಣಗೊಂಡಿದೆ. ಜೀವನವೇ ಸಾಕು ಎನಿಸಿಕೊಂಡಿದ್ದ ಆ ಹಿರಿ ಜೀವಕ್ಕೆ ಹೊಸ ಕನಸು ಮೂಡಿದ್ದು ಸಂಭ್ರಮದಿಂದ ಗ್ರಹಪ್ರವೇಶ ಮಾಡಿದ್ದಾರೆ.

ಕಲ್ಲಡ್ಕ ಸಮೀಪದ ನಿಟಿಲಪುರದ ಪಿಲಿಂಜ ಎಂಬಲ್ಲಿ ಮುರುಕಲು ಮನೆಯಲ್ಲಿ ಜೀವಿಸುತ್ತಿದ್ದ ಧರ್ಣಮಜ್ಜಿಯ ಜೀವನದಲ್ಲಿ ಮೂಡಿದ ಆಶಾಕಿರಣವಿದು. ಬಂಟ್ವಾಳ ನಗರ ಪೊಲೀಸರ ಮಾರ್ಗದರ್ಶನ, ದಾನಿಗಳ ಸಹಕಾರ ಹಾಗೂ ಕುಟುಂಬ ಎನ್ನುವ ಸಂಘಟನೆಯ ಸದಸ್ಯರ ನಿಸ್ವಾರ್ಥ ಸೇವೆಯಿಂದಾಗಿ ತನ್ನ ಪತಿ ಮಕ್ಕಳನ್ನ ಕಳೆದುಕೊಂಡಿದ್ದ ಜೀವ ಧರ್ಣಮ್ಮಜ್ಜಿಯ ಬದುಕಿಗೆ ನೆಲೆ ಸಿಕ್ಕಿದ್ದು ಅವರ ಕಣ್ಣಾಲಿಗಳ ಆನಂದಭಾಷ್ಪದಲ್ಲಿ ಕೃತಜ್ಞತಾ ಭಾವಾ ಕಾಣುತ್ತಿದೆ.

ಬಂಟ್ವಾಳ ನಗರ ಪೊಲೀಸ್ ಠಾಣೆಯ ಬೀಟ್ ಪೊಲೀಸ್ ಸಿಬ್ಬಂದಿ ನಾಗಾರಾಜ್ ಹಾಗೂ ಚೆನ್ನಪ್ಪಗೌಡ ಅವರು ಧರ್ಣಮ್ಮಜ್ಜಿಯ ಮನೆಗೆ ಬಂದಾಗ ಅವರ ಪರಿಸ್ಥಿತಿಯನ್ನು ತಿಳಿದು ಕೊಂಡು ಎಸೈ ಚಂದ್ರಶೇಖರ್ ಅವರ ಗಮನಕ್ಕೆ ತರುತ್ತಾರೆ. ಧರ್ಣಮ್ಮಜ್ಜಿ ಬದುಕಿಗೆ ಆಸರೆಯಾಗಬೇಕು ಎನ್ನುವ ಸಂಕಲ್ಪತೊಟ್ಟ ಬಂಟ್ವಾಳ ನಗರ ಪೊಲೀಸರು ಸಂಘಟನೆಯೊಂದರ ಹುಡುಕಾಟದಲ್ಲಿದ್ದಾಗ ಅವರಿಗೆ ಸಿಕಿದ್ದು ಕುಟುಂಬ ಸಂಘಟನೆ.

ಸುಮಾರು50 ಮಂದಿ ಸದಸ್ಯರಿರುವ ಸಮಾನ ಮನಸ್ಕ ಯುವಕರ ತಂಡ ಕುಟುಂಬ. ವರ್ಷಗಳ ಹಿಂದೆಯಷ್ಟೇ ನೆಟ್ಲ ಪರಿಸರದಲ್ಲಿ ಹುಟ್ಟಿಕೊಂಡ ಯುವಕರ ಈ ತಂಡ ಸ್ವಚ್ಛತೆ, ಶ್ರಮದಾನಗಳ ಮೂಲಕ ಸಾರ್ವಜನಿಕವಲಯದಲ್ಲಿ ಗಮನ ಸೆಳೆದಿತ್ತು. ಧರ್ಣಮಜ್ಜಿಗೆ ಮನೆ ನಿರ್ಮಿಸಿ ಕೊಡಬೇಕೆನ್ನುವ ಬಂಟ್ವಾಳ ಪೊಲೀಸರ ಕನಸಿಗೆ ಸಾಥ್ ನೀಡಿದವರು ಕುಟುಂಬ ಸದಸ್ಯರು. ಕಳೆದ ಮಾಚ್ ೨೩ರಂದು ಧರ್ಣಮಜ್ಜಿಯ ಮನೆ ಕಟ್ಟುವ ಕಾರ್ಯ ಆರಂಭಿಸಿದ ತಂಡದ ಸದಸ್ಯರು ರಾತ್ರಿ ಹಗಲೆನ್ನದೆ ಶ್ರಮದಾನ ನಡೆಸಿದರು. ತಾವೇ ಕಲ್ಲು ಹೊತ್ತು, ಗೋಡೆ ಕಟ್ಟಿ, ಹಂಚಿನ ಛಾವಣಿ ಹಾಕಿ, ಬಣ್ಣ ಬಳಿದು ಭರ್ತಿ ಒಂದು ತಿಂಗಳಿನಲ್ಲಿ ಸುಂದರ ಮನೆ ನಿರ್ಮಿಸಿಕೊಟ್ಟಿದಾರೆ. ಸಾಲಿಯಾನ್ ಸರ್ವಿಸಸ್ ಮಾಲೀಕ ಚಂದ್ರಶೇಖರ, ಗ್ರಾ.ಪಂ.ಸದಸ್ಯ ಗಿರೀಶ್ ಕುಲಾಲ್ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಪೊಲೀಸರ ಸಹಕಾರದೊಂದಿಗೆ ಸುಂದರ ಮನೆ ನಿರ್ಮಾಣಗೊಂಡಿದೆ. ಗಣಹೋಮ ಸಹಿತ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ ಗ್ರಹಪ್ರವೇಶ ಕಾರ್ಯ ನಡೆದಿದೆ. ಮುಂದೇನು ಎಂದು ದಿಕ್ಕು ತೋಚದೆ ಕುಳಿತ್ತಿದ್ದ ಹಿರಿ ಜೀವದ ಬದುಕಿಗೆ ಈಗ ನೆಮ್ಮದಿ ಸಿಕ್ಕಿದೆ. ಬಡವೃದ್ದೆ ಸೂರು ನಿರ್ಮಿಸಿಕೊಟ್ಟ ಸಾರ್ಥಕತೆ ಯುವಕರ ಮೊಗದಲ್ಲಿದೆ.

Related posts

Leave a Reply

Your email address will not be published. Required fields are marked *