Header Ads
Breaking News

ಕೂಳೂರು ಹಳೆಸೇತುವೆಯ ಮೂಲಕ ಸಂಚಾರ ನಿರ್ಬಂಧ: ಕಾಡುತ್ತಿದೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುವ ಭೀತಿ

 ಅಭಿವೃದ್ಧಿ ಎನ್ನುವುದು ಎಲ್ಲರಿಗೂ ಬೇಕು. ಆದರೆ ಈ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವಾಗ ವೈಜ್ಞಾನಿಕವಾಗಿ ಸ್ಥಳೀಯ ಪರಿಸ್ಥಿತಿ, ವಸ್ತುಸ್ಥಿತಿಗಳನ್ನು ತಿಳಿದುಕೊಂಡು ಅಧ್ಯಯನ ಮಾಡಿ ಯೋಜನೆಗಳನ್ನು ರೂಪಿಸಬೇಕು. ಅದಿಲ್ಲದೇ ಇದ್ದರೆ ಜನರು ಇನ್ನಿಲ್ಲದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ನಾವು ಇಷ್ಟೆಲ್ಲಾ ಹೇಳ್ತಾ ಇರೋದು ಮಂಗಳೂರಿನ ಕೂಳೂರು ಹಳೆ ಸೇತುವೆಯ ಬಗ್ಗೆ. ಯಾಕೆ ಏನು ಅಂತಾ ಕೇಳೋದಾದ್ರೆ ಈ ರಿಪೋರ್ಟ್ ನೋಡಿ.

 ಈ ದೃಶ್ಯಗಳನ್ನೊಮ್ಮೆ ನೋಡಿ. ಸಾಲುಸಾಲಾಗಿ ಬರ್ತಾ ಇರೋ ವಿವಿಧ ವಾಹನಗಳನ್ನು ನೋಡಿ. ಇದು ಮಂಗಳೂರಿನ ಕೂಳೂರು ಬಳಿ ಫಲ್ಗುಣಿ ನದಿಗೆ ನಿರ್ಮಿಸಲಾಗಿರೋ ಸೇತುವೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ ಈ ಸೇತುವೆ ಕಮಾನು ಸೇತುವೆ ಎಂದೇ ಪ್ರಸಿದ್ಧಿಯನ್ನು ಪಡೆದಿದೆ. ಇದೀಗ ಈ ಸೇತುವೆ ಶಿಥಿಲಗೊಂಡಿದ್ದು, ವಾಹನ ಸಂಚಾರ ಅಪಾಯ ಎನ್ನುವ ವರದಿಯನ್ನು ಅಧಿಕಾರಿಗಳು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಈ ಸೇತುವೆಯ ಮೂಲಕ ಘನ ವಾಹನಗಳ ಸಂಚಾರವನ್ನು ನಿಷೇಧಿಸಲು ಜಿಲ್ಲಾಧಿಕಾರಿಗಳು ಮುಂದಾಗಿದ್ದಾರೆ. ಇದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಹೌದು, ಹೊಸ ಸೇತುವೆ ನಿರ್ಮಾಣ ಶೀಘ್ರ ಆರಂಭವಾಗಲಿದ್ದು, ಅದು ಪೂರ್ಣವಾಗುವವರೆಗೆ ತಾತ್ಕಾಲಿಕವಾಗಿ ಹಳೆ ಸೇತುವೆಯಲ್ಲಿ ಘನ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಉಡುಪಿಯಿಂದ ಬೆಂಗಳೂರು ಕಡೆಗೆ ಹೋಗುವ ಮತ್ತು ಬರುವ ಬುಲೆಟ್ ಟ್ಯಾಂಕರ್‌ಗಳು ಪಡುಬಿದ್ರಿ, ಕಾರ್ಕಳ- ಗುರುವಾಯನ ಕೆರೆ- ಧರ್ಮಸ್ಥಳ ಕೊಕ್ಕಡ-ಪೆರಿಯಶಾಂತಿ ಮೂಲಕ ಸಂಚರಿಸಬೇಕಿದೆ. ಕೇರಳದಿಂದ ಉಡುಪಿ ಕಡೆಗೆ ಬರುವ ಬುಲೆಟ್ ಟ್ಯಾಂಕರ್‌ಗಳು ಕೆಪಿಟಿಯಿಂದ ಕಾವೂರು- ಬಜಪೆ- ಕಾನ- ಸುರತ್ಕಲ್ ಮೂಲಕ ಸಂಚರಿಸಲು ಸೂಚನೆ ನೀಡಲಾಗಿದೆ. ಉಡುಪಿ ಭಾಗದಿಂದ ಮಂಗಳೂರು ಕಡೆಗೆ ಹಳೆ ಸೇತುವೆಯಲ್ಲಿ ಲಾರಿ, ಬಸ್, ಟ್ಯಾಂಕರ್‌ಗಳಿಗೆ ಪ್ರವೇಶವಿಲ್ಲ. ಕೂಳೂರು ಹೊಸ ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಹಳೆ ಸೇತುವೆಯಲ್ಲಿ ಲಘು ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕಾರು, ಜೀಪು, ಟೆಂಪೊ, ಆಟೋ ರಿಕ್ಷಾ ಮತ್ತು ದ್ವಿಚಕ್ರ ವಾಹನಗಳಿಗೆ ಹಳೆಯ ಕಮಾನು ಸೇತುವೆಯ ಮೂಲಕ ದ್ವಿಮುಖ ಸಂಚರಿಸಲು ಅವಕಾಶ ನೀಡಲಾಗಿದೆ. ಇತರ ವಾಹನಗಳಿಗೆ ಸಮೀಪದ ಮತ್ತೂಂದು ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸುವುದರಿಂದ ಈ ಭಾಗದಲ್ಲಿ ಸಂಚಾರ ಸಮಸ್ಯೆ ಎದುರಾಗುವ ಸಾಧ್ಯತೆ ಅಧಿಕವಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.

 ಕೂಳೂರಿನಲ್ಲಿ ಹೊಸ ಸೇತುವೆ ನಿರ್ಮಾಣ ಅತ್ಯಗತ್ಯ. ಆದರೆ ಈ ರೀತಿ ಯಾವುದೇ ಸೂಕ್ತವಾದ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸದೇ ನೇರವಾಗಿ ಸೇತುವೆಯಲ್ಲಿ ಸಂಚಾರ ಸ್ಥಗಿತಗೊಳಿಸಿರುವುದರಿಂದ ಬಹಳಷ್ಟು ಸಮಸ್ಯೆಯಾಗಲಿದೆ. ಮುಂಬೈ-ಕೊಚ್ಚಿನ್‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯ ಸೇತುವೆ ಇಷ್ಟು ಶಿಥಿಲಗೊಳ್ಳುವವರೆಗೆ ಹೆದ್ದಾರಿ ಪ್ರಾಧಿಕಾರವು ಮೌನ ವಹಿಸಿದ್ಯಾಕೆ ಎನ್ನುವ ಪ್ರಶ್ನೆಗಳೂ ಕೇಳಿಬರತೊಡಗಿವೆ. ವರದಿ ಬಂದೇ ವರ್ಷ ಕಳೆದಿದೆ. ಆದರೂ ಯಾವುದೇ ಪರ್ಯಾಯ ವ್ಯವಸ್ಥೆಗಳನ್ನು ಮಾಡದಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಹಳೆಯ ಸೇತುವೆಯಲ್ಲಿ ಸಂಚಾರವನ್ನು ಏಕಾಏಕಿ ಸ್ಥಗಿತಗೊಳಿಸದೆ ಒಂದು ವರ್ಷದ ಮಟ್ಟಿಗೆ ಆಧುನಿಕ ವ್ಯವಸ್ಥೆಗಳ ಮೂಲಕ ಸದೃಢವಾಗಿ ಉಳಿಸಿಕೊಂಡು, ಬಳಿಕ ನೂತನ ಸೇತುವೆಯ ಕೆಲಸಕ್ಕೆ ಮುಂದಾಗಬೇಕು ಎನ್ನುವ ಆಗ್ರಹಗಳು ಕೇಳಿಬರುತ್ತಿವೆ. ಜನರ ಆಗ್ರಹವನ್ನು ಅಧಿಕಾರಿಗಳು ಕಿವಿಯ ಮೇಲೆ ಹಾಕಿಕೊಳ್ತಾರೋ ಇಲ್ವೋ ಅನ್ನೋದನ್ನ ಕಾದುನೋಡಬೇಕಿದೆ.

Related posts

Leave a Reply

Your email address will not be published. Required fields are marked *