Header Ads
Header Ads
Header Ads
Breaking News

ಮೆಡಿಕಲ್ ಸೀಟ್ ಕೊಡಿಸುವುದಾಗಿ ವಂಚನೆ: ಲಕ್ಷಾಂತರ ರೂಪಾಯಿ ಪಡೆದು ಪರಾರಿ

ಮಂಗಳೂರು: ನಗರದ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿಗಳನ್ನು ಪಡೆದು ಪರಾರಿಯಾಗುತ್ತಿದ್ದ ಬೃಹತ್ ಜಾಲವೊಂದನ್ನು ಕದ್ರಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಸುರತ್ಕಲ್ ಸಮೀಪ ವಶಕ್ಕೆ ಪಡೆದಿದ್ದಾರೆ. ಈ ಜಾಲದಲ್ಲಿ ತೊಡಗಿದ್ದ ಒಟ್ಟು ಹತ್ತು ಆರೋಪಿಗಳನ್ನು ಬಂಧಿಸಲಾಗಿದ್ದು ಸುಮಾರು 30,98,700 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.


ಬಂಧಿತರನ್ನು ಪಶ್ಚಿಮ ಬಂಗಾಲದ ಅಜಯ್ ನಾಯಕ್ ಮುಖರ್ಜಿ ಅಲಿಯಾಸ್ ಮೌರ್ಯ ಅಲಿಯಾಸ್ ಪ್ರಕಾಶ್ ಮೌರ್ಯ (41), ಲಕ್ನೋ ನಿವಾಸಿ ಸೌರಭ್ ಗುಪ್ತಾ ಅಲಿಯಾಸ್ ದಿವಾಕರ್ (32), ಗೋವಾ ನಿವಾಸಿ ಅನೂಪ್ ಸಿಂಗ್ (35), ಬಿಹಾರದ ಅಮಿತ್ ರಂಜನ್ (25), ಹೈದರಾಬಾದ್‌ನ ರಾಜೀವ್ ಕುಮಾರ್ (30), ಕೊಲ್ಕತ್ತಾ ನಿವಾಸಿಗಳಾದ ಸ್ವಪಾನ್ ಬಿಶ್ವಾಸ್ ಅಲಿಯಾಸ್ ಮಹೇಶ್ ಕುಮಾರ್ (54) ಮತ್ತು ಅನಿಲ್ ತುಲ್ಕಿರಾಮ್ ಸಂಮ್ತಾನಿ ಅಲಿಯಾಸ್ ಜಯೇಶ್ ರಂಗ್ಲಾನಿ (62) ಹಾಗೂ ಜಾರ್ಖಂಡ್ ನಿವಾಸಿಗಳಾದ ಮನೀಷ್ ಕುಮಾರ್ ಷಾ (30), ಧೀರಜ್ ಶರ್ಮ (30) ಮತ್ತು ಸಂಜಯ್ ಕುಮಾರ್ ಮಹತ್ತೂರ್ (26) ಎಂದು ಗುರುತಿಸ ಲಾಗಿದೆ.
ಘಟನೆ ವಿವರ: ಕಳೆದ ಸಪ್ಟೆಂಬರ್ 5ರಂದು ದಿಲ್ಲಿ ಮೂಲದ ಕಮಲ್ ಸಿಂಗ್ ರಾಜ್ ಪುರೋಹಿತ್ ಮತ್ತು ರಾಜಸ್ಥಾನ ಮಹೇಂದರ್ ಅವರು ಕದ್ರಿ ಠಾಣೆಗೆ ಭೇಟಿ ನೀಡಿ ತಮ್ಮ ಮಕ್ಕಳಿಗೆ ಏ.ಜೆ. ಆಸ್ಪತ್ರೆಯಲ್ಲಿ ಎಂ.ಬಿ.ಬಿ.ಎಸ್ ಸೀಟು ಕೊಡಿಸುವುದಾಗಿ ಮೋಸ ಮಾಡಲಾಗಿದೆ ಎಂದು ದೂರು ನೀಡಿದ್ದರು. ಮೆಡಿಕಲ್ ಸೀಟು ಕೊಡಿಸುವುದಾಗಿ ನಗರದ ಏಜೆ ಆಸ್ಪತ್ರೆಗೆ ಕರೆಸಿಕೊಂಡು, ಕಾಲೇಜಿನ ಪದಾಧಿಕಾರಿಗಳೆಂದು ನಕಲಿ ಗುರುತಿನ ಚೀಟಿ ತೊರಿಸಿ,5.40 ಲಕ್ಷ ರೂಪಾಯಿಗಳ ಎರಡು ಡಿಮಾಂಡ್ ಡ್ರಾಫ್ಟ್ (ಡಿ.ಡಿ)ಅನ್ನು ಇಬ್ಬರಿಂದ ಪಡೆಯಲಾಗಿದ್ದು, ಮೋಸ ಮಾಡಲಾಗಿದೆ ಎಂದು ದೂರುದಾರರು ತಮ್ಮ ದೂರಿನಲ್ಲಿ ತಿಳಿಸಿದ್ದರು.
ದೂರಿನನ್ವಯ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರ ತಂಡ ದೂರುದಾರರಿಂದ ಸಮಗ್ರ ಮಾಹಿತಿ ಪಡೆದು ಆರೋಪಿಗಳಿಗಾಗಿ ಬಲೆ ಬೀಸಿತ್ತು. ಈ ನಡುವೆ ಆರೋಪಿಗಳು ಸುರತ್ಕಲ್ ಬಳಿ ಇರುವ ಬಗ್ಗೆ ತನಿಖಾ ತಂಡಕ್ಕೆ ಖಚಿತ ಮಾಹಿತಿ ಲಭಿಸಿತ್ತು. ಈ ನಿಟ್ಟಿನಲ್ಲಿ ಸುರತ್ಕಲ್‌ಗೆ ತೆರಳಿ ವಿಚಾರಣೆ ನಡೆಸಿದ ವೇಳೆ ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿರುವುದಾಗಿ ತಿಳಿದುಬಂದಿದೆ.
ಬಂಧಿತರಿಂದ 5.40 ಲಕ್ಷ ಮೌಲ್ಯದ ಎರಡು ಡಿ.ಡಿ, 20 ಮೊಬೈಲ್ ಫೋನ್‌ಗಳು, ೨ ಲ್ಯಾಪ್‌ಟಾಪ್‌ಗಳು, ಒಂದು ಐ-ಪ್ಯಾಡ್, ಒಂದು ಪ್ರಿಂಟರ್, 10,00,700 ರೂಪಾಯಿ ನಗದು, ಒಂದು ಇನೋವಾ ಕಾರು, ಒಂದು ಶವರ್‌ಲೇ ಕಾರು, ನಕಲಿ ಗುರುತಿನ ಚೀಟಿಗಳು ಮತ್ತು ಏ.ಜೆ ಮೆಡಿಕಲ್ ಕಾಲೇಜ್ ಮತ್ತು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಮೊಹರುಗಳನ್ನು ವಶಕ್ಕೆ ಪಡೆಯಲಾಗಿದೆ.
ಮಂಗಳೂರಿನಲ್ಲೂ ಇಂತಹ ಜಾಲ ಸಕ್ರಿಯ…
ಮಂಗಳೂರು ನಗರದಲ್ಲಿ ಬಹಳಷ್ಟು ಮೆಡಿಕಲ್ ಕಾಲೇಜುಗಳು ಕಾರ್ಯ ನಿರ್ವಸುತ್ತಿವೆ. ಅದೇ ರೀತಿ ಮೆಡಿಕಲ್ ಸೀಟಿ ಕೊಡಿಸುವುದಾಗಿ ಮೋಸದ ಜಾಲಕ್ಕೆ ಬೀಳಿಸುವ ಒಂದಷ್ಟು ಜಾಲಗಳು ಕೂಡಾ ಮಂಗಳೂರಿನಲ್ಲಿ ಸಕ್ರೀಯವಾಗಿದೆ ಎನ್ನಲಾಗಿದೆ. ಬಹುತೇಕವಾಗಿ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಕೇರಳ ಪರಿಸರದಿಂದ ಮೆಡಿಕಲ್ ಸೀಟ್ ಅರಸಿಕೊಂಡು ನಗರಕ್ಕೆ ಬರುವ ವಿದ್ಯಾರ್ಥಿಗಳೇ ಇವರ ಟಾರ್ಗೆಟ್. ದಕ್ಷಿಣ ಭಾರತ ಇಂತಹ ಮೋಸದ ತಂಡದೊಂದಿಗೆ ಲಿಂಕ್ ಇಟ್ಟಿರುವ ನಗರದ ತಂಡಗಳು ಜಂಟಿಯಾಗಿ ತಮ್ಮ ಮೋಸದ ಬಲೆ ಬೀಸುತ್ತಿರುವ ಬಗ್ಗೆಯೂ ಎಲವೊಂದು ಮೂಲದಿಂದ ಮಾಹಿತಿ ಲಭ್ಯವಾಗಿದೆ.
ಆಶ್ಚರ್ಯ ಎಂದರೆ ಮಂಗಳೂರಿನ ಒಂದಷ್ಟು ಪ್ರತಿಷ್ಠಿತ ವ್ಯಕ್ತಿಗಳೂ ಕೂಡಾ ಇಂತಹ ತಂಡದೊಂದಿಗೆ ಲಿಂಕ್ ಇಟ್ಟಿರುವವರು. ಅದರಲ್ಲಿಯೂ ಮೆಡಿಕಲ್ ಕಾಲೇಜಿನ ಆಡಳಿತ ಮಂಡಳಿ ಸದಸ್ಯರೊಂದಿಗೆಯೇ ನಂಟು ಇಟ್ಟುಕೊಂಡು ಪಕ್ಕಾ ವೈಟ್‌ಕಾಲರ್‌ಗಳಾಗಿ ಸಮಾಜದಲ್ಲಿ ಗಣ್ಯವ್ಯಕ್ತಿಗಳಂತೆ ಮೆರೆಯುತ್ತಿರುವ ಒಂದಷ್ಟು ವ್ಯಕ್ತಿಗಳೂ ಇಂತಹ ದಂಧೆಯಲ್ಲಿ ತೊಡಗಿದ್ದಾರೆ ಎಂದು ಹೆಸರು ಹೆಸರು ಹೇಳಲು ಇಚ್ಚಿಸದ ಯುವ ವೈದ್ಯರೋರ್ವರು  ತಿಳಿಸಿದ್ದಾರೆ.

ಆರೋಪಿಗಳು ಮೆಡಿಕಲ್ ಸೀಟ್ ಪಡೆಯಲು ವಿದ್ಯಾರ್ಥಿಗಳು ಬರೆಯುವ ’ಎನ್‌ಇಇಟಿ’ ಪರೀಕ್ಷೆಯ ಮಾಹಿತಿಗಳನ್ನು ಆನ್‌ಲೈನ್ ಮೂಲಕ ಪಡೆಯುತ್ತಿದ್ದರು. ಈ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ಡೌನ್‌ಲೋಡ್ ಮಾಡಿ ಅದರಿಂದ ಅವರ ಫೋನ್ ನಂಬರ್, ಈಮೇಲ್ ಐಡಿ ಮತ್ತು ವಿಳಾಸ ಪಡೆಯುತ್ತಿದ್ದರು ಎನ್ನಲಾಗಿದೆ. ಈ ಮೂಲಕ ವಿದ್ಯಾರ್ಥಿಗಳ ಮೊಬೈಲ್‌ಗೆ ನಗರದ ಕಾಲೇಜುಗಳ ಹೆಸರನ್ನು ಬಳಸಿ ಸೀಟ್ ನೀಡುವುದಾಗಿ ಸಂದೇಶ ರವಾಣಿಸುತ್ತಿದ್ದರು. ಈ ಬಳಿಕ ಸೀಟ್ ಬೇಕಾಗದಲ್ಲಿ ಮತ್ತೊಂದು ಮೊಬೈಲ್‌ಗೆ ಕರೆ ಮಾಡುವಂತೆ ಸೂಚಿಸುತ್ತಿದ್ದರು. ಈ ನಡುವೆ ಕರೆ ಮಾಡಿದಾಗ ಕಾಲೇಜು ಪ್ರತಿನಿಧಿಗಳಂತೆ ಮಾತಾಡಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ತಮ್ಮ ಮೋಸದ ಜಾಲಕ್ಕೆ ಬೀಳಿಸುತ್ತಿದ್ದ ತಂಡ ನಗರದಕ್ಕೆ ಬರಲು ಸೂಚಿಸುತ್ತಿದ್ದರು ಎಂದು ತಿಳಿದುಬಂದಿದೆ.
ಇಲ್ಲಿಗೆ ಬಂದೊಡನೆ ಕಾಲೇಜುಗಳಿಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೊರಗೆ ಪೋಷಕರನ್ನು ಬೇಟಿಯಾಗಿ ನಕಲಿ ಗುರುತಿನ ಚೀಟಿ ತೋರಿಸಿ ಕಾಲೇಜಿನ ನೋಂದಾವಣಿ ಅರ್ಜಿಯನ್ನು ನೀಡಿ ಅದನ್ನು ಫಿಲ್‌ಅಪ್ ಮಾಡಿಸಿ ಹಿಂಪಡೆದು, ಲಕ್ಷಾಂತರ ಮೌಲ್ಯದ ಡಿಡಿ ಯನ್ನೂ ಪಡೆದು ಅಲ್ಲಿಂದ ಪರಾರಿಯಾಗಿತ್ತಿದ್ದರು ಎನ್ನಲಾಗಿದೆ.

Related posts

Leave a Reply