Header Ads
Header Ads
Header Ads
Breaking News

9.9 ಮತ್ತು 10 : ಉಪ್ಪಿನಂಗಡಿ ಸರ್ಕಾರಿ ಶಾಲೆಯಲ್ಲಿ ಮೈಸೂರು ವಿಭಾಗ ಮಟ್ಟದ ಯೋಗಾಸನ ಸ್ಪರ್ಧೆ

ಪುತ್ತೂರು : ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಮೈಸೂರು ವಿಭಾಗ ಮಟ್ಟದ (8 ಜಿಲ್ಲೆಗಳ) ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಬಾಲಕ ಬಾಲಕಿಯರ ಯೋಗಾಸನ ಸ್ಪರ್ಧೆ ಉಪ್ಪಿನಂಗಡಿಯ ಸರ್ಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ‘ಇಂದಿರಾ ವೆಂಕಟೇಶ್ ಭಟ್ಟ ಸಭಾಭವನ’ದಲ್ಲಿ ಅ.೯ಮತ್ತು ೧೦ರಂದು ನಡೆಯಲಿದೆ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ ಡಿ.ಎನ್ ಅವರು ತಿಳಿಸಿದರು.

ಪುತ್ತೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೈಸೂರು ವಿಭಾಗ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರತೀ ಜಿಲ್ಲೆಯ 28 ಸ್ಪರ್ಧಿಗಳಂತೆ ದಕ್ಷಿಣ ಕನ್ನಡ,ಉಡುಪಿ,ಕೊಡಗು,ಚಿಕ್ಕಮಗಳೂರು,ಹಾಸನ,ಮೈಸೂರು ,ಮಂಡ್ಯ,ಚಾಮರಾಜನಗರ ಜಿಲ್ಲೆಯ ಒಟ್ಟು 224  ಸ್ಪರ್ಧಿಗಳು ಭಾಗವಹಿಸುವರು. ಬಾಲಕ ಬಾಲಕಿಯರಿಗಾಗಿ ಪ್ರತ್ಯೇಕವಾಗಿ 14 ರ ಮತ್ತು 17 ರ ವಯೋಮಿತಿಯ ಎರಡು ವಿಭಾಗದಲ್ಲಿ ಯೋಗಾಸನ ಸ್ಪರ್ಧೆ,ಆರ್ಟಿಸ್ಟಿಕ್ ಸ್ಪರ್ಧೆ ಮತ್ತು ರಿದಮಿಕ್ ಯೋಗ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ಯೋಗಕುಮರ,ಯೋಗಕುವರಿ, ವೈಯಕ್ತಿಕ ಬಹುಮಾನ ಮತ್ತು ಚಾಂಪಿಯನ್ ಬಹುಮಾನ ನೀಡಲಾಗುವುದು ಎಂದರು.

ಯೋಗಾಸನ ಸ್ಪರ್ಧೆಗೆ ಒಟ್ಟು ರೂ.೫ಲಕ್ಷದಷ್ಟು ವೆಚ್ಚವಾಗಲಿದ್ದು, ಇಲಾಖೆಯಿಂದ ರೂ. 60 ಸಾವಿರ ಲಭಿಸುತ್ತದೆ. ಉಳಿದ ಮೊತ್ತವನ್ನು ದಾನಿಗಳಿಂದ ಕ್ರೂಢೀಕರಿಸಿ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಯೋಗ ಸಂಗಮ ಸ್ವಾಗತ ಸಮಿತಿ,ವ್ಯವಸ್ಥಾಪನಾ ಸಮಿತಿ ಹಾಗೂ ನ್ಯಾಯ ನಿರ್ಣಯ ಸಮಿತಿಯನ್ನು ರಚಿಸಲಾಗಿದೆ. ಸ್ಪರ್ಧೆಗಳು ಒಟ್ಟು 5 ವೇದಿಕೆಯಲ್ಲಿ ನಡೆಯಲಿದ್ದು, 50 ಮಂದಿ ತೀರ್ಪುಗಾರರು ಸ್ಪರ್ಧೆಯನ್ನು ನಡೆಸಿಕೊಡುವರು ಎಂದು ಅವರು ಹೇಳಿದರು.

ರಂದು ಸಂಜೆ 4 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯುವುದು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಉದ್ಘಾಟಿಸುವರು.ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸುವರು. ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ವ್ಯವಹಾರಗಳ ಸಚಿವ ಯು.ಟಿ.ಖಾದರ್‌ವಸಂತ ಬಂಗೇರ,ಕೆ.ಅಭಯಚಂದ್ರ ಜೈನ್,ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್.ಡಿ.ಸೋಜಾ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉಪಸ್ಥಿತರಿರುವರು .

ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ್, ಶಾಸಕರಾದ ಜೆ.ಆರ್.ಲೋಬೋ , ಎಸ್.ಅಂಗಾರ, ಬಿ.ಎ.ಮೊಹಿಯುದ್ದೀನ್ ಬಾವಾ,ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭವಾನಿ ಚಿದಾನಂದ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು .ಅ.10 ರಂದು ಅಪರಾಹ್ನ 2.30 ಕ್ಕೆ ಸಮಾರೋಪ ಸಮಾರಂಭ ನಡೆಯುವುದು ಎಂದು ಅವರು ತಿಳಿಸಿದರು.

ಯೋಗ ಸಂಗಮ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ, ಸಮಿತಿಯ ಖಜಾಂಜಿ ಗೋಪಾಲ ಹೆಗ್ಡೆ, ಶಾಲಾ ಎಸ್‌ಡಿ‌ಎಂಸಿ ಅಧ್ಯಕ್ಷ ಮೊಯ್ದೀನ್ ಕುಟ್ಟಿ, ಶಾಲಾ ಮುಖ್ಯ ಶಿಕ್ಷಕಿ ದೇವಕಿ.ಎಂ, ಸಿ‌ಎ‌ಆರ್‌ಪಿ ಮಹಮ್ಮದ್ ಅಶ್ರಫ್ ಮತ್ತು ದೈಹಿಕ ಶಿಕ್ಷಕಿ ವಂದನಾ ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Related posts

Leave a Reply