Header Ads
Breaking News

ದ್ವೀಪದ ತುಳು ಪ್ರೇಮಿಗಳಿಗೆ ಸಾಂಸ್ಕೃತಿಕ ಹಬ್ಬ “ತುಳು ಪರ್ಬ”

ಬಹರೈನ್ ; ದಶಮಾನೋತ್ಸವದ ಸಂಭ್ರಮದಲ್ಲಿರುವ ಇಲ್ಲಿನ “ರಾಯಲ್ ತುಳುಕೂಟ ಫೌಂಡೇಶನ್ ” ಶ್ರೀ ಕರ್ಮಾರ್ ನಾಗೇಶ್ ಶೆಟ್ಟಿ ಯವರ ಸಾರಥ್ಯದಲ್ಲಿ ಸ್ಥಳೀಯ ಇಂಡಿಯನ್ ಕ್ಲಬ್ಬಿನ ಸಹಯೋಗದೊಂದಿಗೆ ಎರಡು ದಿನಗಳ ಬೃಹತ್ ಸಾಂಸ್ಕ್ರತಿಕ ಕಾರ್ಯಕ್ರಮವ ತುಳು ಪರ್ಬವನ್ನು ಎಪ್ರಿಲ್ 11ಮತ್ತು 12ರಂದು ಹಮ್ಮಿಕೊಂಡಿದ್ದಾರೆ.

ಏಪ್ರಿಲ್ 11 ಗುರುವಾರ ಸಂಜೆ 6 ಘಂಟೆಗೆ ಹಾಗು ಏಪ್ರಿಲ್ 12 ರ ಶುಕ್ರವಾರ ಸಂಜೆ ೬ ಘಂಟೆಗೆ ಕಾರ್ಯಕ್ರಮವು ಮನಾಮದಲ್ಲಿರುವ ಇಂಡಿಯನ್ ಕ್ಲಬ್ಬಿನ ಸಭಾಂಗಣದಲ್ಲಿ ಜರುಗಲಿದ್ದು ತುಳು ನಾಡಿನ ಹೆಸರಾಂತ ಕಲಾವಿದರುಗಳು ಹಾಗು ಸಾಧಕರುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ . ತುಳು ಪರ್ಬದ ಪ್ರಥಮ ದಿನವಾದ ಏಪ್ರಿಲ್ ೧೧ರಂದು ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ದೊರಕಲಿದ್ದು ನಾಡಿನ ಸಾಧಕರಾದ ವಿದ್ಯಾರತ್ನ ಎಜುಕೇಷನಲ್ ಟ್ರಸ್ಟ್ ನ ಅಧ್ಯಕ್ಷರೂ ಹಾಗು ಕರ್ನಾಟಕ ಬಿಜೆಪಿ ರಾಜ್ಯಕಾರಿಣಿ ಯ ಸದಸ್ಯರೂ ಆಗಿರುವ ಶ್ರೀ ರವೀಂದ್ರ ಶೆಟ್ಟಿ ಉಳಿದೊಟ್ಟು ಇವರು ಮುಖ್ಯ ಅತಿಥಿಗಳ ಸ್ಥಾನವನ್ನು ಅಲಂಕರಿಸಿ ಜ್ಯೋತಿ ಬೆಳಗಿಸಿ ಚಾಲನೆ ನೀಡಲಿರುವರು .

ತುಳು ರಂಗಭೂಮಿಯ ಖ್ಯಾತ ಕಲಾವಿದ ಸುರೇಶ್ ಜೋಡುಕಲ್ಲು ಇವರ “ಭಲೇತೆಲಿಪಾಲೆ ” ಖ್ಯಾತಿಯ ಉಡಲ್ ಕಲಾವಿದರು ತಂಡ ಹಾಸ್ಯ ಪ್ರಹಸನಗಳನ್ನು ಪ್ರದರ್ಶಿಸಿ ತುಳು ಕಲಾ ಪ್ರೇಮಿಗಳನ್ನು ರಂಜಿಸಲಿದ್ದಾರೆ. ದ್ವೀಪದ ಕಲಾವಿದರುಗಳಿಗೂ ಹಾಸ್ಯ ಪ್ರಹಸನಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿರುವುದು ಮಾತ್ರವಲ್ಲದೆ ದ್ವೀಪದ ಕಲಾವಿದರುಗಳಿಂದ ವೈವಿಧ್ಯಮಯವಾದ ಮನೋರಂಜನಾ ಕಾರ್ಯಕ್ರಮಗಳು ಕೂಡ ರಂಗದಲ್ಲಿ ಮೂಡಿಬರಲಿದೆ. ತುಳು ಪರ್ಬದ ಎರಡನೇ ದಿನವಾದ ಶುಕ್ರವಾರದಂದು ದ್ವೀಪದ ತುಳು ನಾಟಕ ಪ್ರೇಮಿಗಳು ಬಹಳ ದಿನಗಳಿಂದ ಕಾಯುತ್ತಿರುವಂತಹ “ಎಡ್ದೆ೦ತಿನಾ ” ಎನ್ನುವ ವಿಭಿನ್ನ ರೀತಿಯ ಕುತೂಹಲಕಾರಿ ನಾಟಕವು ಬಹರೈನ್ ನ ಹವ್ಯಾಸಿ ಕಲಾವಿದರುಗಳಿಂದ ಪ್ರದಶನಗೊಳ್ಳಲಿದೆ. ತನ್ನ ಹೊಸ ಹೊಸ ಪ್ರಯೋಗಗಳಿಂದ ದ್ವೀಪದ ರಂಗಭೂಮಿಯಲ್ಲಿ ವಿಭಿನ್ನ ಛಾಪು ಮೂಡಿಸಿರುವ ಖ್ಯಾತ ನಾಟಕಕರ್ತ ಶ್ರೀ ಕರುಣಾಕರ್ ಪದ್ಮಶಾಲಿಯವರು ಈ ನಾಟಕವನ್ನು ರಚಿಸಿ ನಿರ್ದೇಶಿಸುತ್ತಿದ್ದರೆ , ತುಳು ನಾಡಿನ ಖ್ಯಾತ ಸಂಗೀತಗಾರ ಶ್ರೀ ಶಶಿ ಹೆಜಮಾಡಿಯವರು ಈ ನಾಟಕಕ್ಕೆ ಸಂಗೀತ ನೀಡುತ್ತಿದ್ದಾರೆ.

ವಿಶಿಷ್ಟ ರೀತಿಯ ಬೆಳಕು ,ರಂಗ ಸಜ್ಜಿಕೆ ಹಾಗು ವಿಶೇಷ ತಾಂತ್ರಿಕತೆಯೊಂದಿಗೆ ರಂಗದ ಮೇಲೆ ಪ್ರದರ್ಶನಗೊಳ್ಳಲಿರುವ ಈ ನಾಟಕವು ದ್ವೀಪದ ಕಲಾಪ್ರೇಮಿಗಳಿಗೆ ಹೊಸ ಅನುಭವ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ವಿವಿಧ ಕೊಲ್ಲಿ ದೇಶಗಳ ಗಣ್ಯರುಗಳು ತುಳು ಪರ್ಬ ಕಾರ್ಯಕ್ರಮಕ್ಕಾಗಿ ದ್ವೀಪಕ್ಕೆ ಆಗಮಿಸುತ್ತಿದ್ದು ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಪ್ರವೇಶವಿದೆ. ಎರಡು ದಿನಗಳ ಒಟ್ಟು ಕಾರ್ಯಕ್ರಮವನ್ನು ನಾಡಿನ ಖ್ಯಾತ ನಿರೂಪಕ ಸಾಹಿಲ್ ರೈ ಯವರು ನಿರೂಪಿಸಲಿದ್ದಾರೆ.
ಕಳೆದ ಮೂರು ದಶಕಗಳಿಂದ ಬಹರೈನ್ ದ್ವೀಪ ರಾಷ್ಟ್ರದಲ್ಲಿ ನೆಲೆಸಿರುವ ಶ್ರೀ ಕರ್ಮಾರ್ ನಾಗೇಶ್ ಶೆಟ್ಟಿ ಯವರು ಇಲ್ಲಿನ ಸಾಂಸ್ಕ್ರತಿಕ ಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದು , ಇದಾಗಲೇ ಅನೇಕ ಯಶಸ್ವೀ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ . ತುಳು ಭಾಷೆ ,ಕಲೆ ,ಸಂಸ್ಕ್ರತಿಯ ಮೇಲೆ ಅತೀವ ಪ್ರೀತಿಯಿರುವ ಇವರು ಇದೀಗ ತಮ್ಮ ರಾಯಲ್ ತುಳು ಕೂಟ ಫೌಂಡೇಶನ್ ನ ಆಶ್ರಯದಲ್ಲಿ ಬ್ರಹತ್ “ತುಳು ಪರ್ಬ ” ಆಯೋಜಿಸುತಿದ್ದಾರೆ . ಈ ಸಂದರ್ಭದಲ್ಲಿ ಮಾತನಾಡಿದ ಅವರು ತಮ್ಮೀ ಪ್ರಯತ್ನಕ್ಕೆ ದ್ವೀಪದ ಎಲ್ಲಾ ತುಳು ಭಾಂದವರ ಸಂಪೂರ್ಣ ಸಹಕಾರ ಬೇಕೆಂದು ಮನವಿ ಮಾಡಿಕೊಂಡರಲ್ಲದೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಶ್ರೀ ನಾಗೇಶ್ ಶೆಟ್ಟಿ ಯವರನ್ನು ದೂರವಾಣಿ ಸಂಖ್ಯೆ 33622442 ಮುಖೇನ ಸಂಪರ್ಕಿಸಬಹುದು.
ವರದಿ- ಕಮಲಾಕ್ಷ ಅಮೀನ್ 

Related posts

Leave a Reply

Your email address will not be published. Required fields are marked *