Breaking News

ಮಂಗಳೂರು: ಸೈನ್ಯಕ್ಕೆ ಜಿಲ್ಲೆಯ ಯುವಕರು ಸೇರಬೇಕು: ಡಾ. ಮೋಹನ ಆಳ್ವಾ

ಇಡೀ ವಿಶ್ವದಲ್ಲಿ ಮೂರನೇ ಅತೀ ದೊಡ್ಡ ಸೇನೆ ಇರುವುದು ಭಾರತದಲ್ಲಿ. ಬುದ್ಧಿವಂತರ ಜಿಲ್ಲೆ ಎನಿಸಿಕೊಂಡ ದ.ಕ.ದಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡುವ ನಿಟ್ಟಿನಲ್ಲಿ ಜಾಗೃತಿ ನಡೆಯಬೇಕಿದೆ ಎಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಮೋಹನ ಆಳ್ವ ಹೇಳಿದರು.ಬಂಟರ ಯಾನೆ ನಾಡವರ ಮಾತೃ ಸಂಘ, ಬಂಟ್ಸ್ ಹಾಸ್ಟೆಲ್ ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ನಡೆದ ‘ರಾಷ್ಟ್ರ ರಕ್ಷಕರೊಂದಿಗೆ ಒಂದು ಸುಂದರ ಸಂಜೆ’ ಕಾರ‍್ಯಕ್ರಮವನ್ನು ಅವರು ಶನಿವಾರ ಉದ್ಘಾಟಿಸಿದರು.
ಭಾರತೀಯತೆಗಾಗಿ ಮಿಡಿಯುವ ಮನಸ್ಸು ನಮ್ಮದಾಗಬೇಕು. ಈ ದೇಶ, ಮಣ್ಣಿನ ಬಗ್ಗೆ ಗೌರವ ಹೊಂದಿರಬೇಕು. ಜಿಲ್ಲೆಯಿಂದ ಸೈನ್ಯಕ್ಕೆ ಸೇರುವವರ ಸಂಖ್ಯೆ ಕಡಿಮೆ ಸಂಖ್ಯೆಯಲ್ಲಿದ್ದು, ದೇಶ ರಕ್ಷಣೆ ನಿಟ್ಟಿನಲ್ಲಿ ಜಾಗೃತಿ ಕಾರ‍್ಯಗಳು ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ಸೈನಿಕರಿಗೆ ಅವಮಾನ ಸಲ್ಲದು ಸೈನಿಕರು ತಮ್ಮನ್ನು ಗೌರವಿಸಿ ಎಂದು ಯಾವತ್ತೂ ಕೇಳುವುದಿಲ್ಲ. ಆದರೆ ಅವರನ್ನು ಅವಮಾನ ಮಾಡುವ ಮನಃಸ್ಥಿತಿಯನ್ನು ಯಾರೂ ಬೆಳೆಸಿಕೊಳ್ಳಬಾರದು. ಭಾರತೀಯತೆ ಮತ್ತು ದೇಶ ರಕ್ಷಕರಿಗಾಗಿ ಮಿಡಿಯುವ ಮನಸ್ಸು ನಮ್ಮದಾಗಬೇಕು ಎಂದು ಡಾ|ಆಳ್ವ ಅವರು ಇದೇ ವೇಳೆ ಹೇಳಿದರು.
ಸುಮಾರು ೧೧ಕ್ಕೂ ಹೆಚ್ಚು ಮಂದಿ ಹಿರಿಯ ಯೋಧರನ್ನು ಈ ವೇಳೆ ಸಮ್ಮಾನಿಸಲಾಯಿತು. ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ, ಲೆ|ಕಮಾಂಡರ್ ಜಿ.ಪಿ. ಮಸ್ಕರೇನಸ್, ಬ್ರಿಗೇಡಿಯರ್ ಐ.ಎನ್. ರೈ ಅವರು ಸಮ್ಮಾನಿತರ ಪರವಾಗಿ
ಮಾತನಾಡಿದರು.
ಭಾರತೀಯತೆಯೇ ಸೈನಿಕರ ಧರ್ಮ
ಅಭಿನಂದನ ಭಾಷಣ ಮಾಡಿದ ವಾಗ್ಮಿ ನಿಕೇತ್‌ರಾಜ್ , ಅಧಿಕಾರ, ಹೆಸರಿಗಾಗಿ ನಾ ಮುಂದು ತಾ ಮುಂದು ಎಂದು ಹಲವರು ಬರುತ್ತಾರೆ. ಆದರೆ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಲು ನಾ ಮುಂದು ಎಂದು ಹೆಮ್ಮೆಯಿಂದ ಮುಂದೆ ಬರುವವರು ಈ ದೇಶದ ಸೈನಿಕರು ಮಾತ್ರ ಎಂದರು. ಸೈನಿಕರಿಗೆ ಇರುವುದೊಂದೇ ಧರ್ಮ; ಅದು ಭಾರತೀಯತೆ. ಅವರಿಗಿರುವ ಒಂದೇ ಕರ್ಮ ರಾಷ್ಟ್ರ ರಕ್ಷಣೆ. ಇಂತಹ ಸೈನಿಕರ ಆತ್ಮವಿಶ್ವಾಸ ಕುಗ್ಗಿಸದೇ ಇಡೀ ದೇಶ ಅವರೊಂದಿಗಿದೆ ಎಂದು ತೋರಿಸಿಕೊಡಬೇಕಾಗಿದೆ ಎಂದು ನಿಕೇತ್‌ರಾಜ್ ಹೇಳಿದರು
ಶಾಸಕ ಮೊದಿನ್ ಬಾವಾ, ಸಂಘದ ಕಾರ‍್ಯದರ್ಶಿ ಮೇಘನಾಥ ಶೆಟ್ಟಿ, ಉಪಾಧ್ಯಕ್ಷ ಕೆಂಚನೂರು ಸೋಮಶೇಖರ್ ಶೆಟ್ಟಿ, ಖಜಾಂಚಿ ಮನ ಮೋಹನ್ ಶೆಟ್ಟಿ, ಜತೆ ಕಾರ್ಯದರ್ಶಿ ಕಾವು ಹೇಮನಾಥ್ ಶೆಟ್ಟಿ, ಟ್ರಸ್ಟಿಗಳಾದ ಶೆಡ್ಡೆ ಮಂಜುನಾಥ ಭಂಡಾರಿ, ಕೆ.ಪಿ. ರೈ, ಬಾಲಕೃಷ್ಣ ಶೆಟ್ಟಿ, ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಡಾ| ಆಶಾಜ್ಯೋತಿ ರೈ, ತಾಲೂಕು ಸಮಿತಿ ಸಂಚಾಲಕ ಜಯರಾಮ ಸಾಂತ, ಸಹ ಸಂಚಾಲಕ ಉಮೇಶ್ ರೈ, ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ಉಪಸ್ಥಿತರಿದ್ದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್‌ಕುಮಾರ್ ರೈ ಪ್ರಸ್ತಾವನೆಗೈದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಾಂತಾರಾಮ್ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ‍್ಯದರ್ಶಿ ದಿವಾಕರ ಸಾಮಾನಿ ವಂದಿಸಿದರು. ಬಿ. ಶೇಖರ ಶೆಟ್ಟಿ, ಸುಕೇಶ್ ಚೌಟ, ಪುರುಷೋತ್ತಮ ಭಂಡಾರಿ ಅವರು ಕಾರ್ಯಕ್ರಮ ನಿರೂಪಿಸಿದರು.
ವರದಿ: ಆರ್.ಎ.ಲೋಹಾನಿ, ಮಂಗಳೂರು

Related posts

Leave a Reply