Breaking News

ಮಂಗಳೂರು: ಯೋಗ್ಯ ಕ್ಷೇತ್ರದ ಹುಡುಕಾಟದಲ್ಲಿದ್ದರಾ ಉಡುಪಿ ಮಾಜಿ ಸಚಿವ ?

ಮಾಜಿ ಸಚಿವ ವಿನಯಕುಮಾರ್ ಸೊರಕೆ ಹಾಲಿ ಶಾಸಕರಾಗಿ ಮುಂದಿನ ಅವಧಿಯಲ್ಲೂ ಮುಂದುವರಿಯಲು ಬಯಸಿದ್ದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಾನು ಸ್ಪರ್ಧಿಸುವ ಯೋಗ್ಯ ಕ್ಷೇತ್ರದ ಹುಡುಕಾಟದಲ್ಲಿ ಇದ್ದಾರೆ ಎಂಬ ವರದಿಗಳು ಅವರದೇ ಆಪ್ತವಲಯದಿಂದ ಬರುತ್ತಿವೆ. ಯಾಕಾಗಿರಬಹುದು? ಮುಂದಿ ಓದಿ.
ಮೂಲತಃ ಪುತ್ತೂರಿನವರಾದ ವಿನಯಕುಮಾರ್ ಸೊರಕೆ ಮೊದಲ ಬಾರಿಗೆ ಶಾಸಕರಾಗಿದ್ದು ಕೂಡ ತನ್ನ ತವರು ಕ್ಷೇತ್ರದಿಂದಲೇ. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಆಕಸ್ಮಿಕ ಎಂಬಂತೆ ಉಡುಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ವಿಜಯಿ ಆದರು. ಸಂಸದರಾಗಿ ಹೆಸರು ಕೂಡ ಮಾಡಿದರು. ಬಳಿಕ ತವರು ಜಿಲ್ಲೆ ಮರಳಲು ಬಯಸಿ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಬಯಸಿ ಹಿರಿಯ ನಾಯಕ ಜನಾರ್ದನ ಪೂಜಾರಿಯವರೊಂದಿಗೆ ಜಿದ್ದಿಗೆ ಬಿದ್ದರು. ಆದರೆ ಉಡುಪಿಯ ನಂಟು ಅವರನ್ನು ಮತ್ತೊಮ್ಮೆ ಕರೆಯಿತು. ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ವಿಜಯಿಯಾದರು. ಸಚಿವ ಕೂಡ ಆದರು. ಈಗ ಸಚಿವ ಪಟ್ಟ ಇಲ್ಲ. ಶಾಸಕರಾಗಿ ಕಾಪು ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯುತ್ತಿರುವಂತೆ ಕಾಣಿಸುತ್ತಿದೆ. ಆದರೂ ಅವರಿಗೆ ಇಲ್ಲಿ ಸಮಾಧಾನ ಇದ್ದಂತಿಲ್ಲ. ಅವರೀಗ ಬೇರೆಯದೇ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ.
ಜಯಪ್ರಕಾಶ್ ಹೆಗ್ಡೆ ಮತ್ತು ಸುರೇಶ್ ಶೆಟ್ಟಿ ಗುರ್ಮೆ ಕಾಂಗ್ರೆಸ್‌ನಲ್ಲಿ ಇದ್ದಾಗಿನ ವಾತಾವರಣ ಕಾಣಲು ಈಗ ಸಾಧ್ಯವಿಲ್ಲ. ಈ ಇಬ್ಬರೂ ನಾಯಕರು ಈಗ ಬಿಜೆಪಿ ಮರಳಿದ್ದಾರೆ. ಈ ಹಿಂದಿನಂತೆ ಕಾಪು ಕ್ಷೇತ್ರದಲ್ಲಿ ಬಂಟರ ಮನಗೆದ್ದು ವಿಜಯಿಯಾಗಲು ಸಾಧ್ಯವಿಲ್ಲ ಎಂಬ ಸತ್ಯದ ಅರಿವು ವಿನಯಕುಮಾರ್ ಸೊರಕೆಯವರಿಗೆ ಆಗಿದೆ. ಆದುದರಿಂದಲೇ ಬಿಲ್ಲವ ಪ್ರಭಾವಿತ ಮುಲ್ಕಿ-ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದತ್ತ ಸೊರಕೆಯ ಕಣ್ಣು ಹರಿಯುತ್ತಿದೆ ಎಂದು ಹೇಳಲಾಗುತ್ತಿದೆ. ಬಿಲ್ಲವ ನಾಯಕ ಸೋಮಪ್ಪ ಸುವರ್ಣ ಗೆದ್ದ ಕ್ಷೇತ್ರವಿದು. ಅಭಯಚಂದ್ರರು ಚುನಾವಣಾ ರಾಜಕೀಯದಿಂದ ದೂರ ಸರಿಯುವ ಇಂಗಿತ ವ್ಯಕ್ತಪಡಿಸಿದ್ದು, ತನಗೆ ಪೂರಕವಾಗಬಹುದು ಎಂಬ ಲೆಕ್ಕಾಚಾರ ಅವರಲ್ಲಿದ್ದಂತೆ ತೋರುತ್ತಿದೆ. ಇದಲ್ಲದೆ ತವರು ಕ್ಷೇತ್ರದತ್ತಲೂ ಒಂದು ಕಣ್ಣು ಇದ್ದೇ ಇದೆ. ಆದರೆ ಪುತ್ತೂರು ಕಾಂಗ್ರೆಸ್‌ನಲ್ಲಿ ಒಳರಾಜಕೀಯದ ಬಗ್ಗೆ ಆತಂಕಿತರಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿ ಸಿಕ್ಕಿದ್ದಾದರೆ ಶಕುಂತಳಾ ಶೆಟ್ಟರನ್ನು ಬದಿಗೆ ತಳ್ಳುವ ಸಾಧ್ಯತೆಯ ಮಾತುಗಳು ಕಾಂಗ್ರೆಸ್‌ನ ಪ್ರಭಾವಿ ವಲಯದಿಂದಲೇ ಕೇಳಿ ಬರುತ್ತಿವೆ. ವಿನಯಕುಮಾರ ಸೊರಕೆಗಿಂತ ಸೂಕ್ತರು ಅಲ್ಲೀಗ ಕಾಣುತ್ತಿಲ್ಲ. ಆದರೆ ಸೊರಕೆಯ ಕಣ್ಣು ಬೇರೆಯದನ್ನೇ ಹುಡುಕುತ್ತಿರುವಂತಿದೆ. ಅವರ ದೃಷ್ಟಿ ಬೆಳ್ತಂಗಡಿ ಕ್ಷೇತ್ರದ ಮೇಲೂ ಇದ್ದಂತಿದೆ. ವಸಂತ ಬಂಗೇರರು ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿರುವುದು ಸೊರಕೆ ಅತ್ತ ಸಾಗುವುದಕ್ಕೆ ಅವಕಾಶ ಮಾಡಕೊಟ್ಟಂತಿದೆ.
ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರರಂತಹವರೇ ಕ್ಷೇತ್ರ ಬದಲಾವಣೆಗೆಯ ಬಗ್ಗೆ ಚಿಂತಿಸುತ್ತಿದ್ದಾರೆ. ಸೊರಕೆ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ.

Related posts

Leave a Reply