Header Ads
Breaking News

ಹಿರಿಯ ಪತ್ರಕರ್ತ, ಬರಹಗಾರ ರವಿ ಬೆಳಗೆರೆ ನಿಧನ

ಹಿರಿಯ ಪತ್ರಕರ್ತ, ಹೆಸರಾಂತ ಬರಹಗಾರ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ತೀವ್ರ ಹೃದಯಾಘಾತದಿಂದ ಅಸುನೀಗಿದ್ದು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ನಿನ್ನೆ ರಾತ್ರಿ 12.30 ರ ಹೊತ್ತಿಗೆ ಹಾಯ್ ಬೆಂಗಳೂರು ಕಚೇರಿಯಲ್ಲಿರುವಾಗಲೇ ರವಿ ಬೆಳಗೆರೆಯವರಿಗೆ ಹೃದಯಾಘಾತ ಆಗಿತ್ತು. ತಕ್ಷಣ ಅವರನ್ನು ಅಪೊಲೋ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ವೈದ್ಯರು ಪರಿಶೀಲಿಸಿದಾಗ ಅಷ್ಟೊತ್ತಿಗೆ ಬೆಳಗೆರೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ರವಿ ಬೆಳಗೆರೆ ಅವರಿಗೆ62 ವರ್ಷ ವಯಸ್ಸಾಗಿತ್ತು. ರವಿ ಬೆಳಗೆರೆ ನಿಧನಕ್ಕೆ ಕುಟುಂಬ ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ರವಿ ಬೆಳಗೆರೆ ಹುಟ್ಟಿದ್ದು 15 ಮಾರ್ಚ್ 1958 ಬಳ್ಳಾರಿಯಲ್ಲಿ. ಶಾಲಾಶಿಕ್ಷಣ ಬಳ್ಳಾರಿಯಲ್ಲಿ ಮುಗಿಸಿದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. ನಂತರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.ರವಿ ಬೆಳಗೆರೆ ಕನ್ನಡದ ಪ್ರಸಿದ್ಧ ಪತ್ರಕರ್ತರು. ಹಾಯ್ ಬೆಂಗಳೂರ್ ಎಂಬ ವಾರಪತ್ರಿಕೆ ಹಾಗೂ ’ಓ.. ಮನಸೇ’ ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿದ್ದವರು. ಜೊತೆಗೆ ಕನ್ನಡ ಸಾಹಿತಿ, ಚಿತ್ರಕಥೆ ಬರಹಗಾರ, ಜನಪ್ರಿಯ ಕ್ರೈಂ ಡೈರಿ ಕಾರ್ಯಕ್ರಮದ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ಮತ್ತು ಭಾಷಾಂತರಿಸಿರುವ ರವಿ ಬೆಳಗೆರೆ, ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು ಪ್ರಾರ್ಥನಾ ಶಾಲೆಯ ಸಂಸ್ಥಾಪಕರು. ರವಿ ಬೆಳಗೆರೆ ’ಹಾಯ್ ಬೆಂಗಳೂರ್’ ಪತ್ರಿಕೆ ಪ್ರಾರಂಭಿಸುವ ಮುನ್ನ ಕರ್ಮವೀರ, ಸಂಯುಕ್ತ ಕರ್ನಾಟಕ ಮತ್ತು ಕಸ್ತೂರಿ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು.

Related posts

Leave a Reply

Your email address will not be published. Required fields are marked *