Header Ads
Breaking News

ಅಪಾಯಕಾರಿ ಮನೆಯಲ್ಲಿ ಬಡಪಾಯಿ ಜೀವಗಳ ವಾಸ : ದಾನಿಗಳ ನಿರೀಕ್ಷೆಯಲ್ಲಿ ಕುಟುಂಬ

ಬಂಟ್ವಾಳ: ಕುಸಿಯುವ ಹಂತದಲ್ಲಿರುವ ಛಾವಣಿ.. ಬಿರುಕು ಬಿಟ್ಟ ಮಣ್ಣಿನ ಗೋಡೆಗಳು.. ಟರ್ಪಾಲು ಸುತ್ತಿಕೊಂಡಿರುವ ಶೌಚಾಗೃಹ… ಇಂತಹ ಅಪಾಯಕಾರಿ ಮನೆಯಲ್ಲಿ 5 ಬಡಪಾಯಿ ಜೀವಗಳ ವಾಸ… ಮಳೆಗಾಲದಲ್ಲಂತೂ ನಿತ್ಯ ಜಾಗರಣೆ.. ಯಾವ ಕ್ಷಣದಲ್ಲಿ ಮನೆ ಕುಸಿದು ಬೀಳುತ್ತದೋ ಎನ್ನುವ ಆತಂಕ. ಇದು ಬಂಟ್ವಾಳದ ಕಳ್ಳಿಗೆ ಗ್ರಾಮದ ಜಾರಂದಗುಡ್ಡೆಯ ನಾಗಮ್ಮ ಪೂಜಾರ್ತಿ ಎನ್ನುವವರ ಮನೆಯ ದುಸ್ಥಿತಿಯಿದು… ಈ ಬಗ್ಗೆ ವಿಶೇಷ ವರದಿ ಇಲ್ಲಿದೆ ನೋಡಿ….
ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಜಾರಂದಗುಡ್ಡೆಯಲ್ಲಿ ಜೀರ್ಣಾವಸ್ಥೆಗೆ ತಲುಪಿರುವ ನಾಗಮ್ಮ ಪೂಜಾರ್ತಿ ಎನ್ನುವವರ ಮನೆಯ ದುಸ್ಥಿತಿಯಿದು. ಮನೆಗೆ ಆಧಾರ ಸ್ಥಂಭವಾಗಬೇಕಿದ್ದ ಮಗನಿಗೆ ಕುಟುಂಬದ ಜವಬ್ದಾರಿಯಿಲ್ಲ. ಸೊಸೆ ಬೀಡಿ ಕಟ್ಟಿ ಬರುವ ಆದಾಯ ಮನೆಯ ನಿತ್ಯ ಖರ್ಚಿಗೆ ಸಾಲುತ್ತಿಲ್ಲ. ಇಬ್ಬರು ಮಕ್ಕಳ ವಿದ್ಯಾಭ್ಯಾಸದೊಂದಿಗೆ ಕುಟುಂಬ ನಿಭಾಯಿಸುವುದೇ ಕಷ್ಟವಾಗಿರುವಾಗ ಮನೆ ದುರಸ್ತಿ ಮಾಡುವುದಾದರೂ ಹೇಗೆ? ಎನ್ನುವ ಚಿಂತೆಯಲ್ಲಿಯೇ ಕಳೆದ ಹಲವಾರು ವರ್ಷಗಳಿಂದ ಈ ಬಿರುಕು ಬಿಟ್ಟ ಅಪಾಯಕಾರಿ ಮನೆಯಲ್ಲಿ ಈ ಬಡ ಕುಟುಂಬ ದಿನ ಕಳೆಯುತ್ತಿದೆ.
ಮಳೆಗಾಲದಲ್ಲಿ ನೀರು ಸೋರುವ ಹೆಂಚಿನ ಛಾವಣಿಯನ್ನಾದರೂ ದುರಸ್ತಿ ಪಡಿಸೋಣ ವೆಂದರೆ ಗೆದ್ದಲು ಹಿಡಿದು ಮುರಿದು ಬೀಳುವ ಸ್ಥಿತಿಯಲ್ಲಿರುವ ಛಾವಣಿಯನ್ನು ಮುಟ್ಟುವುದೇ ಅಪಾಯ. ಶೌಚಾಲಯದ ಒಂದು ಪಾಶ್ರ್ವದ ಗೋಡೆ ಈ ಹಿಂದೆಯೇ ಕುಸಿದು ಬಿದ್ದಿದೆ. ಮೊನ್ನೆಯ ಮಳೆಗೆ ಇನ್ನೊಂದು ಪಾಶ್ರ್ವದ ಗೋಡೆ ವಾಲಿ ನಿಂತಿದೆ. ಸದ್ಯಕ್ಕೆ ಟರ್ಪಾಲು ಸುತ್ತಿ ತಾತ್ಕಲಿಕ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಂಡಿದ್ದಾರೆ. ಬಿರುಕು ಬಿಟ್ಟ ಗೋಡೆಗಳು ಧರಶಾಹಿಯಾಗಲು ಕ್ಷಣಗಣನೆಯಲ್ಲಿದೆ. ಮುಂದಿನ ಮಳೆಗಾಲದಲ್ಲಿ ಈ ಮನೆಯಲ್ಲಿ ಜೀವಿಸುವುದು ಸೆರಗಲ್ಲಿ ಬೆಂಕಿ ಕಟ್ಟಿಕೊಂಡಷ್ಟೇ ಅಪಾಯ. ಆದರೆ ಈ ಬಡ ಕುಟುಂಬಕ್ಕೆ ಈ ಮನೆ ಬಿಟ್ಟು ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳುವಷ್ಟು, ಪ್ರತ್ಯೇಕ ಮನೆ ನಿರ್ಮಿಸುವಷ್ಠು ಸ್ಥಿತಿವಂತರಾಗಿಲ್ಲದೇ ಇರುವುದರಿಂದ ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.


ಬೇಕಿದೆ ದಾನಿಗಳ ಸಹಾಯಹಸ್ತ:
47 ವರ್ಷಗಳ ಹಿಂದೆ ನಾಗಮ್ಮ ಅವರು ಬ್ರಹ್ಮರಕೂಟ್ಲು ಬಳಿ ವಾಸವಾಗಿದ್ದರು. 1974ರಲ್ಲಿ ಬಂದ ಭಿಕರ ನೆರೆಯ ಸಂದರ್ಭ ಜಾರಂದಗುಡ್ಡೆ ಬಳಿ ಮನೆ ನಿರ್ಮಿಸಲು ಸರಕಾರ ಇವರಿಗೆ ನಿವೇಶನ ಒದಗಿಸಿತ್ತು. ತೆಂಗಿನ ಮಡಲಿನ ತಟ್ಟಿಯ ಜೋಪಡಿ ನಿರ್ಮಿಸಿ ಜೀವನ ಆರಂಭಿಸಿದ್ದ ಇವರು ಬಳಿಕ ಹಂತ ಹಂತವಾಗಿ ಮಣ್ಣಿನ ಗೋಡೆಯನ್ನು ಕಟ್ಟಿ ಈಗಿರುವ ಮನೆಯನ್ನು ನಿರ್ಮಿಸಿದ್ದಾರೆ. ಬಡತನದಿಂದಾಗಿ ಮನೆಯನ್ನು ಕಾಲಕಾಲಕ್ಕೆ ದುರಸ್ತಿ ಪಡಿಸಲು ಸಾಧ್ಯವಾಗದ ಪರಿಣಾಮ ಈಗ ಕುಸಿಯುವ ಹಂತಕ್ಕೆ ಬಂದಿದೆ. ಪ್ರತ್ಯೇಕ ಮನೆ ನಿರ್ಮಾಣಗೊಳ್ಳದೇ ಇದ್ದರೆ ಮುಂದಿನ ಮಳೆಗಾಲದ ವೇಳೆಗೆ ಈ ಕುಟುಂಬ ಬೀದಿಪಾಲಾಗುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಸಣ್ಣದಾದ ಮನೆಯನ್ನು ನಿರ್ಮಿಸುವ ಕನಸು ಹೊತ್ತಿರುವ ನಾಗಮ್ಮ ಅವರ ಕುಟುಂಬ ಮನೆ ನಿರ್ಮಿಸಲು ದಾನಿಗಳ, ಸಂಘ ಸಂಸ್ಥೆಗಳ ನೆರವು ಯಾಚಿಸಿದೆ. ಆರ್ಥಿಕ ನೆರವು ನೀಡುವವರು ಅವರ ಸೊಸೆ ಜಯಂತಿ ಅವರ ಬ್ಯಾಂಕ್ ಖಾತೆ ಗೂಗಲ್ ಪೇ ಗೆ ಜಮಾ ಮಾಡಬಹುದು, ವಸ್ತು ರೂಪದಲ್ಲಿ ನೆರವು ನೀಡುವವರು ಅವರ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಬ್ಯಾಂಕ್ ಖಾತೆ ವಿವರ: ಜಯಂತಿ, ಬ್ಯಾಂಕ್ ಆಫ್ ಬರೋಡ, ತುಂಬೆ ಶಾಖೆ, ಖಾತೆ ಸಂಖ್ಯೆ 83720100001712, ದೂರವಾಣಿ ಅಥವಾ ಗೂಗಲ್ ಪೇ: 9535538870 ಮೂಲಕ ಇವರಿಗೆ ಸಹಾಯವನ್ನು ಮಾಡಬಹುದು

Related posts

Leave a Reply

Your email address will not be published. Required fields are marked *