Breaking News

ಈಜು ಕೊಳವಾದ ಉದ್ಯಾವರ ರಾಷ್ಟ್ರೀಯ ಹೆದ್ದಾರಿ: ತಾಸುಗಳ ತನಕ ಸಂಚಾರದಲ್ಲಿ ವ್ಯತ್ಯಯ: ಸ್ಥಳೀಯರಿಂದ ಕಾರ್ಯಾಚರಣೆ

ಮಂಜೇಶ್ವರ : ಬಾನುವಾರ ಸಂಜೆ ಹೊತ್ತಿಗೆ ಸುರಿದ ಧಾರಾಕಾರ ಮಳೆಯಿಂದಾಗಿ ಉದ್ಯಾವರ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವೆಡೆ ನೀರು ಹೆದ್ದಾರಿಯಲ್ಲಿಯೇ ಕಟ್ಟಿ ನಿಂತು ತಾಸುಗಳ ತನಕ ಸಂಚಾರದಲ್ಲಿ ವ್ಯತ್ಯಯ ಕಂಡು ಬಂತು.ಉದ್ಯಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಣಗುಂಡಿಯೊಂದು ಸೃಷ್ಟಿಯಾಗಿದ್ದು, ಇದು ಹಲವು ಅಪಘಾತಗಳಿಗೆ ಕಾರಣವಾಗುತಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿಯ ಸ್ಥಳೀಯರು ಸೇರಿ ಗುಂಡಿ ಇರುವುದಕ್ಕೆ ಸೂಚಕವಾಗಿ ಆ ಭಾಗಕ್ಕೆ ಕೆಲವೊಂದು ಕಲ್ಲುಗಳನ್ನು ಇಟ್ಟಿದ್ದರು. ಆದರೆ ಬಾನುವಾರದಂದು ಸುರಿದ ಮಳೆಯಿಂದಾಗಿ ಗುಂಡಿ ಯಾವುದು ರಸ್ತೆ ಯಾವುದೆಂದು ತಿಳಿಯದೆ ರಾತ್ರಿ ತನಕ ವಾಹನಗಳು ಗುಂಡಿಗೆ ಬೀಳುತ್ತಿರುವ ದೃಶ್ಯವನ್ನು ಕಂಡು ಸ್ಥಳೀಯರು ಬಳಿಕ ಮಳೆಯನ್ನು ಲೆಕ್ಕಿಸದೇ ರಸ್ತೆಗೆ ಇಳಿದು ವಾಹನಗಳಿಗೆ ಸೂಚನೆಯನ್ನು ನೀಡಿ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು. ಕಳೆದ ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ಲೋಕೋಪಯೋಗಿ ಇಲಾಖೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆಯನ್ನು ಕಲ್ಪಿಸದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಣಗುಂಡಿಗಳು ಸೃಷ್ಟಿಯಾಗಿವೆ. ಅದೇ ರೀತಿ ಉದ್ಯಾವರ ರಫಾ ಹಾಲ್ ನ ಮುಂಬಾಗದಲ್ಲೂ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ನೀರು ರಫಾ ಹಾಲ್ ನ ಒಳಭಾಗಕ್ಕೆ ನುಗ್ಗಿದೆ. ಜತೆಯಾಗಿ ಇಲ್ಲಿಂದ ಸಾಗುವ ರಸ್ತೆಯಲ್ಲೂ ಸೊಂಟ ತನಕ ನೀರು ತುಂಬಿ ಕೊಂಡು ಜನರು ಪರದಾಡುತ್ತಿರುವ ದೃಶ್ಯ ಕಂಡು ಬಂತು. ಅದೇ ರೀತಿ  ಕಾಂಕ್ರಿಟೀಕರಣವಾದ ಉದ್ಯಾವರ 10 ನೇ ಮೈಲು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಮಸೀದಿ ರಸ್ತೆಯಲ್ಲೂ ನೀರು ಕಟ್ಟಿ ನಿಂತು ಧ್ವಿಚಕ್ರ ವಾಹನಗಳು ನೀರಲ್ಲಿ ಮುಳುಗುತ್ತಿರುವ ದೃಶ್ಯ ಕಂಡು ಬಂದಿದೆ. ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಆಲಸ್ಯದಿಂದ ಈ ರೀತಿ ಸಂಭವಿಸುತ್ತಿರುವುದಾಗಿ ಜನರು ಆಡಿ ಕೊಳ್ಳುತಿದ್ದಾರೆ.

Related posts

Leave a Reply