ಕಾರ್ಕಳ ಪುರಸಭೆಯ ತಾಜ್ಯ ವಿಲೇವಾರಿ ಘಟಕದಲ್ಲಿ ಸುಮಾರು ಹತ್ತು ದಿನಗಳ ಹಿಂದೆ ಬೆಂಕಿ ತಗುಲಿ ಸುಮಾರು 20 ವರ್ಷಗಳಿಂದ ಶೇಖರಣೆಯಾಗಿದ್ದ ಪ್ಲಾಸ್ಟಿಕ್ ತ್ಯಾಜ್ಯ ಸುಟ್ಟು ಸುತ್ತಮುತ್ತಲ ಪ್ರದೇಶದಲ್ಲಿ ದಟ್ಟ ಹೊಗೆಯ ವಾತಾವರಣ ಉಂಟಾಗಿತ್ತು. ಇದರಿಂದಾಗಿ ಇಲ್ಲಿಯ ನಿವಾಸಿಗಳಿಗೆ ಹೊಗೆಯಿಂದ ಉಸಿರಾಟದ ತೊಂದರೆ ಹಾಗೂ ವಿಪರೀತ ಸೆಖೆಯ ಸಮಸ್ಯೆ ಉಂಟಾಗಿತ್ತು. ತಕ್ಷಣ ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ ಶೆಟ್ಟಿ ಅವರು ಅಗ್ನಿಶಾಮಕ ದಳದವರನ್ನು ಸಂಪರ್ಕಿಸಿ ಸತತವಾಗಿ ಹತ್ತು ದಿನಗಳಿಂದ ಉರಿಯುತ್ತಿರುವ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಇನ್ನು ಕೆಲವು ಕಡೆ ಹೊಗೆ ಕಂಡುಬರುತ್ತಿದ್ದು ಅದರ ಮೇಲೆ ಹಸಿ ಮಣ್ಣನ್ನು ಹಾಕಿ ನಂದಿಸುವ ಕಾರ್ಯ ಮುಂದುವರಿದಿದೆ ಎಂದು ಮುಖ್ಯಾಧಿಕಾರಿಯವರು ತಿಳಿಸಿದರು.