Header Ads
Header Ads
Header Ads
Header Ads
Header Ads
Header Ads
Breaking News

ಕಾಲುಸಂಕದ ಮೇಲೆ ಜೀವಭಯದ ಸಂಚಾರ..!ಏಕಾಏಕಿ ಕಾಲುಸಂಕ ದಾಟಿದರೆ ನದಿಯ ಪಾಲಾಗೋದು ಪಕ್ಕಾ..!

ಆ ಕಾಲುಸಂಕದ ಮೇಲೆ ಒಬ್ಬೊಬ್ಬರಾಗಿಯೇ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಸಾಗಬೇಕು. ಎಲ್ಲರೂ ಒಮ್ಮೆಲೆ ಕಾಲುಸಂಕ ದಾಟಿದರೆ ನದಿಯ ಪಾಲಾಗೋದು ಪಕ್ಕಾ. ಆ ಊರ ಜನರೇ ಶ್ರಮದಾನದ ಮೂಲಕ ನಿರ್ಮಿಸಿಕೊಂಡ ಕಾಲುಸಂಕ ದಾಟುವುದಿದೆಯಲ್ಲಾ ಅದಕ್ಕೆ ಎಂಟೆದೆ ಬೇಕು. ಕಾಲುಸಂಕದ ಮಟ್ಟ ತಾಗಿ ಕೆಂಬಣ್ಣದಲ್ಲಿ ಕುಬ್ಜೆ ಹರಿಯುವ ರಭಸ ನೋಡಿದರೆ ಎದೆ ಝಲ್ ಅನ್ನುತ್ತೆ. ಪ್ರಾಣದ ಹಂಗು ತೊರೆದು ತುಂಬಿ ಹರಿಯುವ ನದಿ ದಾಟುವ ಆ ಊರಿನ ಜನರ ಗುಂಡಿಗೆ ಮೆಚ್ಚಲೇಬೇಕು. “ಕಾಲುಸಂಕದ ಮೇಲೆ ಜೀವಭಯದ ಸಂಚಾರ”ದ ಒಂದು ಸ್ಪೆಶಲ್ ರಿಪೋರ್ಟ್ ಇಲ್ಲಿದೆ ನೋಡಿ.   ಕಮಲಶಿಲೆ ಬ್ರಾಹ್ಮೀಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಗರ್ಭಗುಡಿ ಪ್ರವೇಶಿಸಿ ದೇವಿಯ ಪಾದ ತೊಳೆಯುವ ಕುಬ್ಜಾ ನದಿ ತೀರ್ಥ ಎಂದು ಭಕ್ತರು ಕಣ್ಣಿಗೆ ಒತ್ತುಕೊಳ್ಳುವುದು ಒಂದು ಕಡೆಯಾದರೆ, ಹತ್ತಾರು ಮನೆಗಳಿಗೆ ನೂರಾರು ನಾಗರಿಕರಿಗೆ ಕುಬ್ಜಾ ಸಂಚಾರ ಸಂಕಷ್ಟ ತರುತ್ತಿದ್ದಾಳೆ ಎನ್ನೋದು ಕಟು ಸತ್ಯ. ಹೌದು..ಬೈಂದೂರು ತಾಲೂಕು, ಎಡಮೊಗೆ ಗ್ರಾಮದ ರಾಮ್ ಪೈ ಜೆಡ್ಡು ಕುಮ್ಟಿಬೇರು ನಾಗರಿಕರಿಗೆ ಇದೀಗ ಕುಬ್ಜೆ ನಿದ್ದೆಗೆಡಿಸಿದ್ದಾಳೆ. ಸ್ಥಳೀಯರೇ ತಮ್ಮ ಶ್ರಮದಾನದ ಮೂಲಕ ನಿರ್ಮಿಸಿಕೊಂಡ ಕಾಲುಸಂಕ ಮುರಿದು ಬೀಳುವ ಸ್ಥಿತಿತೆ ತಲುಪಿದೆ. ಶಾಲಾ ಮಕ್ಕಳು, ವಯೋವೃದ್ದರು, ಕೃಷಿಕರು ತಂತಿ ಮೇಲೆ ಸರ್ಕಸ್ ಮಾಡಿದ ಹಾಗೆ ಕಾಲುಸಂಕ ದಾಟುವುದಿದೆಯಲ್ಲಾ ಅದು ನಿಜಕ್ಕೂ ಸಾಧನೆಯೇ ಸರಿ. ಹಿಡಿ ಉಪ್ಪಿನಿಂದ ಹಿಡಿದು, ಕೃಷಿ ಕಾಯಕದವರೆಗೆ, ಶಾಲಾ ಮಕ್ಕಳಿಂದ ಹಿಡಿದು ಅಂಗನವಾಡಿ ಪುಟಾಣಿಗಳ ತನಕ ಇದೇ ಕಾಲುಸಂಕದ ಮೇಲೆ ಸರ್ಕಸ್ ಮಾಡಿಯೇ ಸಾಗಬೇಕು. ಹೆಚ್ಚು ಮಳೆ ಬಂದು ಕಾಲುಸಂಕದವರೆಗೂ ನೀರು ಬಂದರೆ ಆ ದಿನ ಇಲ್ಲಿನ ಮಕ್ಕಳು ಶಾಲೆಗೆ ಹೋಗದೆ ಮನೇಲೆ ಕೂರಬೇಕು. ಇನ್ನೊಂದು ದುರಂತವೆಂದರೆ ಕಿರುಸೇತುವೆಗಾಗಿ ಈ ಊರ ಜನರು ಜನಪ್ರತಿನಿಧಿಗಳಿಗೆ ತಲುಪಿಸಿದ ಮನವಿಗಳಿಗೆ ಲೆಕ್ಕವೇ ಇಲ್ಲ. ಕುಬ್ಜಾ ನದಿಗೆ ಕಿರುಸೇತುವೆ ಮಂಜೂರಗಿದೆ. ಗುದ್ದಲಿ ಪೂಜೆ ಮಾಡಿದರಾಯಿತು ಎಂದು ನಂಬಿಸಿ ಗೆದ್ದುಹೋದ ಜ್ರನಪ್ರತಿನಿಧಿಗಳು ಮಳೆಗಾಲದಲ್ಲಿ ಇಲ್ಲಿನ ಜನರ ಕಾಲಸಂಕದಲ್ಲಿನ ಸಂಚಾರದ ಕಷ್ಟ ಕಣ್ಣಾರೆ ನೋಡಲೇಬೇಕು.

ಎಡಮೊಗೆಗೆ ಹೋಗಲು ರಾಮ್‍ಪೈಜೆಡ್ಡು ಹಾಗೂ ಕುಮ್ಟಿಬೇರು ಪ್ರಮುಖ ಸಂಪರ್ಕ ಕೊಂಡಿ ಕುಬ್ಜಾ ನದಿ ಕಾಲುಸಂಕ. ಅದೆಷ್ಟೋ ಶತಮಾನಗಳಿಂದಲೂ ಇಲ್ಲಿನ ಜನರಿಗೆ ಕಾಲುಸಂಕವೇ ಪ್ರಮುಖ ದಾರಿ. ರೇಶನ್ ಬೇಕಾದರೂ ಕಾಲು ಸಂಕ ದಾಟಿ ಬಸ್ ಮೂಲಕ ಎಡಮೊಗೆಗೆ ಹೋಗಿ ತರಬೇಕು. ಇಲ್ಲದಿದ್ದರೆ 6 ಕೀಮಿ ಸುತ್ತುವರಿದು ಹೋಗಿ ರೇಶನ್ ತರಬೇಕು. ಕಾಲು ಸಂಕದ ಮೂಲಕ ಹೋದರೆ ಸಮೀಪವಾಗುತ್ತದೆ ಎನ್ನುವ ನಿಟ್ಟಿನಲ್ಲಿ ಕಾಲುಸಂಕ ಅವಲಂಬಿತರೇ ಹೆಚ್ಚು. ಪ್ರತೀ ಮಳೆಗಾಲಕ್ಕೂ ಮುನ್ನಾ ಊರವರೇ ಸೇರಿ ಕಾಲುಸಂಕ ಮಾಡಿಕೊಳ್ಳುತ್ತಾರೆ. ಅದಕ್ಕೆ ಬೇಕಾಗುವ ಖರ್ಚಿ ಕೂಡಾ ಅವರೇ ಭರಿಸುತ್ತಿದ್ದು, ತಾವೇ ಮಾಡಿದ ಕಾಲುಸಂಕದ ಮೇಲೆ ಸಂಚಾರ ಮಾಡುವಾಗ ಜಾರಿ ನೀರಿಗೆ ಬಿದ್ದು, ಕೊಚ್ಚಿಕೊಂಡು ಹೋದವರನ್ನು ಕಾಪಾಡಿ ದಡಕ್ಕೆ ಹಾಕಿದ ಘಟನೆಯೂ ಕೂಡಾ ಸಾಕಷ್ಟಿದೆ. ಜಾನುವಾರುಗಳು ಹೊಳೆ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದೂ ಇದೆ. ಶಾಲಾ ಮಕ್ಕಳನ್ನು ಪೋಷಕರು ಕೈಹಿಡಿದು ದಾಟಿಸುತ್ತಾರೆ. ಶಾಲೆ ಬಿಟ್ಟು ಸಂಜೆ ಮನೆಗೆ ಬರುವಾಗಲೂ ಕೆಲಸವೆಲ್ಲ ಬದಿಗೊತ್ತಿ ತಮ್ಮ ಮಕ್ಕಳಿಗಾಗಿ ಕಾದು ಮಕ್ಕಳನ್ನು ದಾಟಿಸಿ ಜಗರೂಕತೆಯಿಂದ ಮನೆಗೆ ಬರುತ್ತಾರೆ. ತಮಗೊಂದು ಕಿರುಸೇತುವೆ ನಿರ್ಮಿಸಿಕೊಡಿ ಎಂಬ ಜನರ ಕೂಗು ಸಂಬಂಧಪಟ್ಟ ಶಾಸಕರಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ಕೇಳಿಸಲೇ ಇಲ್ಲ. ಚುನಾವಣೆ ಬಂದಾಗ ಕಣ್ಣೊರೆಸಿ ಆಶ್ವಾಸನೆ ಕೊಟ್ಟು ಹೋಗುವ ರಾಜಕೀಯ ಮುಖಂಡರುಗಳು ಗೆದ್ದ ಬಳಿಕ ಇತ್ತ ತಲೆ ಹಾಕೋದಿಲ್ಲ ಎಂಬ ಆರೋಪವೂ ಇಲ್ಲಿನ ಜನರದು.

ರಾಮ್‍ಪೈಜೆಡ್ಡು ಕುಮ್ಟಿಬೇರು ಪರಿಸರದ ಜನರಿಗೆ ಕಾಲು ಸಂಕವೊಂದೇ ಸಮಸ್ಯೆ ಅಲ್ಲ. ರಸ್ತೆ ಸಂಚಾರವೂ ಕೂಡ ದೊಡ್ಡ ತಲೆನೋವು. ರಸ್ತೆ ಸಂಪೂರ್ಣ ಹದಗೆಟ್ಟಿದ್ದು ತುರ್ತು ಪರಿಸ್ಥಿತಿಯಲ್ಲಿ ಆಂಬುಲೆನ್ಸ್ ಬರೋದು ಕೂಡ ಕಷ್ಟ. ಆಟೋ ಬಾಡಿಗೆಗೆ ಹೋದರೆ, ಆಟೋ ಚಾಲಕರು ಬಾಡಿಗೆ ತೆಗೆದುಕೊಂಡ ಹಣಕ್ಕೆ ಇನ್ನಷ್ಟು ಸೇರಿಸಿ ಗ್ಯಾರೇಜ್‍ನವರಿಗೆ ಕೊಡಬೇಕು. ಈ ಭಾಗದಲ್ಲಿ ಸಂಪರ್ಕ ರಸ್ತೆ ಕೆಟ್ಟು ಹೋಗಲು ಕಾರಣ ಮಾತ್ರ ಅವ್ಯಾಹತ ಅಕ್ರಮವಾಗಿ ನಡೆಯುತ್ತಿರುವ ಕೆಂಪುಕಲ್ಲು ಗಣಿ. ರಾಮ್‍ಪೈಜಡ್ಡಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರೇ ಹೆಚ್ಚಿದ್ದು, ಎಸ್ಸಿಎಸ್ಟಿ ಅನುದಾನದಲ್ಲಾದರೂ ಕಿರು ಸೇತುವೆ ನಿರ್ಮಿಸಿಕೊಡಬಹುದಿತ್ತು. ಇಲ್ಲಿನ ಜನರ ಸಂಚಾರ ಕಾಲುಸಂಕದಲ್ಲಿ ಹೀಗೆಯೇ ಮುಂದುವರಿದರೆ ಅನಾಹುತಗಳು ಸಂಭವಿಸೋದು ಖಚಿತ. ಸಂಬಂಧಪಟ್ಟ ಶಾಸಕರು, ಜನಪ್ರತಿನಿಧಿಗಳು ಅನಾಹುತಗಳು ಸಂಭವಿಸುವ ಮುನ್ನವೇ ಎಚ್ಚೆತ್ತು ಈ ಭಾಗಕ್ಕೊಂದು ಸುಸಜ್ಜಿತ ಕಿರುಸೇತುವೆ ನಿರ್ಮಿಸಿಕೊಡಬೇಕು ಎನ್ನೋದು ವಿ4 ವಾಹಿನಿಯ ಆಶಯ.

Related posts

Leave a Reply

Your email address will not be published. Required fields are marked *