Header Ads
Breaking News

ಕುಂದಾಪುರ ಪುರಸಭಾ ಸದಸ್ಯರ ಹಾಗೂ ಸಾರ್ವಜನಿಕರ ಕುಂದು ಕೊರತೆಗಳ ಸಭೆ

 ಒಳ ಚರಂಡಿ ಯೋಜನೆಯ ಕಾಮಗಾರಿಯಿಂದಾದ ಅವ್ಯವಸ್ಥೆಗೆ ಅಸಮಧಾನ. ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ಸರಿಯಾಗಿ ದೊರಕುತ್ತಿಲ್ಲ ಎನ್ನುವ ದೂರು. ಹೆದ್ದಾರಿ ಇಲಾಖೆಯ ನಿರ್ಲಿಪ್ತ ಧೋರಣೆಗೆ ಆಕ್ರೋಶ. 94ಸಿ ಅರ್ಜಿ ವಿಲೆವಾರಿಗಾಗಿ ಮನವಿ. ಹಾಳಾಗಿರುವ ರಸ್ತೆ ದುರಸ್ತಿಗೆ ಒತ್ತಾಯ. ಬಸ್ ನಿಲ್ದಾಣದ ಸಮಸ್ಯೆ ಪರಿಹಾರಕ್ಕೆ ಆಗ್ರಹ. ಮಿನಿ ವಿಧಾನಸೌಧದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಒತ್ತಾಯ. ಇದು ಪುರಸಭಾ ವ್ಯಾಪ್ತಿಯ ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಹಾಯಕ ಆಯುಕ್ತರ ಮುಂದಿಟ್ಟ ಸಮಸ್ಯೆಗಳ ಲಿಸ್ಟ್.

ಹೌದು.. ಕುಂದಾಪುರ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಭವನದಲ್ಲಿ ನಡೆದ ಪುರಸಭಾ ಸದಸ್ಯರ ಹಾಗೂ ಸಾರ್ವಜನಿಕರ ಕುಂದು ಕೊರತೆಗಳ ಸಭೆಯಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಂಡ ಪರಿಯಿದು.

ಸಭೆಯ ಬಹುಪಾಲು ರಾಷ್ಟ್ರೀಯ ಹೆದ್ದಾರಿಯ ಅತಂತ್ರಗಳಿಗೆ ಮೀಸಲಾಗಿತ್ತು. ಹೆದ್ದಾರಿಯಲ್ಲಿ ನಿರ್ಮಾಣವಾಗುತ್ತಿರುವ ಕೃತಕ ಸರೋವರ. ಚರಂಡಿಗಳ ಅವ್ಯವಸ್ಥೆ. ಅರ್ಧಕ್ಕೆ ನಿಂತಿರುವ ಫ್ಲೈ ಓವರ್, ಅಂಬ್ಯಾಕ್‍ಮೆಂಟ್ ಮುಂತಾದ ವಿಚಾರಗಳ ಕುರಿತು ಕೆಂಚನೂರು ಸೋಮಶೇಖರ ಶೆಟ್ಟಿ, ದೇವಕಿ ಸಣ್ಣಯ್ಯ, ಶ್ರೀಧರ ಶೇರುಗಾರ ಮುಂತಾದವರು ಪ್ರಶ್ನೆಗಳನ್ನು ಕೇಳಿದರು.

ಈ ವೇಳೆ ಮಾತನಾಡಿದ ಉಪವಿಭಾಗಾಧಿಕಾರಿಗಳು ಗುತ್ತಿಗೆ ಕಂಪೆನಿಯ ಅಧಿಕಾರಿಗಳನ್ನು ಕರೆದು ಚರ್ಚೆ ನಡೆಸುತ್ತೇನೆ. ಜಿಲ್ಲಾಧಿಕಾರಿಗಳ ಸಭೆಯಲ್ಲಿಯೂ ಸಮಸ್ಯೆಯ ಬಗ್ಗೆ ಮಾತನಾಡುತ್ತೇನೆ. ಹೆದ್ದಾರಿ ಕಾಮಗಾರಿಯಿಂದ ಉಂಟಾಗುತ್ತಿರುವ ನೀರಿನ ಹರಿಯುವಿಕೆಯ ಸಮಸ್ಯೆಗಳ ಕುರಿತು ಸ್ಥಳೀಯಾಡಳಿತದೊಂದಿಗೆ ಸಮಾಲೋಚನೆ ನಡೆಸುತ್ತೇನೆ. ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಕಾಮಗಾರಿ ವಿಳಂಭದ ಬಗ್ಗೆ ಅಗತ್ಯ ಬಿದ್ದರೆ ಕಠಿಣ ಕಾನೂನು ಕ್ರಮಕ್ಕೂ ಮುಂದಾಗುವುದಾಗಿ ಭರವಸೆ ವ್ಯಕ್ತಪಡಿಸಿದರು.

ಕಾಮಗಾರಿಯ ಅಸಮರ್ಪಕ ನಿರ್ವಹಣೆಯಿಂದಾಗಿ ಇಂಟರ್‍ಲಾಕ್‍ಗಳು ಕುಲಗೆಟ್ಟು ಹೋಗಿದೆ. ಕೆಲವು ರಸ್ತೆಗಳಲ್ಲಿ ಸಂಚಾರಕ್ಕೂ ತೊಡಕು ಉಂಟಾಗಿದೆ ಎಂದು ಮಾಜಿ ಸದಸ್ಯ ಕೋಡಿ ಪ್ರಭಾಕರ ದೂರಿದರು. ಸರ್ಕಾರಿ ಆಸ್ಪತ್ರೆ ವಾರ್ಡಿನಲ್ಲಿ ಒಳಚರಂಡಿ ಯೋಜನೆಯ ಯಾವುದೆ ಕಾಮಗಾರಿಗಳು ಇನ್ನೂ ಪ್ರಾರಂಭವಾಗಿಲ್ಲ ಎಂದು ಮಾಜಿ ಅಧ್ಯಕ್ಷೆ ದೇವಕಿ ಪಿ ಸಣ್ಣಯ್ಯ ಗಮನ ಸೆಳೆದರು.

ಸಭೆಯಲ್ಲಿ ಪ್ರಾಸ್ತಾಪವಾದ ವಿಚಾರಗಳಿಗೆ ಸ್ಪಂದಿಸಿ ಮಾತನಾಡಿದ ಉಪವಿಭಾಗಾಧಿಕಾರಿಯವರು ಕೋಡಿಯಲ್ಲಿನ ಗುಂಡಿಗಳನ್ನು ಶೀಘ್ರ ಮುಚ್ಚಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇಂಟರ್‍ಲಾಕ್ ಹಾಗೂ ರಸ್ತೆಯ ಇತರ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದಲೂ ದೂರು ಬರುತ್ತಿದೆ, ಹಗಲು ವೇಳೆಯಲ್ಲಿ ಸಂಚಾರಕ್ಕೆ ತೊಂದರೆಯಾಗುವುದರಿಂದ ರಾತ್ರಿ ವೇಳೆಯಲ್ಲಿ ಕಾಮಗಾರಿ ನಡೆಸುವಂತೆ ಸೂಚಿಸಲಾಗಿದೆ. ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲು ಹೇಳಲಾಗಿದೆ. ಯೋಜನೆಯ ಕುರಿತು ಯೋಜನಾಧಿಕಾರಿಗಳ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು.

ಮೆಸ್ಕಾಂ ಸಮಸ್ಯೆಗಳಿಗೆ ಉತ್ತರಿಸಿದ ಅಧಿಕಾರಿ ರಾಘವೇಂದ್ರ ಅವರು ಕೋಡಿಯಲ್ಲಿ ಇದ್ದ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಹೊಸ ವಯರ್‍ಗಳನ್ನು ಹಾಕಲು ಪ್ರಾಸ್ತಾವನೆ ಕಳುಹಿಸಲಾಗಿದೆ. ವಯರ್ ಬದಲಾವಣೆಯಾದಾಗ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ. ಫೀಡರ್ ಸಮಸ್ಯೆಯಿಂದಾಗಿ ಖಾರ್ವಿಕೇರಿ ಹಾಗೂ ಮದ್ದುಗುಡ್ಡೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಸಮಜಾಯಿಕೆ ನೀಡಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಉಪವಿಭಾಗಾಧಿಕಾರಿಗಳು ಜನರೊಂದಿಗೆ ಸೌಜನ್ಯವಾಗಿ ಮಾತನಾಡಬೇಕು ಉದ್ಧಟತನ ಸರಿಯಲ್ಲ ಎಂದರು.

ಉಪವಿಭಾಗಾಧಿಕಾರಿ ಡಾ.ಎಸ್.ಎಸ್.ಮಧುಕೇಶ್ವರ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ. ವಸಂತಿ ಸಾರಂಗ್, ಅಬ್ಬು ಮಹಮ್ಮದ್, ಪ್ರಭಾಕರ, ಸಂತೋಷ್ ಶೆಟ್ಟಿ, ಅಶ್ವಿನಿ ಪ್ರದೀಪ್, ಗಿರೀಶ್, ಶೇಖರ, ಕಮಲಾ, ಸಂದೀಪ ಖಾರ್ವಿ, ಪ್ರಭಾವತಿ ಶೆಟ್ಟಿ, ಕೇಶವ ಭಟ್, ರಾಜೀವ್ ಕೋಟ್ಯಾನ್, ಕಿಶನ್‍ರಾಜ್ ಶೆಟ್ಟಿ, ವಿಜಯ್ ಕುಂದಾಪುರ, ರಾಜೇಶ್ ವಡೇರಹೋಬಳಿ, ರಾಜಾ ಬಿಟಿಆರ್ ಇದ್ದರು.

Related posts

Leave a Reply

Your email address will not be published. Required fields are marked *