Header Ads
Header Ads
Breaking News

ಕ್ರಿಮಿನಲ್ ಗಳಿಗೆ ಮಾತಿನ ಚಾಟಿಯಲ್ಲೇ ಏಟು ನೀಡಿದ ಐಜಿಪಿ

ಬಂಟ್ವಾಳ : ನಾನೇನು ಪುಕ್ಕಲ, ಕೇವಲ ಮಾತನಾಡುವ ಅಧಿಕಾರಿಯಲ್ಲ.. ಕೆಲಸ ಮಾಡಿ ತೋರಿಸುವ ಅಧಿಕಾರಿ.. ನನ್ನ ಸೇವಾವಧಿಯಲ್ಲಿ ನೂರಾರು ಕ್ರಿಮಿನಲ್ ಗಳನ್ನು ನೋಡಿದ್ದೇನೆ.ಇಂತಹವರನ್ನು ಕಾನೂನಿನಡಿಯಲ್ಲೇ ಹೇಗೆ ಮಟ್ಟ ಹಾಕಬೇಕೆಂದು ನನಗೆ ಚೆನ್ನಾಗಿ ಗೊತ್ತಿದೆ ಎಂಬ ಖಡಕ್ ಸಂದೇಶವನ್ನು ಕ್ರಿಮಿನಲ್ ಹಾಗೂ ಸಮಾಜ ಘಾತುಕರಿಗೆ ಪಶ್ಚಿಮ ವಲಯದ ಐಜಿಪಿ ಹರಿಶೇಖರನ್ ನೀಡಿದ್ದಾರೆ.ಅವರು ಬಂಟವಾಳ ಬಂಟರಭವನದಲ್ಲಿ ದ.ಕ.ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಡೆದ ತಾಲೂಕು ಮಟ್ಟದ ಸಾರ್ವಜನಿಕ ಶಾಂತಿ ಸಭೆಯಲ್ಲಿ ರವಾನಿಸಿದ್ದಾರೆ.
ಜನಪ್ರತಿನಿಧಿಗಳ,ಸಾಮಾಜಿಕ ಕಾರ್ಯಕರ್ತರ ,ಗಣ್ಯರ ಅನಿಸಿಕೆಗಳನ್ನು ಅಲಿಸಿದ ಬಳಿಕ ಮಾತನಾಡಿದ ಐಜಿಪಿಯವರು ಅಪರಾಧ ಕ್ರತ್ಯದ ಬಳಿಕ ಆರೋಪಿಗಳು ಎಲ್ಲೆ ಅಡಗಿರಲಿ ಅಂಥವರ ಅಥವಾ ಮನೆಮಂದಿಯ ಹೆಸರಿನಲ್ಲಿರುವ ಆಸ್ಥಿಯನ್ನು ಮುಟ್ಟಗೋಲು ಹಾಕಲಾಗುವುದು ಇದೆಲ್ಲವನ್ನು ಕಾನೂನಿನ ಚೌಕಟ್ಟಿನಲ್ಲಿಯೇ ಕಾರ್ಯರೂಪಕ್ಕೆ ತರಲಾಗುವುದು ಎಂದು ಎಚ್ಚರಿಸಿದರು.
ಸಮಾಜದಲ್ಲಿ ಶಾಂತಿ ಕದಡುವ ಶೇ. ೦೧ರಷ್ಠು ಮಂದಿ ಮಾತ್ರ ಇದ್ದು, ಕ್ಯಾನ್ಸರ್ ಹರಡುವ ವೈರಸ್ ನಂತಿರುವ ಇಂತಹವರಿಗೆ ಸರಿಯಾದ ಟ್ರೀಟ್ ಮೆಂಟ್ ನೀಡಲು ಇಲಾಖೆ ತರಬೇತಿ ಪಡೆದಿದೆ ಎಂದ ಅವರು ನನ್ನ ಅವಧಿಯಲ್ಲಿ ಯಾವ ಪ್ರಕರಣದಲ್ಲೂ ಅಮಾಯಕರನ್ನು ಬಂಧಿಸುವುದಿಲ್ಲ,ಆದರೆ ಅನುಮಾನಿತರನ್ನು ವಿಚಾರಣೆ ನಡೆಸುವ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿದರು.
ಅಡಿಷನಲ್ ಎಸ್ಪಿ,ಡಿಸಿ‌ಐಬಿ ಕೇಂದ್ರ ಕಚೇರಿ ಬಂಟ್ವಾಳದಲ್ಲಿ…:
ಇನ್ನು ಮುಂದೆ ಜಿಲ್ಲಾ ಅಪರಾಧ ಪತ್ತೆ ದಳ ಹಾಗೂ ಅಡಿಷನಲ್ ಎಸ್ಪಿ ಕಚೇರಿ ಬಂಟ್ವಾಳವನ್ನೇ ಕೇಂದ್ರೀಕರಿಸಿ ಕಾರ್ಯಾಚರಿಸಲಿದೆ.ಹಾಗೆಯೇ ತಾಲೂಕಿನ ಎಲ್ಲಾ ಕ್ರಿಮಿನಲ್‌ಗಳ,ಸಮಾಜ ಕಂಟಕರ ಪೂರ್ವಾಪರ ಹಿನ್ನಲೆಯನ್ನು ಕಲೆ ಹಾಕುವ ನಿಟ್ಟಿನಲ್ಲಿ ತಂಡವನ್ನು ಕೂಡ ರಚಿಸಲಾಗಿದೆ ಎಂದ ಐಜಿಪಿ ಹರಿಶೇಖರನ್ ಸಾಮಾಜಿಕ ಜಾಲತಾಣದಲ್ಲೂ ಹರಡುವ ಕೆಟ್ಟ, ಅಪಪ್ರಚಾರದ ಸಂದೇಶ ಸೃಷ್ಟಿಸುವುದು ಮತ್ತು ರವಾನಿಸುವವರನ್ನು ವಿಶೇಷ ತಂತ್ರಜ್ಙಾನದ ಮೂಲಕ ಪತ್ತೆ ಹಚ್ಚಿ ಈಗಾಗಲೇ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದರು. ಐಜಿ ಮತ್ತು ಎಸ್ಪಿ ಕಚೇರಿ ಕೇಂದ್ರಿಕರಿಸಿ ಬಂಟ್ವಾಳ ತಾಲೂಕಿನೆಲ್ಲೆಡೆ ಗುಣಮಟ್ಟದ ಸಿಸಿ ಕ್ಯಾಮಾರ ಅಳವಡಿಸಲಾಗುವುದು, ಏನೇ ಅನುಮಾನಗಳಿದ್ದರೆ ಯಾವುದೇ ಸಂಘಟನೆಯ ಮುಖಂಡರು, ಸಾರ್ವಜನಿಕರು ಖುದ್ದು ತನ್ನನ್ನು ಬೇಟಿಯಾಗಿ ಚರ್ಚಿಸಬಹುದು ಎಂದು ಹೇಳಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ೫೦೦ ಕ್ಕೂ ಹೆಚ್ಚು ಮಂದಿ ಪೊಲೀಸ್ ಸಿಬ್ಬಂದಿಗಳು,ಅಧಿಕಾರಿಗಳು ಕಳೆದ ಒಂದು ತಿಂಗಳಿನಿಂದ ರಸ್ತೆಯಲ್ಲಿದ್ದಾರೆ ಅವರಿಗೂ ಸಂಸಾರವಿದೆ ಅವರ ಬಗ್ಗೆಯು ಕಾಳಜಿ ವಹಿಸಬೇಕಾಗಿದೆ ಎಂದ ಅವರು ಸಮಸ್ಯೆಯನ್ನು ಹೇಳಿಕೊಂಡು ಠಾಣೆಗೆ ಬರುವ ಜನಸಾಮಾನ್ಯರಿಗೂ ಸ್ಪಂದಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ದೇಶದ ವಿವಿಧ ರಾಜ್ಯಗಳಿಂದ ಕರ್ನಾಟಕದಲ್ಲಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಾ ಇದ್ದಾರೆ. ಈ ರಾಜ್ಯದಲ್ಲಿ ಕೆಲಸ ಮಾಡುವುದೇ ಹೆಮ್ಮೆಯ ವಿಚಾರ. ಕೆಲವರು ನಿವೃತ್ತರಾದ ಬಳಿಕವೂ ಕನ್ನಡಿಗರಾಗಿ ಇಲ್ಲೇ ನೆಲೆಯಾಗುತ್ತಿದ್ದಾರೆ. ಅಂತಹ ಮಹತ್ವದ ರಾಜ್ಯವಾಗಿರುವ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಗೂ ಉತ್ತಮ ಹೆಸರಿದೆ. ಇದನ್ನು ಉಳಿಸುವ ನಿಟ್ಟಿನಲ್ಲಿ ಯುವ ಜನಾಂಗ ದಾರಿತಪ್ಪದಂತೆ ಅವರನ್ನು ನೋಡಿಕೊಳ್ಳುವ ಕಾರ್ಯ ಹಿರಿಯರಿಂದ ಆಗಬೇಕು ಎಂದು ಸಲಹೆ ನೀಡಿದರು.
ಬೆಂಬಲ ನೀಡದಿರಿ : ಸಮಾಜದಲ್ಲಿ ಶೇ. ೦೧ರಷ್ಟು ಮಂದಿಯಿಂದ ಅಶಾಂತಿ ಉಂಟಾಗುತ್ತಿದೆ. ಇಂತವರಿಗೆ ಯಾರೂ ಕೂಡ ನೈತಿಕವಾದ ಬೆಂಬಲವನ್ನು ನೀಡಬಾರದು ಎಂದು ಜಿಲ್ಲಾಧಿಕಾರಿ ಡಾ. ಜಗದೀಶ್‌ರವರು ಕರೆ ನೀಡಿದರು.
ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ಯಾವುದೇ ಲೋಪವಾಗಿದ್ದರೆ ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಿಕೊಳ್ಳಲಾಗುವುದು, ಯುವಜನಾಂಗಕ್ಕೆ ಆದರ್ಶಕೊಡುವಂತಹ ಕೆಲಸ ಸಮಾಜದ ಮುಖಂಡರು ಹಾಗೂ ಹಿರಿಯರಿಂದ ಆಗಬೇಕು ಎಂದು ಅವರು ಅಧಿಕಾರಿಗಳಿಗೆ ಯಾವುದೇ ಜಾತಿ, ಧರ್ಮವಿಲ್ಲ, ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿ ಸುದೀರ್ ಕುಮಾರ್ ರೆಡ್ಡಿ ಮಾತನಾಡಿ ಕಾನೂನನ್ನು ಯಾರಿಗೂ ಕೈಗೆತ್ತಿಕೊಳ್ಳಲು ಅವಕಾಶವಿಲ್ಲ, ಕೇವಲ ಸೆಕೆಂಡ್‌ಗಳಲ್ಲಿ ನಡೆಯುವ ಘಟನೆಯಲ್ಲಿ ತೊಡಗಿಸಿಕೊಂಡರೆ ಮುಂದೆ ಆತ ತನ್ನ ಭವಿಷ್ಯವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಸಮಾಜದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಇಲಾಖೆಯೊಂದಿಗೆ ಸಾರ್ವಜನಿಕರು ಕೂಡಾ ಸಹಕರಿಸುವಂತೆ ಮನವಿ ಮಾಡಿದರು.
ಇದಕ್ಕೂ ಮೊದಲು ಜಿ.ಪಂ. ಸದಸ್ಯ ಎಂ. ಎಸ್. ಮಹಮ್ಮದ್, ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಆಲಿ, ಪುರಸಭಾ ಸದಸ್ಯರಾದ ದೇವದಾಸ ಶೆಟ್ಟಿ, ಮೊನೀಶ್ ಆಲಿ, ತುಂಬೆ ಗ್ರಾಮಪಂಚಾಯತ್ ಉಪಾಧ್ಯಕ್ಷ ಪ್ರವೀಣ್ ತುಂಬೆ, ಪತ್ರಕರ್ತ ರಾಜಾ ಬಂಟ್ವಾಳ, ಸಾಮಾಜಿಕ ಕಾರ್ಯಕರ್ತರಾದ ಪಿ. ಎ. ರಹೀಂ, ಸಾಹುಲ್ ಹಮೀದ್, ಎ.ಪಿ.ಎಂ.ಸಿ. ಅಧ್ಯಕ್ಷ ಪದ್ಮನಾಭ ರೈ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ದಕ್ಷಿಣ ಜಿಲ್ಲಾ ಪ್ರಬಾರ ಅಡಿಶನಲ್ ಎಸ್ಪಿ ವಿಷ್ಣುವರ್ದನ್, ಡಿವೈ‌ಎಸ್ಪಿ ಬಾಸ್ಕರ ರೈ ಉಪಸ್ಥಿತರಿದ್ದರು.

ಸಭೆಯಲ್ಲಿ ಬಂದ ಸಲಹೆ

  • ಹಬ್ಬ ಹರಿದಿನ ಸಂದರ್ಭದ ೨ ದಿನಗಳ ಮುಂಚಿತವಾಗಿ ಬೆರೆಳೆಣಿಕೆಯ ಮಂದಿಯನ್ನು ಕರೆದು ಶಾಂತಿ ಸಭೆ ನಡೆಸುವುದು ಸಲ್ಲದು. ಶಾಶ್ವತವಾದ ಶಾಂತಿ ಸಮಿತಿಯನ್ನು ರಚಿಸಿ ಪ್ರತೀ ಎರಡು ತಿಂಗಳಿಗೊಮ್ಮೆ ಸಭೆ ಸೇರಿ ಚರ್ಚಿಸಬೇಕು.
  • ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ದೇಶದಲ್ಲೇ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಜನಸ್ನೇಹಿಯ ಜೊತೆಗೆ ಕಾನೂನು ಸ್ನೇಹಿಯಾಗಿಯೂ ಇಲಾಖೆ ಕಾರ್ಯ ನಿರ್ವಹಿಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ಪ್ರಕರಣಕ್ಕೂ ಐಪಿಸಿ ೩೦೭ ಸೆಕ್ಷನ್ ದಾಖಲಿಸುವ ಪ್ರವೃತ್ತಿ ನಡೆಯುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವ ನಿಟ್ಟಿನಲ್ಲಿ ಆಯಕಟ್ಟಿನ ಜಾಗಗಳಲ್ಲಿ ಉತ್ತಮ ಗುಣಮಟ್ಟದ ಸಿಸಿ ಕ್ಯಾಮರಾ ಅಳವಡಿಸಬೇಕು. ಇದಕ್ಕೆ ಜನಪ್ರತಿನಿಧಿಗಳು ಅನುದಾನವನ್ನು ಒದಗಿಸಬೇಕು. ಪೊಲೀಸರು ಸಮಾಜದಲ್ಲಿ ವಿಶ್ವಾಸ ಮೂಡಿಸುವ ವಾತಾವರಣ ನಿರ್ಮಿಸಬೇಕು.
  • ೧೪ರಿಂದ ೨೦ರ ಹರೆಯದ ಯುವಕರೇ ಇಂದು ಅಪರಾಧ ಪ್ರಕರಣದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಗಾಂಜಾ ಹಾವಳಿಯು ಕಾರಣವಾಗಿದೆ. ಈ ಬಗ್ಗೆ ಮಾಹಿತಿ ನೀಡಿದರೆ ಇಲಾಖೆಯಿಂದ ಸೋರಿಕೆಯಾಗುತ್ತಿದೆ. ಗಾಂಜಾ ದಂಧೆಗೆ ಕಡಿವಾಣ ಹಾಕಬೇಕು. ಮತ್ತು ಯಾವುದೇ ಪ್ರಕರಣದಲ್ಲಿ ಆರೋಪಿಪರ ಬರುವಂತಹ ರಾಜಕೀಯ ಒತ್ತಡಗಳಿಗೆ ಇಲಾಖೆ ಮಣಿಯಬಾರದು.
  • ದೃಶ್ಯ ಮಾದ್ಯಮಗಳಲ್ಲಿ ಬರುವಂತಹ ಬ್ರೇಕಿಂಗ್ ನ್ಯೂಸ್ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹರಡುವ ಶಾಂತಿ ಕದಡುವ ಸಂದೇಶವನ್ನು ಸೃಷ್ಟಿಸುವ ಮತ್ತು ರವಾನಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.ಇದೇ ವೇಳೆ ಕಲ್ಲಡ್ಕದಲ್ಲಾದ ಅಹಿತಕರ ಘಟನೆಗಳಿಗೆ ಪೊಲೀಸ್ ವೈಫಲ್ಯವೇ ಕಾರಣ ಎಂದು ಪುರಸಭಾ ಸದಸ್ಯ ಮೊನಿಶ್ ಆಲಿಯವರು ಸಭೆಯ ಗಮನ ಸೆಳೆದಾಗ ತಕ್ಷಣ ಪ್ರತಿಕ್ರಿಯಿಸಿದ ಐಜಿಪಿ ಹರಿಶೇಖರನ್‌ರವರು ಸರಿಯಾದ ಮಾಹಿತಿ ಇಲ್ಲದೇ ಸಭೆಯಲ್ಲಿ ಮಾತನಾಡಬಾರದು. ತಮಗೆ ಅನುಮಾನಗಳಿದ್ದರೆ ಪುರಾವೆ ಸಮೇತವಾಗಿ ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಈ ಕೂಡಲೇ ಭೇಟಿ ಮಾಡಿ ಚರ್ಚಿಸಬೇಕು. ಬಳಿಕ ತನ್ನ ಬಳಿಗೂ ಬಂದು ಮಾತನಾಡುವಂತೆ ತಾಕೀತು ಮಾಡಿದರು.ಡಿವೈ‌ಎಸ್ಪಿ ರವೀಶ್ ಸಿ.ಆರ್. ಸ್ವಾಗತಿಸಿದರು. ಇನ್ಸ್‌ಪೆಕ್ಟರ್ ಬಿ. ಕೆ. ಮಂಜಯ್ಯ ವಂದಿಸಿದರು. ಕಲಾವಿದ ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

Related posts

Leave a Reply