Header Ads
Header Ads
Breaking News

ಗೋ ರಕ್ಷಣೆಗೆ ಕಾನೂನು ಬಂದಿದೆ ಎಂದು ಯಾರೂ ಹಿಗ್ಗಬಾರದು, ರಾಘವೇಶ್ವರ ಭಾರತೀ ಸ್ವಾಮೀಜಿ

ಪುತ್ತೂರು: ಗೋಮಾತೆಯ ರಕ್ಷಣೆ ಕಷ್ಟ ಎಂದುಕೊಂಡು ಯಾರೂ ಕುಗ್ಗಬಾರದು. ಗೋ ರಕ್ಷಣೆಗೆ ಕಾನೂನು ಬಂದಿದೆ ಎಂದು ಯಾರೂ ಹಿಗ್ಗಬಾರದು. ನಮ್ಮ ನಮ್ಮ ಕರ್ತವ್ಯ ನಾವು ಮಾಡುತ್ತಲೇ ಇರೋಣ. ಗೋ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ರಾಷ್ಟ್ರಮಟ್ಟದಲ್ಲಿ ಗೋ ಸೇನೆ ನಿರ್ಮಿಸುವ ಅನಿವಾರ್ಯತೆ ಇದೆ. ಈ ಮೂಲಕ ಮುಂದೊಂದು ದಿನ ದೆಹಲಿಯ ಕೆಂಪುಕೋಟೆಯಲ್ಲಿ ಕಾಮಧೇನು ಧ್ವಜ ಹಾರಾಡಬೇಕು ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಬುಧವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೊತ್ತ ಮೊದಲ ಭಾರತೀಯ ಗೋ ಪರಿವಾರ ತಾಲೂಕು ಘಟಕ ಉದ್ಘಾಟಿಸಿ, ಗೋ ಕಿಂಕರರಿಗೆ ಗೋ ದೀಕ್ಷೆ ನೀಡಿ ಆಶೀರ್ವಚನ ನೀಡಿದರು.
ನಾವು ಗೋರಕ್ಷಾ ಅಭಿಯಾನ ಆರಂಭಿಸುವಾಗ ಇದು ಕಾರ್ಯಸಾಧ್ಯವಲ್ಲ ಎಂದು ಜನ ಆಡಿಕೊಳ್ಳುತ್ತಿದ್ದ ಪರಿಸ್ಥಿತಿ ಇತ್ತು. ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಇದೂ ಸಾಧ್ಯ ಎಂದು ಸಾಬೀತಾಗಿದೆ. ಇವತ್ತು ಕೇಂದ್ರ ಸರಕಾರ ಗೋ ಕಾನೂನಿಗೆ ತಿದ್ದುಪಡಿ ತಂದಿರುವುದು ಕಳೆದ ಹಲವು ವರ್ಷಗಳಿಂದ ಲಕ್ಷಾಂತರ ಮಂದಿ ಮಾಡುತ್ತಾ ಬಂದ ಗೋ ಸಂಗ್ರಾಮದ ಫಲ. ಇದೊಂದು ದೊಡ್ಡ ಧನಾತ್ಮಕ ಬೆಳವಣಿಗೆ. ಹಾಗೆಂದು ನಾವ್ಯಾರು ಖುಷಿ ಪಟ್ಟು ಸುಮ್ಮನಿರಬೇಕಿಲ್ಲ. ಯಾಕೆಂದರೆ ಕೇಂದ್ರ ಸರಕಾರ ಮಾಡಿರುವುದು ಕೇವಲ ಒಂದು ತಿದ್ದುಪಡಿ ಮಾತ್ರ. ಅದು ಪೂರ್ಣ ಪ್ರಮಾಣದ ಕಾನೂನಲ್ಲ. ಸಂಸತ್ತಿನಲ್ಲಿ ಅನುಮೋದನೆ ಪಡೆದ ಕಾಯಿದೆಯಲ್ಲ. ಒಬ್ಬ ಸಚಿವರ ಸಹಿ ಮೂಲಕ ಮಾಡಿದ ತಿದ್ದುಪಡಿಯನ್ನು ನಾಳೆ ಇನ್ನೊಬ್ಬ ಮಂತ್ರಿ ಬದಲಾಯಿಸಲೂ ಬಹುದು. ಹಾಗಾಗಿ ಗೋ ರಕ್ಷಣೆ ವಿಷಯದಲ್ಲಿ ನಮ್ಮ ಅಭಿಯಾನ ನಿತ್ಯ ನಿರಂತರವಾಗಿಬೇಕು ಎಂದವರು ನುಡಿದರು.
ಗೋ ಸಂರಕ್ಷಣೆ ವಿಚಾರದಲ್ಲಿ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯವರಿಗೆ ಸಲ್ಲಿಸುವ ಉದ್ದೇಶದಿಂದ ಭಾರತೀಯ ಗೋ ಪರಿವಾರದ ಆಶ್ರಯದಲ್ಲಿ ಅಭಯಾಕ್ಷರ ಆಂದೋಲನ ನಡೆಸಲಿದ್ದೇವೆ. ಇದೊಂದು ಅರ್ಜಿಯಾಗಿದ್ದು, ಇದಕ್ಕೆ ಗೋಪ್ರೇಮಿಗಳು ಸಹಿ ಹಾಕಿದರೆ ಸಾಕು. ಪ್ರತೀ ಹಳ್ಳಿಗೂ ಈ ಅರ್ಜಿ ಬರಲಿದೆ. ಈ ಮೂಲಕ ನೈಜ ಗೋ ಪ್ರೇಮಿಗಳ ಸಂಖ್ಯೆ ಎಷ್ಟು ಅಗಾಧವಾಗಿದೆ. ಗೋವಿರೋಧಿಗಳು ಎಷ್ಟು ಅಲ್ಪ ಪ್ರಮಾಣದಲ್ಲಿದ್ದಾರೆ ಎಂಬುದು ಸರಕಾರಗಳಿಗೆ ತಿಳಿಯಲಿದೆ. ಕರ್ನಾಟಕದಿಂದ ಆರಂಭಗೊಳ್ಳುವ ಅಭಿಯಾನ ಮುಂದಿನ ದಿನಗಳಲ್ಲಿ ರಾಷ್ಟ್ರವ್ಯಾಪಿ ನಡೆಯಲಿದೆ ಎಂದು ಶ್ರೀಗಳು ನುಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿ ಪುತ್ತೂರಿನಲ್ಲಿ ಭಾರತೀಯ ಗೋ ಪರಿವಾರ ರಚನೆಯಾಗುತ್ತಿದೆ. ಇದಕ್ಕೆ ಕಾರಣ ಪುತ್ತೂರು ಎಂದು ಇಡೀ ಜಿಲ್ಲೆಯಲ್ಲಿ ಧರ್ಮ ರಕ್ಷಣೆಯ ಕೇಂದ್ರವಾಗಿದೆ. ಇದು ಗೋ ರಕ್ಷಣೆ ವಿಚಾರದಲ್ಲೂ ಶಕ್ತಿ ಕೇಂದ್ರವಾಗಲಿ. ಜಿಲ್ಲೆಯ ಎಲ್ಲ ಕಡೆ ಮತ್ತು ಪಕ್ಕದ ಕೇರಳಕ್ಕೂ ಇದು ಪ್ರಭಾವ ಬೀರಲಿ ಎಂದು ಹೇಳಿದ ಸ್ವಾಮೀಜಿ, ಕೇರಳ ಕರಾಳ ಕೇರಳವಾಗಿದೆ. ನಡುರಸ್ತೆಯಲ್ಲಿ ಗೋವನ್ನು ವಧೆ ಮಾಡುವಷ್ಟರ ಮಟ್ಟಿಗೆ ಅಲ್ಲಿನ ಪರಿಸ್ಥಿತಿ ಬೆಳೆದಿರುವುದು ದುರಂತ ಎಂದರು.
ಪುತ್ತೂರು ಗೋ ಪರಿವಾರದ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಮತ್ತು ಅವರ ತಂಡಕ್ಕೆ ಸ್ವಾಮೀಜಿ ಅವರು ಫಲ ಮಂತ್ರಾಕ್ಷತೆ ನೀಡಿ ಆಶೀರ್ವಚಿಸಿ ಗೋ ದೀಕ್ಷೆ ನೀಡಿದರು. ಉಪಾಧ್ಯಕ್ಷರಾಗಿ ಜಯಂತ ನಡುಬೈಲ್, ರವಿ ಮುಂಗ್ಲಿಮನೆ, ಸಾಜ ರಾಧಾಕೃಷ್ಣ ಆಳ್ವಾ, ಶಶಿಕುಮಾರ್ ಬಾಲ್ಯೊಟ್ಟು, ಭವಿನ್ ಶೇಟ್, ಪ್ರಧಾನ ಕಾರ್ಯದರ್ಶಿಯಾಗಿ ಜಯಾನಂದ್ ಸೇರಿದಂತೆ ಒಟ್ಟು ೧೮ ವಿಭಾಗಗಳ ೩೫ ಪದಾಧಿಕಾರಿಗಳ ಪಟ್ಟಿಯನ್ನು ಈ ಸಂದರ್ಭ ಪ್ರಕಟಿಸಲಾಯಿತು.ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬೀಫ್ ಫೆಸ್ಟ್ ಮಾಡಲು ಕೆಲ ಸಂಘಟನೆಗಳು ಮುಂದಾದಾಗ ನಮ್ಮ ಹೃದಯ ಕಲುಕಿ ಹೋಯಿತು. ಬೀಫ್ ಫೆಸ್ಟ್‌ನ ಹೆಸರಿನಲ್ಲಿ ಒಂದು ವೇಳೆ ಬೆಂಗಳೂರು ಟೌನ್‌ಹಾಲ್ ಎದುರು ಗೋಹತ್ಯೆ ಏನಾದರೂ ನಡೆದು ಹೋದರೆ ನಾವೆಲ್ಲ ಇದ್ದೂ ಸತ್ತಂತೆ ಎಂದೆನಿಸಿತು. ಹೇಗಾದರೂ ಅದನ್ನು ತಡೆಯಬೇಕೆಂದು ಬೆಂಗಳೂರಿನ ಭಾರತೀಯ ಗೋಪರಿವಾರದ ಕಾರ್ಯಕರ್ತರಿಗೆ ಸೂಚನೆ ನೀಡಿದೆವು. ೧೯ ಸಂಘಟನೆಗಳು ಸೇರಿಕೊಂಡು ಅಂದು ಬೀಫ್ ಫೆಸ್ಟ್‌ಗೆ ಬದಲಾಗಿ ಗೋ ಪೂಜೆ ಏರ್ಪಡಿಸಿದೆವು. ಕೊನೆಗೂ ಬೀಫ್ ಫೆಸ್ಟ್ ತಡೆಯುವಲ್ಲಿ ಯಶಸ್ವಿಯಾದೆವು. ಒಂದು ವಾರದಲ್ಲಿ ಮಿಲ್ಕ್ ಫೆಸ್ಟ್ ಮಾಡಿದೆವು. ಆಗ, ಗೋರಕ್ಷಣೆಗಾಗಿಯೇ ಕೆಲಸ ಮಾಡಬಲ್ಲ ಸಂಘಟನೆ ಬೇಕೆಂದೆನಿಸಿತು. ಅದರಂತೆ ಈಗ ಎಲ್ಲ ಕಡೆ ಭಾರತೀಯ ಗೋ ಪರಿವಾರ ರಚನೆ ಮಾಡುತ್ತಿದ್ದೆವೆ. ಇದು ಗ್ರಾಮ ಮಟ್ಟದಿಂದ ರಾಷ್ಟ್ರಮಟ್ಟದವರೆಗೂ ಇರಲಿದೆ. ಈ ಸಂಘಟನೆ ಕೇವಲ ಗೋರಕ್ಷಣೆ ಕೆಲಸ ಮಾತ್ರ ಮಾಡಲಿದೆ ಮತ್ತು ಗೋರಕ್ಷಣೆಯೆ ಎಲ್ಲ ಕೆಲಸವನ್ನೂ ಮಾಡಲಿದೆ ಎಂದು ಶ್ರೀಗಳು ನುಡಿದರು.

Related posts

Leave a Reply